ಬೀರೂರು: ಭದ್ರಾ ಜಲಾಶಯದಲ್ಲಿ ನೀರಿದ್ದರೂ ತಪ್ಪದ ತತ್ವಾರ

KannadaprabhaNewsNetwork | Published : May 4, 2024 12:44 AM

ಸಾರಾಂಶ

ಬೀರೂರು, ಕಳೆದ 2014ರಿಂದ ಹಲವಾರು ಶಾಸಕರ ಪ್ರಯತ್ನದ ಫಲವಾಗಿ ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಶಾಶ್ವತ ಭದ್ರಾ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದು ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ವಿದ್ಯುತ್ ಸಮಸ್ಯೆ ಹಾಗೂ ಯಂತ್ರೋಪಕರಣಗಳು ಪದೇ ಪದೇ ಕೈಕೊಡುವ ಜೊತೆ ಬೇಸಿಗೆಯಲ್ಲಿ ಜನರ ದಾಹ ಮತ್ತು ನೀರು ಪೂರೈಕೆ ತೀರಿಸುವುದು ಪುರಸಭೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ವಿದ್ಯುತ್ - ಮೋಟಾರ್‌ ಸಮಸ್ಯೆಗೆ ಮುಕ್ತಿ ಬೇಕಿದೆ । ಬೇಸಿಗೆಯಲ್ಲಿ ನೀರಿನ ಮಿತ ಬಳಕೆಗೆ ಪುರಸಭೆ ಸಲಹೆ ಕನ್ನಡಪ್ರಭ ವಾರ್ತೆ,ಬೀರೂರು.ಕಳೆದ 2014ರಿಂದ ಹಲವಾರು ಶಾಸಕರ ಪ್ರಯತ್ನದ ಫಲವಾಗಿ ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಶಾಶ್ವತ ಭದ್ರಾ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದು ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ವಿದ್ಯುತ್ ಸಮಸ್ಯೆ ಹಾಗೂ ಯಂತ್ರೋಪಕರಣಗಳು ಪದೇ ಪದೇ ಕೈಕೊಡುವ ಜೊತೆ ಬೇಸಿಗೆಯಲ್ಲಿ ಜನರ ದಾಹ ಮತ್ತು ನೀರು ಪೂರೈಕೆ ತೀರಿಸುವುದು ಪುರಸಭೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.ಭದ್ರಾ ನದಿಯಿಂದಾ ಬೀರೂರು-ಕಡೂರು ಪಟ್ಟಣಗಳಿಗೆ ಕುಡಿಯುವ ನಿರೋದಗಿಸಲು ಲಕ್ಕವಳ್ಳಿ ಬಳಿ ಜಾಕ್ ವೆಲ್ ನಿರ್ಮಿಸಿ ಅಲ್ಲಿಂದ ನೀರನ್ನು ಮೇಲೆತ್ತಿ ತಳ್ಳುವ 800 ಎಚ್.ಪಿ.ಯ ಎರಡು ವರ್ಟಿಕಲ್ ಟರ್ಬೈನ್ ಮೋಟಾರುಗಳನ್ನು ಆರಂಭದಲ್ಲಿ ಅಳವಡಿಸಿ ಸಮೀಪದ ತರೀಕೆರೆ ಜಲಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಿ ಎರಡು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಈ ಮೋಟಾರುಗಳು ಆರಂಭದಲ್ಲಿ ಕೆಡದೆ ಕಾರ್ಯನಿರ್ವಹಿಸುತ್ತಿದ್ದವು. ಇವುಗಳಿಗೂ ಕೂಡ10 ವರ್ಷ ಗಳಾಗಿದ್ದು, ಅವು ಪದೇ ಪದೇ ಕೆಟ್ಟು ಸದ್ಯ ಜಾಕ್ ವೆಲ್ ನಲ್ಲಿ ಒಂದೆ ಮೋಟಾರು ಮಾತ್ರ ಕಾರ್ಯನಿರ್ವಸುತ್ತಾ ಒತ್ತಡ ಹೆಚ್ಚಾಗಿ ಆವಾಗಾವಾಗ ಕೆಟ್ಟು ನಿಂತು ಹೋಗುತ್ತದೆ. ಈ ಮೋಟಾರು ಕೆಟ್ಟರೆ ಇದನ್ನು ರಿಪೇರಿ ಮಾಡಿಸಲು ಅಕ್ಕ-ಪಕ್ಕದ ರಾಜ್ಯದ ಮೆಕಾನಿಕ್ ಇಂಜಿನಿಯರನ್ನು ಕರೆಸಲು, ಲಕ್ಷ ಗಟ್ಟಲೆ ಹಣ ನೀಡಿ ರಿಪೇರಿ ಮಾಡಿಸುವುದು ಒಂದಡೆಯಾದರೆ, ಪಟ್ಟಣದ ಜನರು ನೀರಿಲ್ಲದೆ ಹತ್ತಾರು ದಿನ ಕಾಯುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ.ಸದ್ಯ ಬೀರೂರು ಪಟ್ಟಣದ 23 ವಾರ್ಡಗಳಲ್ಲಿ 24 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಇದ್ದು , ಕುಡಿಯುವ ನೀರು 3 ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ಆದರೆ ಈಗ ಸರಬರಾಜಾಗುತ್ತಿರುವುದು ಅದು ವಿದ್ಯುತ್ ಇದ್ದರೆ 2 ಎಂಎಲ್ ಡಿ ಮಾತ್ರ. ಪಟ್ಟಣ ವ್ಯಾಪ್ತಿಯಲ್ಲಿ 48 ವಾಣಿಜ್ಯ ಬಳಕೆ ನಲ್ಲಿಗಳಿದ್ದರೆ, 3846 ಗೃಹಬಳಕೆ ನಲ್ಲಿಗಳಿವೆ. ಜೊತೆಗೆ ಗೃಹೇತರ ನಲ್ಲಿಗಳು ಇವೆ. ವಾರ್ಷಿಕ ಗೃಹಬಳಕೆಗೆ 1440 ರು., ವಾಣಿಜ್ಯ ಬಳಕೆಗೆ 5760 ರು. ಸಾರ್ವಜನಿಕರು ಕಂದಾಯ ಪಾವತಿಸಿದರು ಸಹ ಮನೆಗೆ ಸಮರ್ಪಕ ನೀರು ನೀಡುವಲ್ಲಿ ಪುರಸಭೆ ವಿಫಲವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 4 ಓವರ್ ಹೆಡ್ ಟ್ಯಾಂಕ್ ಗಳಿದ್ದು ಅವುಗಳ ಮೂಲಕವೇ ಸುಮಾರು 16 ವಾರ್ಡಗಳಿಗೆ ನೀರು ಪೂರೈಕೆಯಾಗುತ್ತಿದ್ದರೆ, ಮಾರ್ಗದ ಕ್ಯಾಂಪಿನಲ್ಲಿದ್ದ ದುರಸ್ತಿಯಲ್ಲಿದ್ದ ಓವರ್ ಹೆಡ್ ಟ್ಯಾಂಕ್ ಕೆಡವಿದ ಪರಿಣಾಮ ಸುತ್ತ ಮುತ್ತಲಿನ 7ವಾರ್ಡ ಜನರು ನೀರಿಗಾಗಿ ಪರಿತಪಿಸುವುದು ನಿತ್ಯ ಮುಂದುವರಿದಿದೆ.ಇದರ ಪರಿಣಾಮ ಬಳ್ಳಾರಿ ಕ್ಯಾಂಪ್, ಇಂದ್ರಾ ನಗರ, ಬೋವಿ ಕಾಲೋನಿ, ಎಡಿ ಕಾಲೋನಿ, ಪೌರಕಾರ್ಮಿಕರ ಕಾಲೋನಿ ಗಳಲ್ಲಿ ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ಇದ್ದು, ಪ್ರತಿನಿತ್ಯ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮೂಗಿಗಿಂತ ಮುಗುತಿ ಭಾರ: ಭದ್ರಾ ಕುಡಿಯುವ ನೀರಿನ ನಿರ್ವಹಣೆಯನ್ನು ಎರಡು ಪುರಸಭೆ ಗಳು ಸಹ ವರ್ಷದ 6 ತಿಂಗಳಂತೆ ಯಂತ್ರೋಪಕರಣ ಮತ್ತಿತರ ಖರ್ಚುಗಳನ್ನು ಹಂಚಿಕೊಂಡಿವೆ. ಆದರೆ ಒಮ್ಮೆ ಏನಾದರೂ ಮೋಟಾರು ಯಂತ್ರಗಳು ಕೆಟ್ಟರೆ ಲಕ್ಷಾಂತರ ರು. ಖರ್ಚಾಗುತ್ತಿವೆ. ಇದು ನಾಗರಿಕರು ನೀರಿನ ತೆರಿಗೆಗಿಂತಾ ಹೆಚ್ಚಾಗಿ ನಿರ್ವಹಣೆಗೆ ಪಡಿಪಾಟಲು ಬೀಳುವ ಸ್ಥಿತಿ ತಲುಪಿವೆ.

ಜಲ ಮಂಡಳಿಗೆ ವಹಿಸಿದರೆ ಸೂಕ್ತ;

ಸದ್ಯ ಪಟ್ಟಣಗಳಿಗೆ ನೀರೋದಗಿಸಲು 21ಬೋರ್‌ವೆಲ್‌ಗಳು ಸತತ ಕಾರ್ಯನಿರ್ವಹಿಸುತ್ತಿವೆ. ಆದರೆ ಯಂತ್ರೋ ಪಕರಣಗಳು ತುಂಬಾ ಹಳೆಯದಾಗಿದ್ದು, ಅವುಗಳು ಪದೇ ಪದೇ ಕೆಟ್ಟು ನಿಲ್ಲುವ ಪರಿಸ್ಥಿತಿ ಇದೆ. ಸರ್ಕಾರ ಇವುಗಳನ್ನು ಬದಲಿಸಿ ನೂತನ ಯಂತ್ರೋಪಕರಣ ಅಳವಡಿಸಿದರೆ ಯಾವುದೇ ತೊಂದರೆಯಾಗದು. ಜೊತೆಗೆ ಪುರಸಭೆಯಲ್ಲಿ ಇವುಗಳನ್ನು ರಿಪೇರಿ ಮಾಡಿಸುವಷ್ಟು ನಿಧಿ ಸಂಗ್ರಹವಾಗದು. ಇದನ್ನು ಕರ್ನಾಟಕ ಕುಡಿಯುವ ನೀರು ಮತ್ತು ಜಲಮಂಡಳಿಗೆ ವಹಿಸಿದರೆ ಸೂಕ್ತ ಎನ್ನುತ್ತಾರೆ ಸ್ಥಳೀಯರಾದ ಮಲ್ಲಿಕಾರ್ಜುನ್.

ಒಟ್ಟಾರೆ ಬೀರೂರು ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಾದರೆ ಲಕ್ಕವಳ್ಳಿ ಜಾಖ್ ವೆಲ್ ಮತ್ತು ತರೀಕೆರೆ ಜಲಶುದ್ದೀಕರಣ ಘಟಗಳಲ್ಲಿ ಕೆಟ್ಟುನಿಂತಿರುವ ಯಂತ್ರೋಪಕರಣಗಳನ್ನು ಸರಿಪಡಿಸಿ ಸರ್ಕಾರ ಜಲ ತತ್ವಾರಕ್ಕೆ ಪೂರ್ಣವಿರಾಮ ಹಾಕಬೇಕೆನ್ನುವುದು ಸಾರ್ವಜನಿಕರ ಒತ್ತಾಯ.--- ಕೋಟ್‌ ---ಬೇಸಿಗೆ ಆರಂಭದಿಂದಲು ವಿದ್ಯುತ್ ಸಮಸ್ಯೆ ಹೆಚ್ಚಾದ ಕಾರಣ ಸರಿಯಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬೀರೂರು ಪಟ್ಟಣದ ಓವರ್ ಹೆಡ್ ಟ್ಯಾಂಕ್ ತುಂಬಿಸಿಕೊಳ್ಳಲು 12ಗಂಟೆ ಸಾಕು. ಆದರೆ ನಮಗೆ ಲಕ್ಕವಳ್ಳಿ, ತರೀಕೆರೆ ಹಾಗೂ ಬೀರೂರು ಪಂಪ್ ಹೌಸ್‌ನ 3 ಕಡೆಯಲ್ಲಿ ವಿದ್ಯುತ್ ಇರಬೇಕು. ಅಲ್ಲಿ ಮೋಟಾರು ಆನ್ ಮಾಡಿದಾಗ ಇಲ್ಲಿ ಕರೆಂಟ್ ಇರುವುದಿಲ್ಲ. ಇದರಿಂದಾಗಿ ವಾರ್ಡಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಟ್ಟರೆ ಯಾವುದೇ ಸಮಸ್ಯೆಇಲ್ಲದೆ ಕೊಳವೆ ಬಾವಿ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದೇವೆ. ಚೆಲುವರಾಜ್. ನೀರು ಗಂಟಿ

---

ಕ್ಯಾಂಪ್ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ಯತ್ನಿಸುತ್ತಿದ್ದು, ಹೊಸ ಒವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ನಗರ ನೀರು ಸರಬರಾಜು ಮಂಡಳಿ ಅಮೃತ್ -2 ಯೋಜನೆಯಡಿ ಮಂಜೂರಾತಿ ದೊರೆತಿದ್ದು ಕಾರ್ಯಾ ದೇಶವಾಗಿದೆ. 10ಲಕ್ಷ ಲೀ.ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲು ನೀತಿ ಸಂಹಿತೆ ಕಾರಣಕ್ಕೆ ವಿಳಂಬವಾಗಿದ್ದು. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಾಗುವುದು. ಲಕ್ಕವಳ್ಳಿ ಇನ್ನೊಂದು ಹೊಸ ಮೋಟಾರು ಸರ್ಕಾರ ನೀಡಿದರೆ ಯಾವುದೇ ಸಮಸ್ಯೆ ಎದುರಾಗದು.

ವೀಣಾ, ಪುರಸಭೆ ಇಂಜಿನಿಯರ್ -- ಬಾಕ್ಸ್‌--

ನೀರು ಉಳಿತಾಯ ಅರಿವು ಮೂಡಬೇಕುಬೇಸಿಗೆ ಮಳೆ ಇಲ್ಲದೆ ಜಲಾಶಯಗಳು ನೀರಿಲ್ಲದೆ ಬಣಗುತ್ತಿವೆ, ಎಷ್ಟೋ ಕಷ್ಟಪಟ್ಟು ಕುಡಿಯುವ ನೀರು ಸಂಗ್ರಹಿಸಿ ಸರ್ಕಾರ ನೀಡುತ್ತಿದೆ ಎನ್ನುವ ಪರಿಜ್ಞಾನ ಸಾರ್ವಜನಿಕರಿಗೆ ಬಂದಿಲ್ಲದ ಪರಿಣಾಮ ಪುರಸಭೆಯವರು ಕುಡಿಯುವ ನೀರನ್ನು ಬಿಟ್ಟಾಗ ರಸ್ತೆ, ತಮ್ಮ ವಾಹನಗಳನ್ನು ತೊಳೆಯುವ ಮೂಲಕ ಕುಡಿಯುವ ನೀರನ್ನು ಹಾಳು ಮಾಡುತ್ತಿದ್ದಾರೆ. ಇಂತವುಗಳನ್ನು ಬಿಟ್ಟು ಕುಡಿಯುವ ನೀರಿನ ಬಗ್ಗೆ ಜಾಗೃತರಾಗಿ ಅದನ್ನು ಉಳಿಸುವ ಕಾರ್ಯ ಮಾಡಬೇಕು ಎನ್ನುತ್ತಾರೆ ಪುರಸಭೆ ಸದಸ್ಯ ಬಿ.ಕೆ.ಶಶಿಧರ್.3 ಬೀರೂರು 2ಬೀರೂರಿಗೆ ನೀರೊದಗಿಸುವ ಲಕ್ಕವಳ್ಳಿ ಜಾಕ್ ವೆಲ್ ಬಳಿ ಕುಡಿಯುವ ನೀರಿನ ಮೂಲ ಬತ್ತುತ್ತಿರುವುದು.

Share this article