ಬಿಜೆಪಿ ದೇವರು, ಧರ್ಮದ ಮೊರೆ ಹೋಗಿದೆ

KannadaprabhaNewsNetwork |  
Published : Mar 05, 2024, 01:30 AM IST

ಸಾರಾಂಶ

ವಿಜಯಪುರ: ಬಿಜೆಪಿ ನುಡಿದಂತೆ ನಡೆಯದೇ ದೇವರು, ಧರ್ಮದ ಮೊರೆ ಹೋಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2024ರ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಬಡವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ನುಡಿದಂತೆ ನಡೆಯದೇ ದೇವರು, ಧರ್ಮದ ಮೊರೆ ಹೋಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2024ರ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಬಡವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಈ ಯೋಜನೆಗಳಿಂದ ಜನರ ಆದಾಯ ದ್ವಿಗುಣಗೊಂಡಿದೆ. ಆದರೂ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ದೇವಸ್ಥಾನಗಳ ಹಣ ಅನ್ಯ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದರು. ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರಿಗೂ ಈ ಯೋಜನೆಗಳು ಅನುಕೂಲವಾಗಿವೆ. ರಾಜ್ಯದ ಅಂದಾಜು 3.5 ಕೋಟಿ ಜನ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ ಎಂದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಬೆರೆಸಬಾರದು. ಈ ಹಿಂದೆ ಪಾಕಿಸ್ತಾನದ ಜೊತೆಗೆ ಎರಡು ಬಾರಿ ಯುದ್ದ ಮಾಡಿ ಗೆದ್ದಿದ್ದು ಕಾಂಗ್ರೆಸ್ ಅವಧಿಯಲ್ಲಿಯೇ. ಹೀಗಾಗಿ ದೇಶ ವಿರೋಧಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ದೂರಿದರು. ಲಕ್ನೋ ರ್ಯಾಲಿ ಐತಿಹಾಸಿಕ. ಪ್ರಧಾನಿ ನರೇಂದ್ರ ಮೋದಿ ಮಾಡಿದ ರ್ಯಾಲಿಯಲ್ಲಿ ಲಕ್ನೋ ರ್ಯಾಲಿಯ ಅರ್ಧದಷ್ಟು ಜನ ಇರಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಡುಗೆ ಅನಿಲ ದರ ಏರಿಕೆಯಾಗಿದೆ. ಉಚಿತ ಸಿಲಿಂಡರ್ ನೀಡಿದ ಮೋದಿ ಸರ್ಕಾರ ಅದಕ್ಕೆ ಅನಿಲ ತುಂಬಿಸಲು ಹಣವೇ ನೀಡಲಿಲ್ಲ. ಹೀಗಾಗಿ ಜನ ಬೆಲೆ ಏರಿಕೆಯಿಂದ ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಎಂದರು.

ಗೋಷ್ಠಿಯಲ್ಲಿ ಚಂದ್ರಶೇಖರ ಕೂಡಬಾಗಿ, ವೈಜನಾಥ್ ಕರ್ಫ್ಯೂರಮಠ, ಸುಭಾಷ್ ಛಾಯಗೂಳ, ಮಹ್ಮದ್ ರಫೀಕ್ ಟಪಾಲ, ಡಾ.ಗಂಗಾಧರ ಸಂಭಣ್ಣಿ, ಜಮೀರ್ ಅಹ್ಮದ್ ಭಕ್ಷೀ, ಸುರೇಶ್ ಘೋಣಸಗಿ, ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ತಮ್ಮಣ್ಣ ಮೇಲಿನಕೆರಿ, ಎಮ್ ಜಿ‌ ಯಂಕಂಚಿ, ಅಡಿವೆಪ್ಪ ಸಾಲಗಲ್, ಅನಿಲ್ ಸೂರ್ಯವಂಶಿ ಮುಂತಾದವರು ಇದ್ದರು.

ಕೋಟ್

ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ವಿಜಯಪುರ ಎಸ್ ಸಿ ಮೀಸಲು ಕ್ಷೇತ್ರದ ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯ. ಈಗಾಗಲೇ ಅಂದಾಜು 11 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆಯೋ ಅದಕ್ಕೆ ಎಲ್ಲರೂ ಬದ್ದರಾಗಿದ್ದೇವೆ. ನನಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.ಪ್ರೊ.ರಾಜು ಅಲಗೂರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್