ಭಾರತೀಯ ಬೌದ್ಧ ಮಹಾಸಭಾ ಸಕ್ರಿಯ, ಬುದ್ಧಿಸ್ಟ್ ಒಕ್ಕೂಟ ರಚನೆಗೆ ವಿರೋಧ

KannadaprabhaNewsNetwork | Published : Jul 6, 2024 12:45 AM

ಸಾರಾಂಶ

ರಾಜ್ಯದಲ್ಲಿ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ದರ್ಶನ್ ಸೋಮಶೇಖರ್ ನೇಮಕಗೊಂಡು ಮಳವಳ್ಳಿ ತಾಲೂಕಿನ ಚಾಚನಹಳ್ಳಿಯಲ್ಲಿ ಬುದ್ಧರ ಪ್ರತಿಮೆಯನ್ನು ನಿರ್ಮಾಣ ಮಾಡುವುದರ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಮುಂದುವರೆಸುತ್ತಾ ಬರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬೌದ್ಧ ಧರ್ಮವನ್ನು ಬಲಿಷ್ಠಗೊಳಿಸಲು ಡಾ. ಬಿ.ಆರ್.ಅಂಬೇಡ್ಕರ್ ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಪರ್ಯಾಯವಾಗಿ ಸ್ಥಾಪಿಸುತ್ತಿರುವ ಬುದ್ಧಿಸ್ಟ್ ಒಕ್ಕೂಟದ ರಚನೆಗೆ ವಿರೋಧ ವ್ಯಕ್ತಪಡಿಸುವುದಾಗಿ ಮಾರ್ಕಾಲು ನಟರಾಜ್ ತಿಳಿಸಿದರು.

ಪಟ್ಟಣದ ಮಾಜಿ ಸಚಿವ ಬಿ.ಸೋಮಶೇಖರ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಬೌದ್ಧ ಮಹಾಸಭಾವನ್ನು ಡಾ.ಬಿ.ಆರ್.ಅಂಬೇಡ್ಕರ್‌ ಸ್ಥಾಪಿಸುವುದರ ಜೊತೆಗೆ ನೋಂದಣಿ ಮಾಡಿಸಿದ್ದಾರೆ. ಪ್ರಸ್ತುತ ಮೀರಾತಾಯಿ ಅಂಬೇಡ್ಕರ್ ರಾಷ್ಟ್ರೀಯ ಅಧ್ಯಕ್ಷರಾಗಿ, ಡಾ. ಭೀಮರಾವ್ ಯಶವಂತ್‌ರಾವ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ದರ್ಶನ್ ಸೋಮಶೇಖರ್ ನೇಮಕಗೊಂಡು ಮಳವಳ್ಳಿ ತಾಲೂಕಿನ ಚಾಚನಹಳ್ಳಿಯಲ್ಲಿ ಬುದ್ಧರ ಪ್ರತಿಮೆಯನ್ನು ನಿರ್ಮಾಣ ಮಾಡುವುದರ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಮುಂದುವರೆಸುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.

ಬೌದ್ಧ ಮಹಾಸಭಾ ದೇಶಾದ್ಯಂತ ಬೌದ್ಧ ಧರ್ಮವನ್ನು ಗಟ್ಟಿಗೊಳಿಸುವ ಜೊತೆಗೆ ಲಕ್ಷಾಂತರ ಮಂದಿ ಬೌದ್ಧಧರ್ಮ ಸ್ವೀಕರಿಸುವ ರೀತಿ ಕಾರ್ಯ ನಿರ್ವಹಿಸುತ್ತಿರುವ ಮಧ್ಯೆ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ ಸ್ಥಾಪಿಸುವ ಮೂಲಕ ಗೊಂದಲ ಸೃಷ್ಟಿಸಲು ಹೊರಟಿರುವುದು ಸರಿಯಲ್ಲ ಎಂದರು.

ಬುದ್ಧರ ಸಂಬಂಧಪಟ್ಟ ಕಾರ್ಯಕ್ರಮಗಳು ಅಂಬೇಡ್ಕರ್‌ರವರು ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾದ ಅಡಿಯಲ್ಲಿಯೇ ಒಗ್ಗಟ್ಟಿನಲ್ಲಿ ನಡೆಯಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ತಿಳಿಸಿದರು.

ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ತಾಲೂಕು ಅಧ್ಯಕ್ಷ ವಕೀಲ ಮೋಹನ್‌ ಕುಮಾರ್ ಮಾತನಾಡಿ, ಬೌದ್ಧ ಮಹಾಸಭಾವು ಭಾರತ ದೇಶದಲ್ಲಿ ಅಲ್ಲದೇ ವಿದೇಶದಲ್ಲಿಯೂ ಧರ್ಮ ಪ್ರಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿಯೂ ಯುವ ಘಟಕದ ವತಿಯಿಂದ ರಾಜ್ಯಾಧ್ಯಕ್ಷ ದರ್ಶನ್ ಸೋಮಶೇಖರ್ ನೇತೃತ್ವದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದರು.

ಗ್ರಾಮ ಮಟ್ಟದಲ್ಲಿಯೇ ಸದಸತ್ವ ನೋಂದಣಿ ಮಾಡಿ ಹೆಚ್ಚು ಮಂದಿ ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುವಂತೆ ಶ್ರಮಿಸಲಾಗುತ್ತಿದೆ. ಮಹಾಸಭಾದ ಪರ್ಯಾಯವಾಗಿ ಯಾವ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲಾ ಬುದ್ಧಿಷ್ಟ್ ಒಕ್ಕೂಟವನ್ನು ಸ್ಥಾಪಿಸುತ್ತಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.

ಬೌದ್ಧ ಧರ್ಮದ ವಿಚಾರವಾಗಿ ಹಲವು ಒಕ್ಕೂಟ ಅಥವಾ ಸಂಘ ಸ್ಥಾಪನೆಯಾದರೆ ಒಗ್ಗಟ್ಟು ಎನ್ನುವುದೇ ಇಲ್ಲದಂತಾಗುತ್ತದೆ. ಬುದ್ಧರನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬರೂ ಭಾರತೀಯ ಬೌದ್ಧ ಮಹಾ ಸಭಾದಡಿಯಲ್ಲಿಯೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶೆಟ್ಟಹಳ್ಳಿ ಚಂದ್ರಶೇಖರ್, ಹಲಸಹಳ್ಳಿ ಕೃಷ್ಣ, ಸಿದ್ದರಾಜು. ಶ್ರೀಧರ್,ಸಂದೇಶ್, ಜಯಶಂಕರ್, ವೆಂಕಟೇಶ್, ರಾಜಶೇಖರ್ ಸೇರಿ ಇತರರು ಇದ್ದರು.

Share this article