ಕಾಡಾನೆಗಳ ನಿಯಂತ್ರಣಕ್ಕೆ ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆಯ ಎಲ್ಲಾ ಯೋಜನೆಗಳು ವಿಫಲಗೊಂಡಿದ್ದು, ಕಳೆದ ಎರಡು ವರ್ಷಗಳ ಹಿಂದೆ ರು.5.6ಕೋಟಿ ವೆಚ್ಚದ ರೈಲ್ವೆ ಬ್ಯಾರಿಕೇಡ್ ಯೋಜನೆ ಕೂಡ ನೀರು ಪಾಲಾಗಿದೆ.
ಮುರಳೀಧರ್ ಶಾಂತಳ್ಳಿ
ಸೋಮವಾರಪೇಟೆ: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನಲ್ಲಿ ಕಾಡಾನೆಗಳ ಸಂಚಾರ ದಿನದ 24 ಗಂಟೆಗಳಿಗೂ ವಿಸ್ತರಿಸಿದ್ದು, ಸಾರ್ವಜನಿಕರು, ಗ್ರಾಮಸ್ಥರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾಡಾನೆಗಳ ನಿಯಂತ್ರಣಕ್ಕೆ ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆಯ ಎಲ್ಲಾ ಯೋಜನೆಗಳು ವಿಫಲಗೊಂಡಿದ್ದು, ಕಳೆದ ಎರಡು ವರ್ಷಗಳ ಹಿಂದೆ ರು.೫.೬ಕೋಟಿ ವೆಚ್ಚದ ರೈಲ್ವೆ ಬ್ಯಾರಿಕೇಡ್ ಯೋಜನೆ ಕೂಡ ನೀರು ಪಾಲಾಗಿದೆ. ವಿರಾಜಪೇಟೆಯಲ್ಲಿ ವಿಫಲಗೊಂಡ ಯೋಜನೆಯನ್ನು ಅರಣ್ಯ ಇಲಾಖೆ ಸೋಮವಾರಪೇಟೆಯ ಕಾಜೂರು, ದೊಡ್ಡಮಳ್ತೆ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸಲು ಮುಂದಾಗಿದ್ದು ಏಕೆ ಎಂಬುದು ಗ್ರಾಮಸ್ಥರ ಪಾಲಿಗೆ ಯಕ್ಷಪ್ರಶ್ನೆಯಾಗಿದೆ.
ಕಳೆದ ಮಾ.13ರಂದು ಬ್ಯಾರಿಕೇಡ್‌ಗಳನ್ನು ಮುರಿದು ಆನೆಗಳು ರಾಜ್ಯ ಹೆದ್ದಾರಿಗೆ ಬಂದಿದ್ದವು. ಅಲ್ಲದೆ ಮರಿಯಾನೆಯೊಂದು ಬ್ಯಾರಿಕೇಡ್‌ನ ಸಂಧಿಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುವ ಕುರಿತು ‘ಕನ್ನಡಪ್ರಭ’ ವರದಿ ಮಾಡಿತ್ತು. ಅಲ್ಲದೆ ನ.28, 2022 ರಲ್ಲಿಯೇ ಬ್ಯಾರಿಕೇಡ್ ಅಳವಡಿಕೆ ವಿಫಲವಾಗುವ ಕುರಿತು ಸಮಗ್ರ ವರದಿ ಮಾಡಿ ಅರಣ್ಯ ಇಲಾಖೆಯನ್ನು ಎಚ್ಚರಿಸಿತ್ತು. ಆದರೂ ಯೋಜನೆ ಜಾರಿಗೊಳಿಸಿದ ಅರಣ್ಯ ಇಲಾಖೆ ಸುಮಾರು ೬ ಕೋಟಿ ರೂ.ಗಳನ್ನು ವೆಚ್ಚಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟಮಾಡಿದೆ ಎಂದು ಗ್ರಾಮಸ್ಥ ಹಾಗೂ ಹರಿಹರ ಯುವಕ ಸಂಘದ ಅಧ್ಯಕ್ಷ ಅವಿಲಾಶ್ ಆಕ್ರೋಶವ್ಯಕ್ತಪಡಿಸುತ್ತಾರೆ.
ಈ ಮೂಲಕ ಈ ವರೆಗೆ ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ರೂಪಿಸಿದ ಆನೆ ಕಂದಕ, ಸೋಲಾರ್ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಎಲ್ಲಾ ಯೋಜನೆಗಳೂ ವಿಫಲಗೊಂಡಿವೆ.
ಕಳೆದ 10 ದಿನಗಳ ಹಿಂದೆ 3-4 ಆನೆಗಳು ಈ ಭಾಗದಲ್ಲಿ ಓಡಾಡುತ್ತಿದ್ದರೆ, ಇತ್ತೀಚೆಗೆ ಇವುಗಳ ಸಂಖ್ಯೆ ಹೆಚ್ಚಾಗಿದೆ. ಮರಿಯಾನೆ ಸಹಿತ 10 ಆನೆಗಳಿರುವ ಹಿಂಡು ರಾಜ್ಯಹೆದ್ದಾರಿಯನ್ನೇ ತಮ್ಮ ಕಾರಿಡಾರ್ ಆಗಿ ಮಾಡಿಕೊಂಡಿದೆ. ಇವುಗಳಿಂದ ದೂರವಿರುವ ಒಂಟಿ ಸಲಗ ತನ್ನ ಪಾಡಿಗೆ ಪ್ರತ್ಯೇಕವಾಗಿ ಸಂಚರಿಸುತ್ತಿದ್ದು, ಆಗಾಗ್ಗೆ ದ್ವಿಚಕ್ರ ವಾಹನಗಳ ಮೇಲೆ ದಾಳಿ ನಡೆಸುತ್ತಿದೆ.
ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮರಿಯಾನೆ ಸಹಿತ 10 ಆನೆಗಳಿರುವ ಹಿಂಡು ಟಾಟಾ ಕಾಫಿ ಎಸ್ಟೇಟ್‍ನಿಂದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ದಾಟಿ ಕಾಜೂರು ಅರಣ್ಯಕ್ಕೆ ತೆರಳುವ ಸಂದರ್ಭ ಸ್ಕೂಟರ್ ಆಗಮಿಸಿದ ಹಿನ್ನೆಲೆ ವಾಪಸ್ ತೋಟದೊಳಗೆ ತೆರಳಿವೆ.
ನಂತರ 8 ಗಂಟೆ ಸುಮಾರಿಗೆ ಕಾಜೂರು ಅರಣ್ಯ ವಸತಿ ನಿಲಯದ ಬಳಿ ಹೆದ್ದಾರಿಗೆ ಬಂದ ಕಾಡಾನೆಗಳು, ಆ ಸಮಯದಲ್ಲಿ ಜನಸಂಚಾರ ಹಾಗೂ ವಾಹನಗಳ ಸಂಚಾರ ಅಧಿಕವಿದ್ದುದರಿಂದ ಭಯಗೊಂಡು ಮತ್ತೆ ತೋಟದೊಳಗೆ ತೆರಳಿದವು. 11 ಗಂಟೆಯ ಸಮಯದಲ್ಲಿ ಮತ್ತೊಮ್ಮೆ ರಸ್ತೆ ದಾಟಿದ ಕಾಡಾನೆಗಳಿಗೆ ಆನೆ ಕಂದಕ ತಡೆಯಾಗಿದ್ದು, ಮರಳಿ ಕಾಫಿ ತೋಟದೊಳಗೆ ತೆರಳಿವೆ.
ಹೊಟ್ಟೆಪಾಡಿಗೆ ಆನೆಗಳ ಅಲೆದಾಟ:
ಕಾಜೂರು ಅರಣ್ಯ ಹಾಗೂ ಟಾಟಾ ಕಾಫಿ ಸಂಸ್ಥೆಯ ಕಾಫಿ ತೋಟದ ನಡುವೆ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಬೇಸಿಗೆಯಾಗಿರುವ ಹಿನ್ನೆಲೆ ಕಾಜೂರು ಅರಣ್ಯ ಒಣಗಿ ನಿಂತಿದೆ. ಬೇಸಿಗೆಯಲ್ಲೂ ಟಾಟಾ ಕಾಫಿ ತೋಟ ಹಚ್ಚಹರಿಸಿನಿಂದ ಕೂಡಿದೆ. ಅರಣ್ಯದಲ್ಲಿ ತಿನ್ನಲು ಮೇವು, ಕುಡಿಯಲು ನೀರು ಇಲ್ಲವಾಗಿದೆ. ತೋಟದಲ್ಲಿ ಹಲಸು ಸೇರಿದಂತೆ ಇನ್ನಿತರ ಮರಗಿಡಗಳು, ಕುಡಿಯಲು ಕೆರೆಯ ನೀರು ಲಭ್ಯವಿರುವ ಹಿನ್ನೆಲೆ ಕಾಡಾನೆಗಳು ಹೊಟ್ಟೆಪಾಡಿಗಾಗಿ ಅತ್ತಿಂದಿತ್ತ ಇತ್ತಿಂದತ್ತ ಸಂಚರಿಸಲೇಬೇಕಿದೆ.
ಅರಣ್ಯದೊಳಗೆ ಕಾಡಾನೆಗಳಿಗೆ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದ ಅರಣ್ಯ ಇಲಾಖೆ, ಆನೆಗಳು ಅರಣ್ಯ ಬಿಟ್ಟು ಇತ್ತ ಬರದಂತೆ ತಡೆಯಲು ರೈಲ್ವೇ ಬ್ಯಾರಿಕೇಡ್, ಕಂದಕ, ಸೋಲಾರ್ ಫೆನ್ಸಿಂಗ್‍ಗಳನ್ನು ಕೋಟ್ಯಾಂತರ ರು. ವ್ಯಯಿಸಿ ನಿರ್ಮಿಸಿದೆ. ಇದೇ ದುಡ್ಡನ್ನು ಆನೆಗಳಿಗೆ ಹಸಿವು, ದಾಹ ನೀಗಿಸುವ ಯೋಜನೆಗಳಿಗೆ ವಿನಿಯೋಗಿಸಿದ್ದರೆ ಆನೆ ಮಾನವ ಸಂಘರ್ಷ ನಡೆಯುತ್ತಿರಲಿಲ್ಲ ಎಂದು ಕಾಜೂರು ಭಾಗದ ನಿವಾಸಿಗಳು ಹೇಳುತ್ತಾರೆ.
ತೋಟದೊಳಗೆ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಆರ್‌ಆರ್‌ಟಿ ಸಿಬ್ಬಂದಿ ವಿನೋದ್, ಹರ್ಷಿತ್, ದರ್ಶನ್ ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ ಅಟ್ಟಿದರು.
ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನಗಳನ್ನು ತಡೆಹಿಡಿಯಲಾಯಿತು. ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರೂ ಸಹ ಇದೇ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುತ್ತಿದ್ದು, ಕಾರ್ಯಾಚರಣೆ ಹಿನ್ನೆಲೆ ಕೆಲಕಾಲ ರಸ್ತೆಯಲ್ಲೇ ನಿಂತರು.
ಅರಣ್ಯ ಇಲಾಖೆಯ ನಾರಾಯಣ ಮೂಲ್ಯ, ಜಗದೀಶ್, ವರುಣ್, ವಾಸು, ಸಂತೋಷ್, ಟಾಟಾ ಸಂಸ್ಥೆಯ ಮಣಿ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳಿಗೆ ತಡೆಹಾಕಿದರು. ಕಾಡಾನೆಗಳು ಅರಣ್ಯಕ್ಕೆ ತೆರಳಿದ ನಂತರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಯಿತು.
ಒಂಟಿ ಸಲಗಕ್ಕೆ ‘ರೌಡಿ ರಂಗ’ ನಾಮಕರಣ !
ಒಂಟಿ ಸಲಗವೊಂದು ಪ್ರತ್ಯೇಕವಾಗಿ ಸಂಚರಿಸುತ್ತಿರುವುದು ಗ್ರಾಮಸ್ಥರು, ವಾಹನ ಸವಾರರಲ್ಲಿ ಭಯವನ್ನುವುಂಟು ಮಾಡಿದೆ. ಇದರ ಆಗಮನ ಸಂದರ್ಭ ಜನರು ಭಯಭೀತರಾಗುತ್ತಿದ್ದಾರೆ. ವಾಹನಗಳ ಮೇಲೆ ನಾಲ್ಕೈದು ಬಾರಿ ಧಾಳಿ ನಡೆಸಿರುವ ಒಂಟಿ ಸಲಗಕ್ಕೆ ‘ರೌಡಿ ರಂಗ’ ಎಂದು ನಾಮಕರಣ ಮಾಡಿದ್ದು ಕೂಡಲೇ ಸೆರೆ ಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
13 ಆನೆ ಓಡಿಸಲು ಮೂವರು ಸಿಬ್ಬಂದಿ!
ಕಾಜೂರು ಭಾಗದಲ್ಲಿ ಒಟ್ಟು 12 ಆನೆಗಳ ಹಿಂಡು ಓಡಾಡುತ್ತಿವೆ. ಒಂದು ಆನೆ ಪ್ರತ್ಯೇಕವಾಗಿ ಸಂಚರಿಸುತ್ತಿದೆ. ಇವುಗಳನ್ನು ಅರಣ್ಯಕ್ಕೆ ಅಟ್ಟಲು, ಇವುಗಳ ಚಲನವಲನದ ಮೇಲೆ ನಿಗಾ ವಹಿಸಲು, ಇವುಗಳ ಸಂಚಾರದ ಬಗ್ಗೆ ಸ್ಥಳೀಯರು, ವಾಹನ ಸವಾರರಿಗೆ ಮಾಹಿತಿ ನೀಡಲು ಕೇವಲ ಮೂವರು ಮಾತ್ರ ಆರ್‌ಆರ್‌ಟಿ ಸಿಬ್ಬಂದಿ ಇದ್ದಾರೆ. ಇಲ್ಲಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಆಗಬೇಕಿದೆ. ಇದರೊಂದಿಗೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಸಮರ್ಪಕವಾಗಿ ಪಟಾಕಿ ಇಲ್ಲ. ಕೋವಿ ಕೊಟ್ಟಿದ್ದರೂ ಹೆಚ್ಚುವರಿ ತೋಟಗಳನ್ನು ನೀಡಿಲ್ಲ. ಇದರಿಂದಾಗಿ ಇರುವ ಸಿಬ್ಬಂದಿ ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ...................
ಕನ್ನಡಪ್ರಭ ಸಮಗ್ರ ವರದಿ ಮಾಡಿತ್ತು...ಕಾಜೂರು ಅರಣ್ಯದೊಳಗೆ ದುರ್ಗಾಪರಮೇಶ್ವರಿ ಎಸ್ಟೇಟ್‌ನಲ್ಲಿ ದೊಡ್ಡ ಕೆರೆಯಿದೆ . ಆ ಕೆರೆಯ ನೀರನ್ನು ಕೆಸರಿದೆ ಎಂದು ಕಾಡಾನೆಗಳು ನೀರು ಕುಡಿಯುತ್ತಿಲ್ಲ. ಕೆರೆ ನೀರನ್ನು ಶುಚಿಗೊಳಿಸಲು ಅರಣ್ಯ ಇಲಾಖೆ ಮುಂದಾಗಬೇಕಾಗಿದೆ. ಕಳೆದ ವರ್ಷ ಇಲಾಖೆ ಶುಚಿಗೊಳಿಸಿತ್ತು. ‘ಕನ್ನಡಪ್ರಭ’ ಕಳೆದ ಎರಡು ವರ್ಷಗಳ ಹಿಂದೆಯೇ ಬ್ಯಾರಿಕೇಡ್ ಯೋಜನೆ ವಿಫಲವಾಗುವ ಕುರಿತು ಸಮಗ್ರ ವರದಿ ಮಾಡಿತ್ತು. ಆದರೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ.
.........................
ತುಂಬಾ ತೊಂದರೆಕೊಡುತ್ತಿರುವ ಎರಡು ಕಾಡಾನೆಗಳನ್ನು ಹಿಡಿಯಲು ತುರ್ತಾಗಿ ಇಲಾಖೆ ಮುಂದಾಗಬೇಕು. ಕಾಡಾನೆಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕು. ಅರಣ್ಯದೊಳಗೆ ಅವುಗಳಿಗೆ ಆಹಾರದ ವ್ಯವಸ್ಥೆ ಮಾಡಿಕೊಟ್ಟರೆ ಸ್ಪಲ್ಪಮಟ್ಟಿಗೆ ಕಾಡಾನೆಗಳ ಹಾವಳಿ ಬ್ರೇಕ್ ಹಾಕಬಹುದು.
-ವಿನೋದ್ ಜಿ.ಕೆ., ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಐಗೂರು
..................
ಈಗಾಗಲೇ ಬಹಳ ತೊಂದರೆ ಕೊಡುತ್ತಿರುವ ಎರಡು ಕಾಡಾನೆಗಳನ್ನು ಸೆರೆಹಿಡಿಯಲು ಚಿಂತನೆ ನಡೆಸಲಾಗಿದೆ. ಕಾಜೂರು ಸುತ್ತಮುತ್ತಲಿನ ಅರಣ್ಯದಲ್ಲಿ ತೊಂದರೆ ಕೊಡುತ್ತಿರುವ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಆದೇಶ ಬಂದ ನಂತರ ತುರ್ತಾಗಿ ಸೆರೆಹಿಡಿಯಲಾಗುವುದು. ಮಳೆ ತಡವಾಗಿರುವುದು ಕೂಡ ಸಮಸ್ಯೆಗಳಿಗೆ ಕಾರಣವಾಗಿದೆ.
-ಜಗದೀಶ್, ಡಿಆರ್‌ಎಫ್‌ಒ, ಮಾದಾಪುರ ಉಪವಲಯ,ಕಾಜೂರು ಗ್ರಾಮ