ವಾಹನ ಸವಾರರು ಬೈಕ್ ಹಾಗೂ ಕಾರುಗಳನ್ನು ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಿ,
ಚಾಮರಾಜನಗರ : ವಾಹನ ಸವಾರರು ಬೈಕ್ ಹಾಗೂ ಕಾರುಗಳನ್ನು ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಿ, ವಿಶೇಷವಾಗಿ ಬೈಕ್ ಸವಾರರು ಮಕ್ಕಳನ್ನು ಕೂರಿಸಿಕೊಂಡು ಚಾಲನೆ ಮಾಡುವಾಗ ಅವಶ್ಯಕವಾಗಿ ಸೇಫ್ಟಿ ಬೆಲ್ಟ್‌ಗಳನ್ನು ಧರಿಸುವುದರಿಂದ ಅಪಘಾತ ಹಾಗೂ ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಕೆ.ವಿ.ನಾಗರಾಜು ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲನೆ ಮಾಡಿದರೆ, ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಬೈಕ್, ಕಾರು, ಇತರ ಭಾರಿ ವಾಹನ ಚಾಲನೆ ಮಾಡುವಾಗ ಸವಾರರು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸೇಫ್ಟಿ ಬೆಲ್ಟ್ ಹಾಕಿಕೊಳ್ಳಿ: ಬೈಕ್ ಸವಾರರು ತಮ್ಮ ಬೈಕ್ ಮುಂದೆ ಹಾಗೂ ಹಿಂಬದಿ ಮಕ್ಕಳನ್ನು ಕೂರಿಸಿಕೊಂಡು ಚಾಲನೆ ಮಾಡುವಾಗ ಕಡ್ಡಾಯವಾಗಿ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಅಳವಡಿಸಬೇಕು. ರಸ್ತೆಯಲ್ಲಿ ಬೈಕ್ ಚಾಲನೆ ಮಾಡುತ್ತಿರುವ ಮಕ್ಕಳು ನಿದ್ರೆಗೆ ಜಾರಿದಾಗ ಬೈಕ್‌ನಿಂದ ಕೆಳಗೆ ಬೀಳುವ ಸಂಭವವೇ ಹೆಚ್ಚು. ಈ ಸೇಫ್ಟಿ ಬೆಲ್ಟ್ ಕಟ್ಟಿಕೊಂಡಾಗ ಮಕ್ಕಳು ಸಹ ನಿಮ್ಮ ಜತೆ ಜೋಪಾನವಾಗಿರುತ್ತಾರೆ ಎಂದರು.
ಬೈಕ್‌ನಲ್ಲಿ ಸವಾರಿ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವುದು ಅಪಘಾತಕ್ಕೆ ನಾವೇ ಆಹ್ವಾನ ಕೊಟ್ಟಂತೆ. ಬೈಕ್ ಚಾಲನೆ ಮಾಡುವಾಗ ನಿಮ್ಮ ಗಮನ ಮೊಬೈಲ್‌ನಲ್ಲಿ ಇರುತ್ತದೆಯೇ ಹೊರತು ರಸ್ತೆ ಕಡೆ ಹಾಗೂ ಹಿಂಬದಿ, ಮುಂಬದಿಯಿಂದ ಬರುತ್ತಿರುವ ವಾಹನಗಳ ಬಗ್ಗೆ ಗಮನ ಇರುವುದಿಲ್ಲ. ಶೇ.೩೦ರಷ್ಟು ಗಮನ ಮೊಬೈಲ್ ಮೇಲೆ ಇರುತ್ತದೆ. ಇದರಿಂದಲೂ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಬೈಕ್, ಕಾರು ಹಾಗೂ ಭಾರಿ ವಾಹನಗಳನ್ನು ಚಾಲನೆ ಮಾಡುವ ಚಾಲಕರು ಆದಷ್ಟು ಜಾಗರೂಕತೆಯಿಂದ ಚಾಲನೆ ಮಾಡಬೇಕು. ಸಾರ್ವಜನಿಕರು ಸಹ ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಕೆ.ವಿ.ನಾಗರಾಜು ತಿಳಿಸಿದರು.
ಕಚೇರಿ ಅಧೀಕ್ಷಕ ಕಮರ್‌ಶೆಟ್ಟಿ ಹಾಗೂ ಸಾರ್ವಜನಿಕರು ಹಾಜರಿದ್ದರು.