ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ಲೋಕಸಭೆಗೆ ಎರಡನೇ ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು ಬರುವ ಮೇ 7ರಂದು ಮತದಾನ ನಡೆದು ಜೂ. 4ರಂದು ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ.ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ 18,45,429 ಮತದಾರರು: ಬೀದರ್ ಲೋಕಸಭಾ ಕ್ಷೇತ್ರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಅಲ್ಲದೆ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳೂ ಒಳಗೊಂಡಂತೆ ಒಟ್ಟು 9,49,404 ಪುರುಷರು ಹಾಗೂ 8,95,931ಮಹಿಳೆಯರು ಹಾಗೂ 94 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು18.45,429 ಮತದಾರರು ಮತ ಚಲಾವಣೆಗೆ ಹಕ್ಕು ಪಡೆದಿದ್ದಾರೆ.
ಇನ್ನು ಬೀದರ್ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 7,19,677 ಪುರುಷ ಹಾಗೂ 6,80,721 ಮಹಿಳೆಯರು ಅಲ್ಲದೆ 45 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 14,00,443 ಮತದಾರರು ಇದ್ದರೆ ಆಳಂತ ಹಾಗೂ ಚಿಂಚೋಳಿ ಕ್ಷೇತ್ರಗಳ 2,29,727 ಪುರುಷರು ಹಾಗೂ 2,15,210 ಮಹಿಳೆಯರು ಹಾಗೂ 49 ಜನ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 4,44,986 ಮತದಾರರಿದ್ದಾರೆ.ಬೀದರ್ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 18-19 ವರ್ಷ ಒಳಗಿನ 15,448 ಯುವಕ ಹಾಗೂ 11269 ಯುವತಿಯರು ಸೇರಿದಂತೆ ಒಟ್ಟು 26,717 ಯುವ ಮತದಾರರು ಇದ್ದಾರೆ.
508 ಶತಾಯಿಷಿಗಳು, 20 ವರ್ಷಕ್ಕೂ ಹೆಚ್ಚು ವಯಸ್ಸಿನ ಒಬ್ಬ ಮತದಾರ: 100-109 ವರ್ಷದ ಶತಾಯುಷಿಗಳ 155 ಪುರುಷರು 353 ಮಹಿಳೆಯರು ಸೇರಿದಂತೆ ಪೈಕಿ 508 ಜನ ಇದ್ದರೆ 120ಕ್ಕೂ ಹೆಚ್ಚು ವಯೋಮಿತಿಯ ಒಬ್ಬ ಪುರುಷ ಈ ಬಾರಿಯ ಮತದಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಮತದಾರರ ಸಂಖ್ಯೆಯ ವಿವರದಲ್ಲಿ ತಿಳಿಸಲಾಗಿದೆ.2024 ಮತದಾನ ಕೇಂದ್ರಗಳು: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 1528 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದರೆ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಬೀದರ್ ಲೋಕಸಬಾ ಚುನಾವಣೆಗಾಗಿ 496 ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 2024 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಚೆಕ್‌ಪೋಸ್ಟ್‌ಗಳ ಮೇಲೆ ಜಿಲ್ಲಾಧಿಕಾರಿ, ಎಸ್‌ಪಿ ನಿಗಾ: ಇನ್ನು ಚುನಾವಣಾ ಆಯೋಗ ಘೋಷಿಸಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದು ತೆಲಂಗಾಣಾ, ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಪ್ರವೇಶಕ್ಕೂ ಮುನ್ನ ಚೆಕ್‌ಪೋಸ್ಟ್‌ಗಳ ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮ ನಡೆಯದಂತೆ ಕ್ರಮವಹಿಸಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ಅವರೊಟ್ಟಿಗೆ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಲಾರಂಭಿಸಿದ್ದಾರೆ.ಏ.12ರಂದು ಅಧಿಸೂಚನೆ ಪ್ರಕಟ: ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದರೆ ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 22 ಕೊನೆಯ ದಿನ. ಇನ್ನು ಮೇ 7ರಂದು ಮತದಾನ ನಡೆಯಲಿದ್ದು ಜೂನ್ 4ರಂದು ಮತ ಎಣಿಕೆ ನಡೆಯಲಿದೆ.