ವಿಜಯಪುರ : ರಾಜ್ಯದಲ್ಲಿ ಯಾವುದೇ ಕೊಲೆ ನಡೆದಾಗ ಅದರ ಆರೋಪಿ ಮುಸ್ಲಿಂ ಆಗಿದ್ದರೆ, ಅಲ್ಲಿಗೆ ಹೋಗಿ ಹೋರಾಟ ಮಾಡುವುದು, ಸಿಂಪತಿ ತೋರಿಸುವ ಮೂಲಕ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ್ ಗಣಿಹಾರ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೇಮ ಪ್ರಕರಣಕ್ಕೋಸ್ಕರ ಹಾಗೂ ಬೇರೆ ಬೇರೆ ವೈಯಕ್ತಿಕ ಕಾರಣಗಳಿಗಾಗಿ ಹುಬ್ಬಳ್ಳಿಯ ನೇಹಾ ಕೊಲೆ ಸೇರಿದಂತೆ, ರುಕ್ಸಾನಾ ಕೊಲೆ, ಮಂಗಳೂರಿನಲ್ಲಿ ಒಂದೇ ಕುಟುಂಬದ 4 ಮುಸ್ಲಿಂ ಸದಸ್ಯರ ಕೊಲೆ ಆಗಿದೆ. ಪ್ರವೀಣ ನೆಟ್ಟಾರ ಕೊಲೆಯಾಗಿದೆ. ಇಬ್ಬರು ಮುಸ್ಲಿಂ ಯುವಕರ ಕೊಲೆ ಆಗಿದೆ. ಇಂತಹ ಅನೇಕ ಪ್ರಕರಣಗಳಲ್ಲಿ ಮುಸ್ಲಿಂ ಆರೋಪಿ ಇದ್ದಾಗ ಮಾತ್ರ ಏಕೆ ಬಿಜೆಪಿಯವರು ಅದನ್ನು ದಾಳವಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಾರೆ ಎಂದು ಪ್ರಶ್ನಿಸಿದರು.
ಮುಸ್ಲಿಂ ಆರೋಪಿಗಳು ಎಲ್ಲಿದ್ದಾರೆ ಅಲ್ಲಿ ಮಾತ್ರ ಬಿಜೆಪಿ, ಆರ್‌ಎಸ್‌ಎಸ್, ಸಂಘ ಪರಿವಾರ ಹೋಗುತ್ತಿದೆ. ಅದನ್ನು ಅಹಿಂದ ಸಂಘಟನೆ ಖಂಡಿಸುತ್ತದೆ. ಯಾವುದೇ ವಿಚಾರಕ್ಕಾಗಿ, ಯಾರದ್ದೇ ಕೊಲೆಯಾದರೂ ಅವೆಲ್ಲ ಕೊಲೆಗಳೆ ಆಗಿರುತ್ತವೆ. ಯಾವುದೇ ಪ್ರೇಮ ಪ್ರಕರಣಗಳು ಜಾತಿ ನೋಡಿ ಆಗಲ್ಲ. ಆದರೆ ಅದನ್ನೇ ಬಳಸಿಕೊಂಡು ಬಿಜೆಪಿ ಅವರಿಗೆ ಹೆಣಗಳ ಮೇಲೆ ರಾಜಕೀಯ ಮಾಡುವುದು ರೂಢಿಯಾಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಆದಾಗ ಎಷ್ಟೆಲ್ಲ ಹೋರಾಟ ಮಾಡಿದ ಬಿಜೆಪಿ ನಾಯಕರು ಇದೀಗ ಅದೇ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಕುರಿತು ಯಾಕೆ ಪ್ರತಿಭಟನೆ ಮಾಡಲ್ಲ? ಮುಸ್ಲಿಂ ಕೊಲೆಗಾರರು ಇದ್ದಲ್ಲಿ ಮಾತ್ರ ಇವರು ಮಾಡುತ್ತಾರೆಯೆ? ನೇಹಾ ಕೇಸ್ ಆದಾಗ ಜೆ.ಪಿ.ನಡ್ಡಾ ಅವರೇ ಬಂದರು, ಅದೇ ನಡ್ಡಾ ಅವರು ಈಗ ಅಂಜಲಿ ಕೇಸ್‌ಗೆ ಯಾಕೆ ಬರ್ತಿಲ್ಲಾ ಎಂದು ಪ್ರಶ್ನಿಸಿದರು.
ಕೇವಲ ಅಧಿಕಾರ, ಹಣಕ್ಕಾಗಿ ಇವರು ರಾಜಕೀಯ ಮಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಧರ್ಮಸ್ಥಳದ ಸೌಜನ್ಯ ಕೊಲೆ ಕೇಸ್ ಆಯ್ತು, ಅದು ಯಾಕಾಯಿತು ಎಂಬುದು ಇದುವರೆಗೂ ಹೊರಗೆ ಬಂದಿಲ್ಲ. ಯಾವುದೇ ಪಕ್ಷದ ಸರ್ಕಾರ ಇದ್ದಾಗಲೂ ಕೊಲೆಗಳು ಆಗಿವೆ. ಅದನ್ನು ಬಿಟ್ಟು ಈಗ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಲು ಬಿಜೆಪಿಯವರು ಹೊರಟಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದರು. ಕೊಲೆಗಡುಕ ಸರ್ಕಾರ ಎನ್ನುತ್ತೀರಿ? ಹಾಗೆ ಎಂದರೆ ಏನು ಅರ್ಥ? ಹಾವೇರಿಯಲ್ಲಿ ರೈತರಿಗೆ ಗುಂಡು ಹಾಕಿದವರು ನೀವು ಎಂದು ತಿರುಗೇಟು ನೀಡಿದರು. ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ ಆಗಿದೆ ಎಂದು ಸಿಎಂ ರಾಜೀನಾಮೆ ಕೇಳುತ್ತಿದ್ದೀರಿ. ದೇಶದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ ಅವರ ರಾಜೀನಾಮೆ ಕೇಳಿ ಎಂದು ಸವಾಲು ಎಸೆದರು.
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿದರು. ಡಾ.ರವಿ ಬಿರಾದಾರ ಮಾತನಾಡಿ, ಇವೆಲ್ಲ ಪ್ರೇಮ ಪ್ರಕರಣಗಳು ಸೇರಿ ವೈಯಕ್ತಿಕ ವಿಚಾರಗಳಿಂದ ಆಗಿರುವ ಕೊಲೆಗಳು. ಓರ್ವ ಮುಸ್ಲಿಂ ಕೊಲೆ ಆರೋಪಿ ಇದ್ದರೆ ಅವರ ಇಡಿ ಸಮುದಾಯಕ್ಕೆ ಆರೋಪಿಸುವುದು ನಿಲ್ಲಬೇಕು. ಪ್ರಜ್ವಲ್ ರೇವಣ್ಣ ಸುಮಾರು 2 ಸಾವಿರ ಸ್ತ್ರೀಯರ ಬಾಳು ಹಾಳು ಮಾಡಿದ್ದಾನೆ. ಅವರೆಲ್ಲ ಹಿಂದೂ ಮಹಿಳೆಯರಾಗಿದ್ದು, ಅವನು ಹಿಂದೂ ಇದ್ದಾನೆ. ಹೀಗಾಗಿ ಅಲ್ಯಾಕೆ ಹೋಗಿ ಬಿಜೆಪಿಯವರು ಹೋರಾಟ ಮಾಡುತ್ತಿಲ್ಲ? ಅಪರಾಧ ಅಪರಾಧ ಎಂಬಂತೆ ನೋಡಬೇಕು ಹಿಂದೂ ಮುಸ್ಲಿಂ ಎಂದು ಬಣ್ಣ ಕಟ್ಟಬಾರದು ಎಂದು ಹೇಳಿದರು.
ಈ ವೇಳೆ ಮುಖಂಡ ನಾಗರಾಜ ಲಂಬು, ಜಕ್ಕಪ್ಪ ಯಡವೆ ಉಪಸ್ಥಿತಿ ಇದ್ದರು.
ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಮಾಸುವ ಮೊದಲೇ ಅಂಜಲಿ ಕೊಲೆ ಆಗಿದೆ. ಕೊಲೆಗೂ ಮುನ್ನ ತನಗೆ ನೇಹಾ ಮಾದರಿಯಲ್ಲಿ ಕೊಲೆ ಬೆದರಿಕೆ ಇದೆ ಎಂದು ಸ್ವತಃ ಆಕೆಯೇ ತಾಯಿಯೊಂದಿಗೆ ತೆರಳಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಆಗ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು. ಈ ಪ್ರಕರಣದಲ್ಲಿ ಪೊಲೀಸರ ವೈಫಲ್ಯವಾಗಿದೆ.
-ಶಿವಾಜಿ ಮೆಟಗಾರ, ಮುಖಂಡ