ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಡೀ ಜಿಲ್ಲೆಯೇ ತಣ್ಣಗಾಗಿದೆ. ಅದರಲ್ಲೂ ಮಲೆನಾಡಂತೂ ಅಕ್ಷರಶ: ಶೀತಪೀಡಿತವಾಗಿದೆ. ಪುರ್ನವಸು ಮಳೆ ಮುಗಿದ ಕೂಡಲೇ ಕೇವಲ ಒಂದು ದಿನವಷ್ಟೇ ಬಿಡುವು ನೀಡಿದ್ದ ಮಳೆ ಮತ್ತೆ ತನ್ನ ಆರ್ಭಟ ತೋರುತ್ತಿದ್ದು, ಧೋ ಎಂದು ಸುರಿಯುತ್ತಿರುವ ಮಳೆಗೆ ನಗರದ ಜವೇನಹಳ್ಳಿ ಮಠದ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರವೊಂದು ಮಠದ ಕಟ್ಟಡದ ಮೇಲೆ ಉರುಳಿಬಿದ್ದಿದೆ.ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿರುವ ಸುಮಾರು ೭೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಜವೇನಹಳ್ಳಿ ಮಠದ ಮೇಲೆ ಬೃಹತ್ ಮರವೊಂದು ಉರುಳಿದ ಹಿನ್ನೆಲೆಯಲ್ಲಿ ಮಠದ ಕಲ್ಲಿನ ಕಟ್ಟಡ ಬಹುತೇಕ ಹಾನಿಗೀಡಾಗಿದ್ದು, ಸಂಘಮೇಶ್ವರ ಸ್ವಾಮಿ ದೇಗುಲದ ಗರ್ಭಗುಡಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಾಂಶ ಹೆಚ್ಚಾಗಿ ಈಗಾಗಲೇ ಅನೇಕ ಮರಗಳು ಕಳೆಗೆ ಬೀಳುತ್ತಿವೆ. ಮರ ಬೀಳುವ ವೇಳೆ ಏನಾದರೂ ಮಠದ ಒಳಗೆ ಭಕ್ತರು ಇದ್ದರೇ ಬಾರಿ ಅನಾಹುತವೇ ಆಗುತಿತ್ತು. ಆದರೇ ಮರ ಬಿದ್ದ ವೇಳೆ ಭಕ್ತರು ಗರ್ಭ ಗುಡಿಯ ದೂರದಲ್ಲಿ ಇದ್ದುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೆ ವೇಳೆ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿಯವರು ಹಾಗೂ ಸದ್ಭಕ್ತರು ಮಠದ ಮೇಲೆ ಬೃಹತ್ ಮರ ಬಿದ್ದಿರುವುದನ್ನು ವೀಕ್ಷಣೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಶ್ರೀ ಜವೇನಹಳ್ಳಿ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿರುವ ಸುಮಾರು ೭೦೦ ವರ್ಷಗಳ ಇತಿಹಾಸವಿರುವಂತಹ ಶ್ರೀ ಜವೇನಹಳ್ಳಿ ಮಠ ಇಂದು ದುಸ್ಥಿತಿಯಲ್ಲಿದೆ. ಹೆಚ್ಚಿನ ಮಳೆಯಿಂದ ಮಠದ ಬಳಿ ಇದ್ದಂತಹ ಮುನ್ನೂರು ವರ್ಷಗಳ ಹಳೆಯದಾದ ಬನ್ನಿ ಮರವೊಂದು ಮಠದ ಮೇಲೆ ಬಿದ್ದು ಹೆಚ್ಚು ಹಾನಿಯಾಗಿದೆ. ಈ ಮಠದ ದೇವಾಲಯವನ್ನು ಪುನರ್ ನಿರ್ಮಾಣ ಮಾಡಬೇಕಾಗಿರುವುದರಿಂದ ಎಲ್ಲಾ ಭಕ್ತರ ಸಹಕಾರ ಅಗತ್ಯವಿದೆ ಎಂದರು. ಈ ಮಠ ಹಾನಿ ಆಗಿರುವ ಬಗ್ಗೆ ಜಿಲ್ಲಾಡಳಿತ ತಾಲೂಕು ಆಡಳಿತವು ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಜಡಿ ಮಳೆ ಹಿಡಿದಿರುವುದರಿಂದ ಬಹಳ ಹಳೆಯ ಬೃಹತ್ ಮರ ಮಠದ ಮೇಲೆ ಬಿದ್ದಿರುವುದರಿಂದ ಮಠದ ಹಳೆಯ ಕಾಲದ ಕಟ್ಟಡದ ಕಲ್ಲುಗಳೆಲ್ಲಾ ಜರುಗಿದ್ದು, ಮಠದ ಒಳಗೆ ಮಳೆ ನೀರು ಸೋರುತ್ತಿದೆ. ಈ ಮಠವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ದುರಂತದಿಂದ ದೇವಸ್ಥಾನದ ಒಳಗೆ ಹೋಗಲು ಸ್ಥಳವಾಕಾಶ ಇಲ್ಲದೇ ನಮ್ಮ ಅರ್ಚಕರು ಹೊರಗಡೆಯೇ ಪೂಜೆ ಮಾಡಿದ್ದಾರೆ. ಶೀಘ್ರವೇ ಜಿಲ್ಲಾಡಳಿತ ಗಮನಹರಿಸಿ ದುರಸ್ತಿ ಮಾಡಿಸಲು ಮುಂದಾಗುವಂತೆ ಮನವಿ ಮಾಡಿದರು.ಕೃಷಿ ಚಟುವಟಿಕೆ ಸ್ಥಗಿತ:
ಗ್ರಾಮೀಣ ಭಾಷೆಯಲ್ಲಿ "ಅಸ್ಲೆ ಮಳೆ " ಎಂದು ಕರೆಯಲ್ಪಡುವ ಈ ಮಳೆಗೆ ಸಸ್ಲೆಲ್ಲಾ ಗಡ್ಡ ಏರಿದವಂತೆ ಎನ್ನುವ ಮಾತಿದೆ. ಸಸ್ಲು ಅಂದರೆ ಸಣ್ಣ ಮೀನುಗಳು ಎಂದರ್ಥ. ಅಂದರೆ ಈ ಮಳೆ ಅಷ್ಟು ಬಿರುಸಾಗಿರುತ್ತದೆ. ಮಳೆ ಹೊಡೆತಕ್ಕೆ ನೀರಿನ ಹರಿವು ಹೆಚ್ಚಾಗಿ ಸಣ್ಣಗಾತ್ರದ ಮೀನುಗಳೆಲ್ಲಾ ಎತ್ತರದ ಪ್ರದೇಶಕ್ಕೆ ಹತ್ತುತ್ತವೆ ಎಂದರ್ಥ. ಅಂತೆಯೇ ಈ ಮಳೆಯ ಬಿರುಸಿಗೆ ಇಡೀ ಕೃಷಿ ಚಟುವಟಿಕೆಯೇ ಸ್ತಬ್ಧವಾಗಿದೆ.ಇಪ್ಪತ್ತು ವರ್ಷಗಳ ಹಿಂದೆ ಸುರಿಯುತ್ತದ್ದ ತೀವ್ರತೆಯಲ್ಲಿ ಇದೀಗ ಮಳೆಯಾಗುತ್ತಿದ್ದು, ಈ ಮಳೆ ಹೊಡೆತದ ನಡುವೆ ರೈತರು ಏನೂ ಮಾಡಲಾಗದೆ ಅಸಹಾಯಕರಾಗಿ ಕೈಕಟ್ಟಿ ಕುಳಿತಿದ್ದಾರೆ. ಮುಸುಕಿನ ಜೋಳದ ಹೊಲಗಳಲ್ಲಿ ನೀರು ಹರಿಯುತ್ತಿದೆ. ಹಾಗಾಗಿ ಮುಸುಕಿನ ಜೋಳದ ಬೆಳವಣಿಗೆ ಕುಂಠಿತವಾಗಿದೆ. ಇನ್ನು ಆಲೂಗಡ್ಡೆ ಹಾಗೂ ಶುಂಠಿ ಬೆಳೆಗಳಲ್ಲಿ ಕೂಡ ಅತಿಯಾದ ತೇವಾಂಶದಿಂದಾಗಿ ಕೊಳೆ ರೋಗ ಹಾಗೂ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಕಡೆಪಕ್ಷ ಬತ್ತದ ನಾಟಿಯನ್ನಾದರೂ ಮಾಡೋಣ ಎಂದರೆ ಮಳೆ ಅದಕ್ಕೂ ಅವಕಾಶ ಕೊಡುತ್ತಿಲ್ಲ. ಈಗಾಗಲೇ ಭತ್ತದ ಸಸಿ ಮಡಿಗಳ ಮೇಲೆ ಹಾಕಿರುವ ಭತ್ತ ಕೂಡ ಅತಿಯಾದ ಮಳೆಗೆ ಕರಗುತ್ತಿದೆ. ಹಾಗಾಗಿ ಸಸಿ ಮಡಿಗಳಲ್ಲಿ ಶೇ.50ರಷ್ಟು ಮಾತ್ರವೇ ಭತ್ತ ಹುಟ್ಟಿದೆ. ಪರಿಣಾಮವಾಗಿ ರೈತರು ಮತ್ತೆ ಮತ್ತೆ ಬತ್ತದ ಸಸಿ ಮಡಿಗಳನ್ನು ಸಿದ್ಧಪಡಿಸುವಂತಾಗಿದೆ.
ಶೀತಪೀಡಿತವಾದ ಮಲೆನಾಡು: ಈಗಾಗಲೇ ಕಳೆದ ಒಂದು ತಿಂಗಳಿನಿಂದ ಎಡೆಬಿಡದೆ ಸುರಿದ ಮಳೆಯಿಂದ ತತ್ತರಿಸಿದ್ದ ಮಲೆನಾಡು ಇದೀಗ ದುಪದಪಟ್ಟು ಲೆಕ್ಕದಲ್ಲಿ ಸುರಿಯುತ್ತಿರುವ ಮಳೆಯಿಂದ ಅಕ್ಷರಶ: ತತ್ತರಿಸಿದ್ದು, ಇಡೀ ಮಲೆನಾಡು ಶೀತಪೀಡಿತಾಗಿದೆ.ಅಪ್ಪಟ ಮಲೆನಾಡು ಪ್ರದೇಶಗಳಾದ ಹೊಂಗಡಹಳ್ಳ, ಯಸಳೂರು, ಚಂಗಡಹಳ್ಳಿ, ಹಾನುಬಾಳು, ದೇವಾಲದಕೆರೆ, ಹೆತ್ತೂರ ಭಾಗಗಳಲ್ಲಂತೂ ಬಿಡುವನ್ನೇ ನೀಡದೆ ಸುರಿಯುತ್ತಿರುವ ಮಳೆ ಎಷ್ಟೋ ದಶಕಗಳ ಹಿಂದಿನ ನೆನಪನ್ನು ಮರುಕಳಿಸಿದೆ. ಕಾಫಿ ಬೆಳೆಗಾರರು ಕಡೆಪಕ್ಷ ತೋಟಗಳಿಗೆ ಹೋಗಿ ಕೆಲಸ ಮಾಡಲೂ ಆಗುತ್ತಿಲ್ಲ. ಮೊದಲೆಲ್ಲಾ ಮಳೆಗೆ ಕಾಯುತ್ತಿದ್ದವರು ಈಗ ಮಳೆ ನಿಲ್ಲಲಿ ಎಂದು ಕಾಯುತ್ತಾ ಕೂರುವಂತಾಗಿದೆ.