ಭಟ್ಕಳದ ಒಳಚರಂಡಿ ಅವ್ಯವಸ್ಥೆಗೆ ಮನೆ ಬಿಟ್ಟರು

KannadaprabhaNewsNetwork | Published : Nov 28, 2023 12:30 AM

ಸಾರಾಂಶ

ಗೌಸಿಯಾ ಸ್ಟ್ರೀಟ್ ನಲ್ಲಿ ನಿರ್ಮಾಣ ಮಾಡಿದ ವೆಟ್‌ವೆಲ್ ನಿರ್ವಹಣೆಯಲ್ಲಿ ಮಾತ್ರ ಪುರಸಭೆ ಎಡವಿದೆ. ದಿನದಿಂದ ದಿನಕ್ಕೆ ಸಂಗ್ರಹವಾಗುವ ಒಳಚರಂಡಿ ನೀರು ಅಲ್ಲಿಯೇ ನಿಂತು ಇಡೀ ಪ್ರದೇಶವೇ ದುರ್ನಾತಪೀಡಿತ ಪ್ರದೇಶವಾಯಿತು.

ಭಟ್ಕಳ:

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆಗೆ ಜನತೆ ರೋಸಿ ಹೋಗಿದ್ದಾರೆ. ಹಲವರು ದುರ್ನಾತ ಸಹಿಸಿಕೊಳ್ಳಲು ಆಗದೆ ಮನೆ ಬಿಟ್ಟು ಹೋಗಿದ್ದರೆ, ಕುಡಿಯುವ ನೀರಿನ ನೂರಾರು ಬಾವಿಗಳಲ್ಲಿ ಒಳಚರಂಡಿ ನೀರು ಸೇರಿ ಕಲುಷಿತಗೊಂಡಿವೆ.

ಕಳೆದ 15 ವರ್ಷಗಳ ಹಿಂದೆ ಎಡಿಬಿ ನೆರವಿನಡಿಯಲ್ಲಿ ಕುಡ್ಸೆಂಪ್ ವತಿಯಿಂದ ನಿರ್ಮಿಸಲಾದ ಒಳಚರಂಡಿ ಕಾಮಗಾರಿ ಏನೋ ಆಗಿದೆ. ಆದರೆ ಕೆಲವೆಡೆ ಅಸಮರ್ಪಕ ಕಾಮಗಾರಿ ಆಗಿದ್ದರಿಂದ ಒಳಚರಂಡಿ ನೀರು ಬಾವಿಗೆ ನುಗ್ಗಿ ಜನರು ಇಂದಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಜನರು ಪುರಸಭೆಗೆ ಒಳಚರಂಡಿ ಯೋಜನೆ ಯಾಕಾದರೂ ಬಂತು ಎನ್ನುವ ಆಕ್ರೋಶದ ಪ್ರಶ್ನೆ ಕೇಳುತ್ತಿದ್ದಾರೆ.

ಅಂದು ಪಟ್ಟಣದ ಗೌಸಿಯಾ ಸ್ಟ್ರೀಟ್‌ನಲ್ಲಿ ವೆಟ್‌ವೆಲ್ ನಿರ್ಮಿಸಿ ಅಲ್ಲಿಂದ ಪಂಪ್ ಮೂಲಕ ನೀರನ್ನು ಮೇಲಕ್ಕೆತ್ತಿ ವೆಂಕಟಾಪುರದಲ್ಲಿರುವ ಒಳಚರಂಡಿ ನೀರು ಸಂಗ್ರಹಣಾ ಘಟಕಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರಂಭದ ಕೆಲವು ತಿಂಗಳು ಎಲ್ಲವೂ ಸುಸೂತ್ರವಾಗಿದ್ದರೂ ಸಹ ನಿಧಾನವಾಗಿ ಪಂಪಿಂಗ್ ವ್ಯವಸ್ಥೆ ವಿಫಲವಾಗಿತ್ತು.

ಆನಂತರ ಬಹುಕೋಟಿ ವೆಚ್ಚದಿಂದ ಮಾಡಲಾದ ಎಡಿಬಿ ಯೋಜನೆಯೂ ಹಳ್ಳ ಹಿಡಿದು ಮಳೆಗಾಲದಲ್ಲಿ ಒಳಚರಂಡಿ ಚೇಂಬರ್‌ನಿಂದ ನೀರು ಹೊರಕ್ಕೆ ಬಂದರೆ, ಬೇಸಿಗೆಯಲ್ಲಿ ಒಳಚರಂಡಿಯ ನೀರು ಬಾವಿಗೆ ಸೇರಲಾರಂಭಿಸಿದ್ದು ಜನರ ನಿದ್ದೆಗೆಡಿಸುವಂತೆ ಮಾಡಿತ್ತು. ಆಕ್ರೋಶಗೊಂಡ ಜನರು ಒಳಚರಂಡಿಯ ಚೇಂಬರ್‌ಗಳನ್ನು ಕೆಂಪು ಇಟ್ಟಿಗೆಗಳಿಂದ ಕಟ್ಟಲಾಗಿದ್ದು, ಕಾಂಕ್ರೀಟ್‌ನಿಂದ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ನಂತರ ಹಲವಾರು ಚೇಂಬರ್‌ಗಳನ್ನು ಪುರಸಭೆಯು ನಿರ್ಮಾಣ ಮಾಡುವಾಗ ಕಾಂಕ್ರೀಟ್ ಚೇಂಬರ್‌ಗಳನ್ನೇ ಮಾಡಿತು. ಆದರೆ ಗೌಸಿಯಾ ಸ್ಟ್ರೀಟ್ ನಲ್ಲಿ ನಿರ್ಮಾಣ ಮಾಡಿದ ವೆಟ್‌ವೆಲ್ ನಿರ್ವಹಣೆಯಲ್ಲಿ ಮಾತ್ರ ಪುರಸಭೆ ಎಡವಿದೆ. ದಿನದಿಂದ ದಿನಕ್ಕೆ ಸಂಗ್ರಹವಾಗುವ ಒಳಚರಂಡಿ ನೀರು ಅಲ್ಲಿಯೇ ನಿಂತು ಇಡೀ ಪ್ರದೇಶವೇ ದುರ್ನಾತಪೀಡಿತ ಪ್ರದೇಶವಾಯಿತು. ಅಕ್ಕಪಕ್ಕದಲ್ಲಿರುವ ಕೆಲವು ಮನೆಯವರು ಇದೇ ಕಾರಣದಿಂದ ಮನೆಯನ್ನೇ ಬಿಟ್ಟು ಬೇರೆಡೆ ತೆರಳಿ ಪುರಸಭೆಗೆ ಮತ್ತು ಒಳಚರಂಡಿ ಅವ್ಯವಸ್ಥೆಗೆ ಹಿಡಿ ಶಾಪ ಹಾಕಲಾರಂಭಿಸಿದರು.

ಪುರಸಭೆಯ ನಿರ್ವಹಣೆಗೆಂದು ಇದ್ದ ಪಂಪ್ ಕೈಕೊಟ್ಟರೆ, ಪರ್ಯಾಯ ಪಂಪ್ ಇಲ್ಲದೇ ಹಲವು ತಿಂಗಳಿಂದ ಹೊಲಸು ನೀರು ಶರಾಬಿ ಹೊಳೆ ಸೇರಿ ಹೊಳೆಯೂ ಕಲುಷಿತವಾಯಿತು. ಗೌಸೀಯಾ ಸ್ಟ್ರೀಟ್ ನ 100ಕ್ಕೂ ಅಧಿಕ ಬಾವಿಗಳು ಒಳಚರಂಡಿ ನೀರಿನ ಸೇರ್ಪಡೆಯಿಂದ ಹಾಳಾಗಿದ್ದು ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಇದೀಗ ಇವರಿಗೆ ಪುರಸಭೆ ನೀರೇ ಆಧಾರ.

ಕಳೆದ 10 ವರ್ಷಗಳಿಂದ ಗೌಸೀಯಾ ಸ್ಟ್ರೀಟ್‌ನಲ್ಲಿ ಸಮಸ್ಯೆ ಇದ್ದು ಸ್ಥಳಕ್ಕೆ ಸಚಿವರು, ಹಿರಿಯ ಅಧಿಕಾರಿಗಳು ಬಂದು ಹೋದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಡೆಸಿದ ಸಭೆಯಲ್ಲಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಪಟ್ಟಣದ ಒಳಚರಂಡಿ ಅವ್ಯವಸ್ಥೆ ಸರಿಪಡಿಸಿದ ನಂತರವೇ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಸೂಚಿಸಿದ್ದಾರೆ. ನಗರೋತ್ಥಾನದಲ್ಲಿ ಮತ್ತೆ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದ್ದು, ಹಳೆಯ ವ್ಯವಸ್ಥೆ ಸರಿಪಡಿಸಬೇಕಾಗಿದೆ.

ಪುರಸಭೆಯ ಗೌಸಿಯಾ ಸ್ಟ್ರೀಟ್‌ನಲ್ಲಿರುವ ವೆಟ್‌ವೆಲ್ ನೀರು ವೆಂಕಟಾಪುರದ ಶುದ್ಧೀಕರಣ ಘಟಕಕ್ಕೆ ಪಂಪ್ ಆಗಬೇಕಾಗಿದೆ. ಆದರೆ, ಆ ಪಂಪ್ ಹಾಳಾಗಿದ್ದು ಹೊಲಸು ನೀರು ನೇರವಾಗಿ ಶರಾಬಿ ಹೊಳೆಗೆ ಸೇರುತ್ತಿದೆ. ನೀರು ಕಲುಷಿತಗೊಂಡು ಪರಿಸರ ಹಾಳಾಗಿದ್ದು ಅಂತರ್‌ಜಲ ಕೂಡಾ ಹಾಳಾಗುವ ಸಾಧ್ಯತೆ ಇದೆ. ನೇರವಾಗಿ ಶರಾಬಿ ಹೊಳೆಗೆ ಹೊಲಸು ನೀರನ್ನು ಬಿಡುತ್ತಿರುವುದನ್ನು ತಪ್ಪಿಸಲು ತಂತ್ರಜ್ಞರ ತಂಡ ಕರೆಯಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಪುರಸಭೆ ಸದಸ್ಯ ಫಯ್ಯಾಜ್ ಮುಲ್ಲಾ ಹೇಳಿದರು.

Share this article