ರಾಮನಗರ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂ ಸ್ವಾಧೀನಕ್ಕೆ ಕೊನೆಗೂ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆ ಪ್ರಕಟಿಸಲಾದ ನಂತರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅನುಮತಿ ಇಲ್ಲದೇ ಸದರಿ ಜಮೀನುಗಳನ್ನು ವಿಲೇ ಮಾಡುವ, ಒಪ್ಪಂದ ಕ್ರಯ, ಕರಾರು, ಭೋಗ್ಯ ಅಡಮಾನ(ಲೀಸ್), ಅದಲು-ಬದಲು, ಭೂಪರಿವರ್ತನೆ, ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆಯ ನಂತರ ಕಟ್ಟಡ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸೂಚಿಸಲಾಗಿದೆ.
ಈ ಯೋಜನೆಯ ವಿವರ ಹಾಗೂ ನಕ್ಷೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಾಮನಗರ ರವರ ಕಚೇರಿಯಲ್ಲಿ ಇಡಲಾಗಿದೆ. ಅಧಿಸೂಚಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶಗಳು, ಅಭಿವೃದ್ಧಿ ಹೊಂದಿದ್ದ ಪ್ರದೇಶಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಯಥಾಸ್ಥಿತಿಯಂತೆ ಕಾಯ್ದಿರಿಸುವ ಕುರಿತಂತೆ ರಾಮನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಸಮಿತಿಯ ಶಿಫಾರಸ್ಸಿನ ಅನುಸಾರ ಪರಿಶೀಲಿಸಿ ತೀರ್ಮಾನಿಸಲಾಗುವುದು. ಆಕಾರ್ ಬಂದ್ ಹಾಗೂ ಆರ್‌ಟಿಸಿ ವಿಸ್ತೀರ್ಣದ ವ್ಯತ್ಯಾಸವಿದ್ದಲ್ಲಿ ಆಕಾರ್ ಬಂದ್ ವಿಸ್ತೀರ್ಣವೇ ಅಂತಿಮವೆಂದು ಪರಿಗಣಿಸಲಾಗುವುದು.ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಭೂ ಮಂಜೂರಾತಿಯಾಗಿ ದುರಸ್ತಿಯಾಗದೆ ಇರುವ ಪ್ರಕರಣಗಳಲ್ಲಿ ಭೂ ಮಾಲೀಕತ್ವದ ವಿಸ್ತೀರ್ಣದ ನಿರ್ಧರಣೆಯನ್ನು ಸರ್ಕಾರದ ಸುತ್ತೋಲೆಗಳ ನಿರ್ದೇಶನಗಳನುಸಾರ ನಿರ್ಣಯಿಸಲಾಗುತ್ತದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಆಯುಕ್ತರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಾಮನಗರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲೀ ಅಡ್ಡಪಡಿಸುವುದಾಗಲೀ ಮಾಡತಕ್ಕದ್ದಲ್ಲದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ.
ಬಾಕ್ಸ್ ................
ಬಿಡದಿ ಬಳಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2024ರ ನ.18ರಂದು ಗ್ರೇಟರ್ ಬೆಂಗಳೂರು - ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಿತು. ಬೆಂಗಳೂರು ಅಜ್ಗರ್ ಅಲಿ ರಸ್ತೆಯಲ್ಲಿದ್ದ ಬಿಎಂಆರ್‌ಡಿಎ ಕಚೇರಿಯಲ್ಲಿದ್ದ ಪ್ರಾಧಿಕಾರದ ಕಚೇರಿಯನ್ನು ರಾಮನಗರ ಕಂದಾಯ ಭವನದಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬಿಡದಿ ಬಳಿ ಉಪನಗರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಧಿಕಾರದ ವ್ಯಾಪ್ತಿ ಮತ್ತಷ್ಟು ವಿಸ್ತಾರ:
ಬಾಕ್ಸ್ ...............
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ವತಿಯಿಂದ ಟೌನ್‌ಶಿಪ್ ನಿರ್ಮಾಣಕ್ಕೆ ರಾಮನಗರ ತಾಲೂಕಿನ ಬಿಡದಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೋರಾಟ ಸಮಿತಿಯನ್ನು ರಚನೆ ಮಾಡಿಕೊಂಡು ಬಿಡದಿಯಿಂದ ರಾಮನಗರದವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.
ಕೋಟ್ ..................ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಗಳಿದ್ದಲ್ಲಿ 30 ದಿನಗಳೊಳಗೆ ಖಚಿತ ದಾಖಲೆಗಳೊಂದಿಗೆ ಸಲ್ಲಿಸಬಹುದು. ರೈತರ ದೂರು ದುಮ್ಮಾನಗಳನ್ನು ಸ್ವೀಕಸಿ, ಅವುಗಳನ್ನು ಬಗೆಹರಿಸಲು ರಾಮನಗರದಲ್ಲಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಯಾರೂ ಬೇಕಾದರು ಬಂದು ಮುಕ್ತವಾಗಿ ಚರ್ಚೆ ನಡೆಸಬಹುದು. ರೈತರ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಟಾನಗೊಳ್ಳಲಿದೆ.
-ಗಾಣಕಲ್ ನಟರಾಜು, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ