ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಜಮೀನಿನ ಸಮಸ್ಯೆ, ಕೆರೆಗಳು ಒಡೆದು ಜಮೀನು ಹಾಳು, ರಸ್ತೆ ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆ, ಮತದಾರರ ಗುರುತಿನ ಚೀಟಿ, ಕಾರ್ಖಾನೆಯಲ್ಲಿ ಮಾಡಿದ ಕೆಲಸದ ಕೂಲಿ ಹಣ ಬಿಡುಗಡೆ, ಕಾಡು ಹಂದಿಯಿಂದ ರೈತರಿಗಾಗುತ್ತಿರುವ ಅನ್ಯಾಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆ ಹರಿಸಿಕೊಡುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮುಂದೆ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.ನಗರದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಜನ ಸ್ಪಂದನಾ ಸಭೆಯಲ್ಲಿ ನಗರ ಪ್ರದೇಶ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು, ಮಕ್ಕಳು, ರೈತರು ತಮ್ಮ ಸಮಸ್ಯೆಗಳು ಪರಿಹರಿಸುವಂತೆ ಬೇಡಿಕೊಂಡರು. ಎಲ್ಲರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಡಿಸಿ ಗೋವಿಂದರೆಡ್ಡಿ ಸಮಸ್ಯೆ ಆಲಿಸಿ ಅವರ ವ್ಯಾಪ್ತಿಯಲ್ಲಿ ಆಗುತ್ತಿದ್ದರೆ ಸಮಸ್ಯೆ ಬಗೆ ಹರಿಸುವಂತೆ ಸಂಬಂಧಿತರಿಗೆ ಮಾರ್ಗದರ್ಶನ ಮಾಡುತ್ತಿದ್ದರೆ ಕೆಲ ಸಮಸ್ಯೆಗಳನ್ನು ನಮ್ಮ ವ್ಯಾಪ್ತಿಯಲ್ಲಿ ಬರಲ್ಲ ಇಂತಹ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ಬಗೆ ಹರಿಸಿಕೊಳ್ಳುವಂತೆ ಬಂದ ಜನರಿಗೆ ಸಲಹೆ ನೀಡಿದರು.
ಪಹಣಿ, ಫೋಡಿ ಸೇರಿದಂತೆ ಸಣ್ಣ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಿಕೊಂಡುವಂತೆ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರೆ ಕೆಲ ಗಂಭೀರ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಹಾಗೂ ತಹಸೀಲ್ದಾರ್ ಶಾಂತಗೌಡ ಬಿರಾದಾರಗೆ ಸಲಹೆ ನೀಡಿದರು.ರೈತ ಮುಖಂಡ ಚಂದ್ರಶೇಖರ ಜಮಖಂಡಿ ಮಾತನಾಡಿ, ಬಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ ನೌಕರರ ವೇತನ ನೀಡಿಲ್ಲ. ಇದರಿಂದ ಅವರ ಕುಟುಂಬ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಕೃಷಿ, ಅರಣ್ಯ, ಜೆಸ್ಕಾಂ, ತಾಪಂ, ನಗರ ಸಭೆಯ ವ್ಯಾಪ್ತಿಗೆ ಒಳಪಟ್ಟ ಸಮಸ್ಯೆಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿದರು. ಕೆಲ ಮಹಿಳೆಯರು ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು. ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಭೇಟಿ ಮಾಡಿ ರೈತರಿಗಾಗುತ್ತಿರುವ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಹುಮನಾಬಾದ್ ಡಿವೈಎಸ್ಪಿ ಜೆ.ಎಸ್ ನ್ಯಾಮೇಗೌಡರ, ತಹಸೀಲ್ದಾರ್ ಶಾಂತಗೌಡ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಜನ ಸ್ಪಂದನಾ ಸಭೆಯಲ್ಲಿ ಜನರಿಂದ ಬಂದ 74 ಅರ್ಜಿಗಳನ್ನು ಆಯಾ ಇಲಾಖೆಯ ವ್ಯಾಪ್ತಿಗೆ ಬರುವ ಅರ್ಜಿಗಳನ್ನು ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ನಿಮ್ಮ ವ್ಯಾಪ್ತಿಯಲ್ಲಿ ಅರ್ಜಿಗಳು ಇತ್ಯರ್ಥ ಆದರೆ ಮಾಡಿ ಇತ್ಯರ್ಥ ಆಗದಿದ್ದರೆ ಅರ್ಜಿದಾರರಿಗೆ ಕಾರಣ ನೀಡಿ ಹಿಂಬರವಾಗಿ ನೀಡಬೇಕು ಹೊರತು ವಿನಾ ಕಾರಣ ನಿಮ್ಮ ಬಳಿಯೆ ಇಟ್ಟುಕೊಂಡು ಅವರಿಗೆ ಸತಾಯಿಸಬೇಡಿ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅಧಿಕಾರಿಗಳಿಗೆ ತಿಳಿಸಿದರು.