ಮುಧೋಳದಲ್ಲಿ ಕ್ಷೀಣಗೊಂಡ ಪ್ರಚಾರ ಅಬ್ಬರ

KannadaprabhaNewsNetwork | Published : Apr 6, 2024 12:47 AM

ಸಾರಾಂಶ

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮತ್ತು ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ನಡುವೆ ಹಣಾಹಣಿ ಏರ್ಪಟ್ಟಿದೆ.

ವಿಶ್ವನಾಥ ಮುನವಳ್ಳಿ

ಕನ್ನಡ ಪ್ರಭ ವಾರ್ತೆ ಮುಧೋಳ

ಬಾಗಲಕೋಟೆ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 2024ರ ಚುನಾವಣೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಮೇಲೆಯೇ ನಡೆಯುತ್ತಿದೆ. ಹೀಗಾಗಿ ಇಲ್ಲಿ ಪಕ್ಷಕ್ಕಿಂತ ರಾಷ್ಟ್ರೀಯ ನಾಯಕರ ನಡುವಿನ ವರ್ಚಸ್ಸೇ ಹೆಚ್ಚಾಗಿ ಕೆಲಸ ಮಾಡುತ್ತದೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು ಗಮನ ಸೆಳೆಯುವುದು ಮುಧೋಳ ವಿಧಾನಸಭಾ ಕ್ಷೇತ್ರ. ಇಲ್ಲಿ ಬಿಜೆಪಿಗಿಂತ ಪ್ರಸ್ತುತ ಕಾಂಗ್ರೆಸ್‌ನ ಪ್ರಚಾರ ಭರಾಟೆ ತುಸು ಹೆಚ್ಚಾಗಿ ಕಂಡುಬರುತ್ತಿದೆ.

ಬಿಜೆಪಿ ಅಥವಾ ಕಾಂಗ್ರೆಸ್‌ ಸರ್ಕಾರ ಬರಲಿ ಮುಧೋಳ ಕ್ಷೇತ್ರಕ್ಕೆ ಒಂದು ಸಚಿವ ಸ್ಥಾನ ಇದ್ದೇ ಇದೆ. ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ ಅವರು ಸಚಿವರಾಗಿದ್ದರು. ಹಾಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಕ್ಷೇತ್ರದ ಶಾಸಕರೂ ಆಗಿರುವ ಆರ್‌.ಬಿ.ತಿಮ್ಮಾಪೂರ ಅವರು ಸಚಿವರಾಗಿದ್ದಾರೆ. ಹೀಗಾಗಿ ಈ ಕ್ಷೇತ್ರ ಹೆಚ್ಚು ಪ್ರಚಲಿತದಲ್ಲಿರುತ್ತದೆ ಎಂಬುವುದಕ್ಕೆ ಇದೆ ಕಾರಣ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮತ್ತು ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ನಡುವೆ ಹಣಾಹಣಿ ಏರ್ಪಟ್ಟಿದೆ. ಸಹಜವಾಗಿ ಪೈಪೋಟಿ ಕೂಡ ಹೆಚ್ಚಾಗಿರಲಿದೆ. ಅಷ್ಟೇ ಪ್ರಮಾಣದಲ್ಲಿ ಪ್ರಚಾರ ಭರಾಟೆ ಕೂಡ ನಡೆಯುತ್ತಿದೆ. ಆದರೆ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಚಿತ್ರದುರ್ಗದ ಲೋಕಸಭಾ ಕ್ಷೇತ್ರಕ್ಕೆ ಹೋದ ಮೇಲೆ ಬಿಜೆಪಿಯಲ್ಲಿ ಬಿರುಸಿನ ಪ್ರಚಾರ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಹೀಗಾಗಿ ಪ್ರಚಾರದ ವಿಚಾರದಲ್ಲಿ ಕಾಂಗ್ರೆಸ್‌ ಸ್ವಲ್ಪ ಮುಂದಿದೆ ಎಂದರೆ ತಪ್ಪಾಗಲಾರದು.

ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಹೆಸರು ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಚುನಾವಣೆ ರಂಗೇರಬೇಕಿತ್ತು. ಆದರೆ, ಬಿಜೆಪಿ ಅಬ್ಬರ ಮುಧೋಳ ಮತಕ್ಷೇತ್ರದಲ್ಲಿ ಅಷ್ಟಾಗಿ ಕಂಡುಬರುತ್ತಿಲ್ಲ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಹೈಕಮಾಂಡ್‌ ಚಿತ್ರದುರ್ಗದ ಟಿಕೆಟ್ ನೀಡಿರುವುದರಿಂದ ಅವರು ಅಲ್ಲಿಯೇ ಹೆಚ್ಚು ಗಮನವನ್ನು ಕೇಂದ್ರಿಕರಿಸಬೇಕಿದೆ. ಹೀಗಾಗಿ ಅವರು ಮುಧೋಳ ಕ್ಷೇತ್ರಕ್ಕಿಂತ ಚಿತ್ರದುರ್ಗವೇ ಪ್ರಧಾನ ಕ್ಷೇತ್ರವಾಗಿದೆ. ಹೀಗಾಗಿ ಸಹಜವಾಗಿ ಬಿಜೆಪಿ ಕಾರ್ಯಕರ್ತರು ಮತ್ತು ಕಾರಜೋಳ ಬೆಂಬಲಿಗರು ಕೂಡ ಈಗ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಮುಧೋಳ ಮತಕ್ಷೇತ್ರದಲ್ಲಿ ಪರಾಭವಗೊಂಡರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಅಲ್ಲದೇ ಅವರು ಬಿಜೆಪಿ ಸ್ಟಾರ್ ಪ್ರಚಾರಕರಾಗಿಯೂ ಆಯ್ಕೆಯಾಗಿದ್ದಾರೆ. ಇದರಿಂದ ರಾಜ್ಯಾದ್ಯಂತ ಅವರು ಸಂಚರಿಸಬೇಕಿದೆ. ಈ ಕಾರಣಕ್ಕಾಗಿ ಮುಧೋಳದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಚಿತ್ರದುರ್ಗದತ್ತ ಚಿತ್ತ ಹರಿಸಿದ್ದಾರೆ. 2019ರ ಚುನಾವಣೆಗೆ ಹೋಲಿಸಿದರೆ ಕ್ಷೇತ್ರದಲ್ಲಿ ಪೈಪೋಟಿಯ ಪ್ರಚಾರ ಕಂಡುಬರುತ್ತಿಲ್ಲ.

ಕಾಂಗ್ರೆಸ್ ಅಬ್ಬರ ಜೋರು:

ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಸಂಯುಕ್ತಾ ಪಾಟೀಲ ಅವರಿಗೆ ನೀಡಲಾಗಿದೆ. ಮುಧೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕಾರ್ಯಕರ್ತರು ಕ್ರಿಯಾಶೀಲರಾಗಿದ್ದಾರೆ. ತಾಲೂಕಿನಲ್ಲಿರುವ ಜಿಪಂ ಕ್ಷೇತ್ರಗಳಲ್ಲಿ ನಾಲ್ಕಾರು ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿ ಚುನಾವಣೆಯನ್ನು ಎದುರಿಸಲು ಸರ್ವ ರೀತಿಯಿಂದ ಸಜ್ಜಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಕೂಡ ಕ್ಷೇತ್ರದ ಶಾಸಕರೇ ಆಗಿರುವ ಆರ್‌.ಬಿ.ತಿಮ್ಮಾಪೂರ ಅವರ ಹೆಗಲ ಮೇಲಿದೆ. ಹೀಗಾಗಿ ಸಹಜವಾಗಿ ಅವರಿಗೂ ಕೂಡ ಕ್ಷೇತ್ರದಾದ್ಯಂತ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ.

Share this article