ಬೆಂಗಳೂರು: ನಗರಕ್ಕೆ ದೊಡ್ಡ ಕ್ಷಾಮ: ಐಐಎಸ್ಸಿ ಎಚ್ಚರಿಕೆ

KannadaprabhaNewsNetwork |  
Published : Mar 19, 2024, 01:48 AM ISTUpdated : Mar 19, 2024, 12:55 PM IST
ಕಾಂಕ್ರೀಟ್ ಕಾಡಾಗಿರುವ ಬೆಂಗಳೂರು | Kannada Prabha

ಸಾರಾಂಶ

ನೀರಿನ ಮೂಲಗಳನ್ನು ಕಾಪಾಡಿಕೊಳ್ಳದಿದ್ದರೆ ಮುಂದೆ ಬೆಂಗಳೂರಿಗೆ ಭಾರಿ ಗಂಡಾಂತರ ಕಾದಿದೆ ಎಂದು ಐಐಎಸ್ಸಿ ಎಚ್ಚರಿಕೆ ನೀಡಿದೆ. ಈ ಸಬಂಧ ಹಲವು ಶಿಫಾರಸ್ಸುಗಳನ್ನು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಮತ್ತು ಸುತ್ತಲಿನ ಕೆರೆಗಳನ್ನು ಸಂರಕ್ಷಿಸಿ, ಹಸಿರು ಹೊದಿಕೆಯನ್ನು ಪುನರ್‌ ಸ್ಥಾಪಿಸದಿದ್ದರೆ ಮುಂದಿನ ದಿನಗಳಲ್ಲಿ ಉದ್ಯಾನ ನಗರಿಗೆ ದೊಡ್ಡ ಜಲಕ್ಷಾಮ ತಪ್ಪಿದ್ದಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಎಚ್ಚರಿಕೆ ನೀಡಿದೆ.

ಅಂತರ್ಜಲ ಕುಸಿದು, ಕೊಳವೆಬಾವಿಗಳಲ್ಲಿ ನೀರು ಬತ್ತಿರುವುದರಿಂದ ಎದುರಾಗಿರುವ ಸಮಸ್ಯೆಯ ಕುರಿತು ಐಐಎಸ್ಸಿಯ ಪರಿಸರ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ಟಿ.ವಿ.ರಾಮಚಂದ್ರನ್, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ಬೆಂಗಳೂರಿಗೆ ಬೇಕಾಗುವ ನೀರಿನಲ್ಲಿ ಶೇಕಡ 45ರಷ್ಟು ಅಂತರ್ಜಲದಿಂದ ಲಭ್ಯವಾಗುತ್ತದೆ. ಅಂತರ್ಜಲ ಲಭ್ಯವಾಗಲು ಭೂಮಿಯ ಮೇಲ್ಮೈ ಮಣ್ಣು, ಗಿಡ-ಮರಗಳ ಸಹಿತ ಪರಿಸರ ಸ್ಪಂಜಿನಂತೆ ಇರಬೇಕು. 

ಸ್ಥಳೀಯ ಪ್ರಬೇಧದ ಸಸ್ಯಗಳ ಸಹಿತ ಹಸಿರಿನ ಹೊದಿಕೆ ಇರಬೇಕು. 1970ರಲ್ಲಿ ನಗರದಲ್ಲಿ ಶೇ.78ರಷ್ಟು ಹಸಿರು ಇತ್ತು. ಇಂದು ಶೇ.8ಕ್ಕೆ ಕುಸಿದಿದೆ. ಮತ್ತೊಂದೆಡೆ ಶೇ.86ರಷ್ಟು ನಗರ ಪ್ರದೇಶವನ್ನು ಕಟ್ಟಡಗಳೇ ಆಕ್ರಮಿಸಿಕೊಂಡಿವೆ. 

ಬೀಳುವ ಮಳೆ ನೀರು ರಾಜಕಾಲುವೆ ಮೂಲಕ ಹರಿದು ಹೋಗುತ್ತಿದೆ. ಇರುವ ಸ್ವಲ್ಪ ಪ್ರಮಾಣದ ಹಸಿರು ಇಷ್ಟು ದೊಡ್ಡ ನಗರಕ್ಕೆ ಅಂತರ್ಜಲ ಮರುಪೂರಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.ಜೌಗು ಪ್ರದೇಶದಿಂದ ನೀರು

ಸಾರಕ್ಕಿ ಕೆರೆ, ಜಕ್ಕೂರು ಕೆರೆ, ಸ್ಯಾಂಕಿ ಕೆರೆ ಸೇರಿದಂತೆ ಕೆಲವು ಕೆರೆಗಳ ಸುತ್ತಲಿನ ಪ್ರದೇಶಗಳಲ್ಲಿನ ಕೊಳವೆಬಾವಿಗಳಲ್ಲಿ ನೀರು ಬತ್ತಿಲ್ಲ. ಏಕೆಂದರೆ, ಇಂತಹ ಕೆಲವೇ ಕೆಲವು ಕೆರೆಗಳಿಗೆ ನೀರು ಸರಾಗವಾಗಿ ಹರಿದು ಬರಲು ವ್ಯವಸ್ಥೆ ಇದೆ. 

ಜಕ್ಕೂರು ಕೆರೆಗೆ ಜೌಗು ಪ್ರದೇಶ ನಿರ್ಮಿಸಲಾಗಿದ್ದು, ಶುದ್ಧೀಕರಣ ಘಟಕ ಇದೆ. ಹೀಗಾಗಿ, ಈ ಪ್ರದೇಶದ ಸುತ್ತ ನೀರಿಗೆ ಸಮಸ್ಯೆಯಾಗಿಲ್ಲ. ಸಾರಕ್ಕಿ ಕೆರೆಗೂ ಇದೇ ಮಾದರಿಯನ್ನು ಅನುಸರಿಸಲಾಗಿದೆ. 

ಬಳಸಿದ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವುದು ಮತ್ತು ಜೌಗು ಪ್ರದೇಶ ನಿರ್ಮಾಣ ನೀರಿನ ಸಮಸ್ಯೆಗೆ ಬಹುದೊಡ್ಡ ಪರಿಹಾರ ಒದಗಿಸುತ್ತದೆ ಎಂದು ಪ್ರೊ. ಟಿ.ವಿ.ರಾಮಚಂದ್ರನ್ ತಿಳಿಸಿದರು.ಕೈಗಾರಿಕೆಗಳು ಬೇರೆಡೆ ಸ್ಥಳಾಂತರ

ಹೊಸ ಕೈಗಾರಿಕೆ, ಉದ್ಯಮಗಳನ್ನು ರಾಜ್ಯದ ಬೇರೆ ನಗರಗಳಿಗೆ ಸ್ಥಳಾಂತರಿಸಬೇಕು. ಜನರು ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಬೇಕು. ಇದರಿಂದ ನೀರಿನ ಸಮಸ್ಯೆ ಜೊತೆಗೆ ಟ್ರಾಫಿಕ್ ಸಮಸ್ಯೆ, ಮಾಲಿನ್ಯ, ವಸತಿ ಸೇರಿದಂತೆ ಅನೇಕ ಸಮಸ್ಯೆಗೆ ಪರಿಹಾರ ದೊರಕುತ್ತದೆ.

ಐಐಎಸ್ಸಿ ಸಲಹೆಗಳು

  • ಕೆರೆಗಳ ಪುನಶ್ಚೇತನ, ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಯಲು ವ್ಯವಸ್ಥೆ ಮಾಡುವುದು.
  • ಕೆರೆಗೆ ಹೊಂದಿಕೊಂಡಂತೆ ಜೌಗು ಪ್ರದೇಶ ಅಭಿವೃದ್ಧಿ.
  • ಕೆರೆಗಳಿಗೆ ಕಲ್ಮಶ ನೀರು ಹರಿಯುವುದನ್ನು ತಡೆಯುವುದು.
  • ಪ್ರತಿ ವಾರ್ಡ್‌ನಲ್ಲಿ ತಲಾ 2 ಹೆಕ್ಟೇರ್ ಸ್ಥಳೀಯ ಪ್ರಬೇಧದ ಮರಗಳ ಉದ್ಯಾನ ನಿರ್ಮಾಣ.
  • ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ.
  • ಕೆರೆ ಬಫರ್ ವಲಯವನ್ನು ಸಂರಕ್ಷಿಸುವುದು, ಒತ್ತುವರಿ ತೆರವು.

ಮಳೆಯಿಂದಲೇ 15 ಟಿಎಂಸಿ ನೀರು ಲಭ್ಯಬೆಂಗಳೂರಿಗೆ ವರ್ಷಕ್ಕೆ 18 ಟಿಎಂಸಿ ನೀರಿನ ಅಗತ್ಯವಿದೆ. ಮಳೆಯಿಂದ 15 ಟಿಎಂಸಿ ನೀರು ಲಭ್ಯವಾಗುತ್ತದೆ. 

ಕೆರೆಗಳು, ಇಂಗು ಗುಂಡಿಗಳು, ಹಸಿರೀಕರಣದ ಮೂಲಕ ಅಂತರ್ಜಲ ಪುನಶ್ಚೇತನ ಮಾಡಿಕೊಂಡರೆ ಅರ್ಧಕ್ಕಿಂತ ಹೆಚ್ಚು ನೀರಿನ ಬೇಡಿಕೆಯನ್ನು ಮಳೆ ನೀರು ಪೂರೈಸುತ್ತದೆ. 

ಉಳಿದ ಬೇಡಿಕೆಯನ್ನು ಕಾವೇರಿ ನದಿ, ಮತ್ತಿತರ ಮೂಲಗಳಿಂದ ಜಲಮಂಡಳಿ ಪೂರೈಸುತ್ತದೆ ಎನ್ನುತ್ತಾರೆ ಪ್ರೊ. ಟಿ.ವಿ.ರಾಮಚಂದ್ರನ್.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ