ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ-ಬೊಮ್ಮಾಯಿ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಬರಿ ಖುರ್ಚಿಯ ಕಚ್ಚಾಟ ನಡೆದಿದೆ. ಇಷ್ಟು ಅನುಭವ ಇರುವ ಸಿಎಂ, ಡಿಸಿಎಂ, ಮಂತ್ರಿಗಳಿದ್ದರೂ ಖುರ್ಚಿಗಾಗಿ ಕಿತ್ತಾಟ ಮಾಡುವುದು ಕರ್ನಾಟಕದ ಹಿತದೃಷ್ಟಿಯಿಂದ ಸರಿ ಅಲ್ಲ. ಈ ಸರ್ಕಾರದ ಚಟುವಟಿಕೆಯನ್ನು ಜನಸಾಮಾನ್ಯರು ಅತ್ಯಂತ ಬೇಸರದಿಂದ ನೋಡುತ್ತಿದ್ದಾರೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ: ರಾಜ್ಯ ಸರ್ಕಾರದಲ್ಲಿ ಬರಿ ಖುರ್ಚಿಯ ಕಚ್ಚಾಟ ನಡೆದಿದೆ. ಇಷ್ಟು ಅನುಭವ ಇರುವ ಸಿಎಂ, ಡಿಸಿಎಂ, ಮಂತ್ರಿಗಳಿದ್ದರೂ ಖುರ್ಚಿಗಾಗಿ ಕಿತ್ತಾಟ ಮಾಡುವುದು ಕರ್ನಾಟಕದ ಹಿತದೃಷ್ಟಿಯಿಂದ ಸರಿ ಅಲ್ಲ. ಈ ಸರ್ಕಾರದ ಚಟುವಟಿಕೆಯನ್ನು ಜನಸಾಮಾನ್ಯರು ಅತ್ಯಂತ ಬೇಸರದಿಂದ ನೋಡುತ್ತಿದ್ದಾರೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೀಳುತ್ತದೆ ಎಂದು ಬಸವರಾಜ ಬೊಮ್ಮಾಯಿ ಹಗಲುಗನಸು ಕಾಣುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ಥಿತಿ ಬಗ್ಗೆ ಯೋಚನೆ ಮಾಡಲಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್‌ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸಲೀಂ ಅಹ್ಮದ್‌ ವಿಧಾನಸಭೆಯಲ್ಲಿ ಏನು ಆಗುತ್ತೆ? ಮಂತ್ರಿ ಮಂತ್ರಿಗಳ ನಡುವೆ ಏನಾಗುತ್ತದೆ? ಸಿಎಂ, ಡಿಸಿಎಂ ನಡುವೇ ಏನಾಗುತ್ತಿದೆ ಎಂದು ತಿಳಿದುಕೊಳ್ಳಲಿ. ಅವರಿಗೆ ಎಲ್ಲವೂ ಗೊತ್ತಿದ್ದು ಹೀಗೆ ಹೇಳುತ್ತಿದ್ದಾರೋ ಅಥವಾ ಅವರ ಗಮನಕ್ಕೆ ಇಲ್ಲವೊ ನನಗೆ ಗೊತ್ತಿಲ್ಲ. ಸಲೀಂ ಅಹ್ಮದ್‌ ಬಗ್ಗೆ ನನಗೆ ಕನಿಕರ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದ್ದರೂ ಹೀಗೆ ಹೇಳಿದರೆ ನಾನು ಏನು ಹೇಳಲಿ ಎಂದರು.ಶಾಸಕರಿಗೆ ನೀಡುವ ಭತ್ಯೆ ಚಹಾ ಕುಡಿಯಲಿಕ್ಕೆ ಸಾಲುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯು.ಟಿ. ಖಾದರ್ ಯಾವ ಆಧಾರದ ಮೇಲೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಎಂದರು.ಡೆಂಘೀ ಮುನ್ನೆಚ್ಚರಿಕೆ ವಹಿಸಿ:ರಾಜ್ಯದಲ್ಲಿ ಡೆಂಘೀ ಮಹಾಮಾರಿ ಹಾವಳಿ ಕುರಿತು ಮಾತನಾಡಿದ ಅವರು, ಒಂದು ಕಾಲದಲ್ಲಿ ಹೇಗೆ ಕಾಲರಾ, ಮಲೇರಿಯಾ ಹೇಗೆ ಬಂದಿತ್ತೊ ಹಾಗೆ ಈಗ ಡೆಂಘೀ ಬಂದಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಬೇಕು, ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಡೆಂಘೀ ಉಲ್ಬಣವಾಗುತ್ತದೆ. ಆಗ ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ಡೆಂಘೀ ಪ್ರಕರಣದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು, ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನಾನು ಡಿಸಿ, ಡಿಎಚ್ಒ, ಡಿಎಸ್‌ ಅವರಿಗೆ ಆಗ್ರಹ ಮಾಡುತ್ತೇನೆ ಎಂದರು.ಡೆಂಘೀ ಡೆತ್ ಕೇಸ್ ಮರೆಮಾಚುತ್ತಿದ್ದಾರೆ ಎಂಬ ಆರೋಪದ‌ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡೆಂಘೀಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯ ಸಂಖ್ಯೆ ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಡೆಂಘೀ ಸೋಂಕಿತರು ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವುಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

Share this article