ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇಷ್ಟುದಿನ ನೆರೆ ರಾಜ್ಯಗಳಲ್ಲಿ ಭೀತಿ ಹುಟ್ಟಿಸಿದ್ದ ಹಕ್ಕಿಜ್ವರ (ಶೀತಜ್ವರ) ಇದೀಗ ಕರುನಾಡಿನ ಚಿಕ್ಕಬಳ್ಳಾಪುರಕ್ಕೂ ಕಾಲಿಟ್ಟಿದ್ದರಿಂದ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲೂ ದಾಂಗುಡಿ ಇಟ್ಟಿರುವ ಹಕ್ಕಿಜ್ವರದಿಂದ ವಿಜಯಪುರ ಜಿಲ್ಲೆಗೂ ವಕ್ಕರಿಸುವ ಭೀತಿ ಎದುರಾಗಿದೆ. ಹೀಗಾಗಿ ಜಿಲ್ಲಾದ್ಯಂತ ನಡೆಯುತ್ತಿದ್ದ ಕುಕ್ಕಟೋದ್ಯಮ ಕುಸಿದಿದೆ.ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಗೆ ನುಸುಳಲು ಹಲವಾರು ದಾರಿಗಳಿವೆ. ಅದರಲ್ಲಿ ರಾಜಮಾರ್ಗಗಳು ಹಾಗೂ ಹಲವು ರಹಸ್ಯ ಮಾರ್ಗಗಳು ಇದ್ದು, ಅಕ್ರಮವಾಗಿ ಕೋಳಿ ಹಾಗೂ ಮೊಟ್ಟೆ ವ್ಯಾಪಾರಸ್ಥರು ನುಗ್ಗುವ ಸಂಭವವಿದೆ. ಹೀಗಾಗಿ ಅಲ್ಲಿಂದ ಬಂದ ಕೋಳಿಗಳಿಂದ ಜಿಲ್ಲೆಯಲ್ಲೂ ಹಕ್ಕಿಜ್ವರ ಹಬ್ಬಬಹುದು ಎಂದು ಜನರು ಕೋಳಿ ಹಾಗೂ ಮೊಟ್ಟೆಗಳನ್ನು ಖರೀದಿಸುವುದನ್ನೇ ನಿಲ್ಲಿಸಿದ್ದಾರೆ. ಇದರಿಂದಾಗಿ ಕೋಳಿ ಹಾಗೂ ಮೊಟ್ಟೆ ಮಾರಾಟಗಾರರಿಗೆ ಭಾರಿ ಹೊಡೆತ ಬಿದ್ದಿದೆ. ಏನಿದು ಹಕ್ಕಿಜ್ವರ, ಹೇಗೆ ಹರಡುತ್ತದೆ?
ಸಾಮಾನ್ಯವಾಗಿ ಹೆಚ್5ಎನ್1 ಎಂಬ ವೈರಸ್‌ನಿಂದ ಒಂದು ಪಕ್ಷಿಯಿಂದ ಇನ್ನೊಂದು ಪಕ್ಷಿಗಳಿಗೆ ಹರಡುವ ಸೋಂಕು ಇದಾಗಿದೆ. ಸೋಂಕಿತ ಪಕ್ಷಿಗಳು, ಅವುಗಳ ಮಲದಿಂದ ಅಥವಾ ಸೋಂಕಿತ ಪಕ್ಷಿಯ ನೇರ ಸಂಪರ್ಕದಿಂದಲೂ ಹಕ್ಕಿಜ್ವರ ಬರುತ್ತದೆ. ಹಕ್ಕಿಜ್ವರವಿರುವ ಪಕ್ಷಿ ಅಥವಾ ಕೋಳಿಗಳ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಈ ಹಕ್ಕಿಜ್ವರ ಬಾಧಿಸಲಿದೆ. ಹೀಗಾಗಿ ಹಕ್ಕಿಜ್ವರ ಬರದಂತೆ ಎಚ್ಚರಿಕೆ ವಹಿಸುವುದು ಉತ್ತಮ ಮಾರ್ಗವಾಗಿದೆ. ಅಕಸ್ಮಾತ ಹಕ್ಕಿಜ್ವರ ಬಂದಿದೆ ಎಂದು ಖಚಿತವಾದ ತಕ್ಷಣವೇ ಇಡಿ ಫಾರಂನಲ್ಲಿರುವ ಕೋಳಿಗಳನ್ನೆಲ್ಲ ಹತ್ಯೆಗೈದು, ಕೋಳಿ ಫಾರಂಗಳಿಗೆ ಶುದ್ಧತಾ ಕ್ರಮಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.ಹಕ್ಕಿಜ್ವರದಿಂದ ಪಾರಾಗುವುದು ಹೇಗೆ?ಮಾಂಸಾಹಾರ ಸೇವನೆದಾರರು ಅನ್ಯರಾಜ್ಯದಿಂದ ಬರುವ ಕೋಳಿಗಳ ಚಿಕನ್ ತಿನ್ನುವುದು ಬಿಟ್ಟು, ಸ್ಥಳೀಯವಾಗಿ ಸಿಗುವ ಪೌಲ್ಟ್ರಿಗಳಿಂದಲೇ ಬಂದಿರುವ ಕೋಳಿಗಳನ್ನು ತಿನ್ನಬೇಕು. ಹಕ್ಕಿಜ್ವರದ ಭೀತಿ ಇರುವುದರಿಂದ ಯಾವುದೇ ಕೋಳಿಯನ್ನು ಬೇಯಿಸುವಾಗ 165 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬೇಯಿಸಿದ ಬಳಿಕ ಚಿಕನ್ ಸೇವಿಸಬೇಕು. ಇನ್ನು ಮೊಟ್ಟೆಗಳನ್ನು 175 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಬೇಸಿದಿ ಬಳಿಕವೇ ಸೇವಿಸಬೇಕು. ಹೀಗೆ ಮಾಡುವುದರಿಂದ ಹಕ್ಕಿಜ್ವರ ಹೊಂದಿದ್ದ ಕೋಳಿ ಅಥವಾ ಮೊಟ್ಟೆ ಇದ್ದರೂ ಅದರಿಂದ ಮನುಷ್ಯರಿಗೆ ರೋಗ ಹರಡದಂತೆ ತಡೆಯಬಹುದು.ಜಿಲ್ಲೆಯ ಫಾರಂಗಳ ವಿವರ
ಜಿಲ್ಲೆಯಲ್ಲಿ 28 ಬಾಯ್ಲರ್ ಕೋಳಿ ಫಾರಂಗಳಲ್ಲಿ 78,755 ಕೋಳಿಗಳು ಹಾಗೂ 13 ಲೇಯರ್ ಕೋಳಿ ಫಾರಂಗಳಲ್ಲಿ 46 ಸಾವಿರ ಕೋಳಿಗಳಿವೆ. ಇವರೆಡರ ಜೊತೆಗೆ ಹಿತ್ತಲ ಕೋಳಿಗಳು ಸೇರಿ ಅಂದಾಜು 1,73,408 ಕೋಳಿಗಳಿವೆ.ಜಿಲ್ಲೆಯಲ್ಲಿ ಜಾಗೃತೆ
ಈಗಾಗಲೇ ಹಕ್ಕಿಜ್ವರದ ಭೀತಿ ಉಂಟಾಗಿರುವುದರಿಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಪ್ರಸನ್ನಕುಮಾರ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ವಿಜಯಪುರದಲ್ಲಿ ಸಭೆ ಮಾಡಲಾಗಿದೆ. ಅಲ್ಲದೆ ತುರ್ತು ಸಂದರ್ಭದ ಚಿಕಿತ್ಸೆಗಾಗಿ ಓರ್ವ ಪಶುವೈದ್ಯ, ಓರ್ವ ಸಹಾಯಕ, ಇಬ್ಬರು ಅಟೆಂಡರ್‌ಗಳು ಸೇರಿರುವ ತಾಲೂಕಿಗೆ ಒಂದರಂತೆ 13 ತಾಲೂಕಿನಲ್ಲಿ 13 ರ್‍ಯಾಪಿಡ್ ರೆಸ್ಪಾನ್ಸ್ ಟೀಮ್ ರಚಿಸಲಾಗಿದೆ. ಎಲ್ಲ ಕೋಳಿ ಫಾರಂಗಳಿಗೆ ತೆರಳಿ ಅವುಗಳ ಮಾಲೀಕರು ಹಾಗೂ ಕೆಲಸಗಾರರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಗಡಿಯಲ್ಲಿ ಫುಲ್ ಅಲರ್ಟ್ಮಹಾರಾಷ್ಟ್ರದಲ್ಲೂ ಹಕ್ಕಿಜ್ವರ ತೀವ್ರವಾಗಿರುವುದರಿಂದ ಅಲ್ಲಿಂದ ಇಲ್ಲಿಗೂ ರೋಗ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಮಹಾರಾಷ್ಟ್ರದ ಗಡಿ ಭಾಗಗಳಾದ ಕನಮಡಿ, ಅರಕೇರಿ-ಸಿದ್ದಾಪುರ, ಯತ್ನಾಳ, ಶಿರಾಡೋಣ, ಧೂಳಖೇಡ, ಅಗರಖೇಡ ಸೇರಿ 6 ಕಡೆಗಳಲ್ಲಿ ಪಶು ವೈದ್ಯಕೀಯ ಸಿಬ್ಬಂದಿ, ವೈದ್ಯರು ಹಾಗೂ ಪೊಲೀಸರು ಇರುವ ಅಂತಾರಾಜ್ಯ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ತಪಾಸಣೆ ನಡೆಸುತ್ತಿದ್ದು, ಮಹಾರಾಷ್ಟ್ರದಿಂದ ಮೊಟ್ಟೆಗಳು ಹಾಗೂ ಕೋಳಿಗಳು ಬರದಂತೆ ಎಚ್ಚರವಹಿಸಲಾಗುತ್ತಿದೆ.
*ಕೋಟ್:ಮೊದಲೆಲ್ಲ ಫಾರಂ ಕೋಳಿಗಳ ಹಾಗೂ ಹಿತ್ತಲ ಕೋಳಿಗಳ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಹಕ್ಕಿಜ್ವರದ ಭೀತಿಯಿಂದ ಜನರು ಕೋಳಿ ಹಾಗೂ ಮೊಟ್ಟೆಗಳನ್ನು ಖರೀದಿಸುವುದು ನಿಲ್ಲಿಸಿದ್ದರಿಂದ ವ್ಯಾಪಾರವೇ ಇಲ್ಲದಂತಾಗಿದೆ. ಹಾಕಿದ್ದ ಬಂಡವಾಳವೂ ಸಹ ಮೈಮೇಲೆ ಸಾಲದ ರೂಪದಲ್ಲಿ ವಕ್ಕರಿಸುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು, ಜನರಿಗೆ ತಿಳುವಳಿಕೆ ಮೂಡಿಸಿ ಕುಕ್ಕಟೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕಿದೆ.ಖಾಜಾಸಾಬ್ ಪಟೇಲ್, ಕುಕ್ಕಟೋದ್ಯಮಿ.
*ಕೋಟ್: ನಮ್ಮಲ್ಲಿ ಹಕ್ಕಿಜ್ವರ ಬಾಧೆ ಇಲ್ಲದಿರುವುದರಿಂದ ಜಿಲ್ಲೆಯ ಜನರು ಮೊಟ್ಟೆ ಹಾಗೂ ಚಿಕನ್ ತಿನ್ನಲು ಯಾವುದೇ ಭಯವಿಲ್ಲ. ಮಾರಾಟಗಾರರಿಗೆ, ವ್ಯಾಪಾರ, ವಹಿವಾಟಿಗೆ ತೊಂದರೆಯೂ ಇಲ್ಲ. ಬೇರೆ ರಾಜ್ಯಗಳಿಂದ ಖರೀದಿಸಿ ತಂದ ಮೊಟ್ಟೆ ಅಥವಾ ಕೋಳಿಗಳನ್ನು ಯಾರೂ ಸೇವನೆ ಮಾಡಬಾರದು.ಡಾ.ಅಶೋಕ ಘೊಣಸಗಿ, ಉಪನಿರ್ದೇಶಕರು, ಪಶುಪಾಲನಾ ಇಲಾಖೆ