ಸರ್ಕಾರ ಬೀಳುತ್ತೆ ಎಂಬ ಭ್ರಮೆಯಲ್ಲಿರುವ ಬಿಜೆಪಿ

KannadaprabhaNewsNetwork | Published : Dec 11, 2023 1:15 AM

ಸಾರಾಂಶ

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿ ಅವರಿಗೆ ನೈತಿಕತೆ ಇಲ್ಲ. ಅವರು ಇಂದಿಗೂ ಸರ್ಕಾರ ಬೀಳುತ್ತದೆ ಎಂಬು ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿ ಅವರಿಗೆ ನೈತಿಕತೆ ಇಲ್ಲ. ಅವರು ಇಂದಿಗೂ ಸರ್ಕಾರ ಬೀಳುತ್ತದೆ ಎಂಬು ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಕಿಡಿಕಾರಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ 40 ಪರ್ಸೆಂಟ್‌ ಸರ್ಕಾರ ಎಂಬ ಕಾರಣದಿಂದ ಅಧಿಕಾರ ಕಳೆದುಕೊಂಡರು. ನಾವು ಭ್ರಷ್ಟಾಚಾರ ಮಾಡಿಲ್ಲ ಅಂತ ಸಾಬೀತುಪಡಿಸಲು ಅವರಿಗೆ ಆಗಲಿಲ್ಲ. ಚುನಾವಣೆಯಲ್ಲಿ ಬಿಜೆಪಿಯವರು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಾರಲ್ಲ, ಅವರೇನು ಸತ್ಯ ಹರಿಶ್ಚಂದ್ರರಾ? ಆ ದುಡ್ಡು ಎಲ್ಲಿಂದ ಬರುತ್ತೆ ತಿಳಿಸಲಿ ಎಂದರು.

ನೀರಿನಿಂದ ಹೊರಬಿದ್ದ ಮೀನಿನಂತೆ:

ಲೋಕಸಭೆ ಚುನಾವಣೆಯ ಆನಂತರ ಕಾಂಗ್ರೆಸ್‌ ಸರ್ಕಾರ ಇರುವುದಿಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ, ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡ ಮೇಲೆ ಸಹಿಸಿಕೊಳ್ಳಲು ಆಗುತ್ತಿಲ್ಲ. 130 ಸ್ಥಾನಗಳಲ್ಲಿ ಬರುತ್ತೇವೆ ಅಂತ 60 ಸ್ಥಾನಕ್ಕೆ ಇಳಿದರು. ಅವರೀಗ ನೀರಿನಿಂದ ಹೊರ ಬಿದ್ದ ಮೀನಿನಂತಾಗಿದ್ದಾರೆ. ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದರು.

ವಿಪ ಸದಸ್ಯ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಉತ್ತರಿಸಿದ ಶೆಟ್ಟರ, ಒಂದು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿ, ರಾಜ್ಯದ ಅಧ್ಯಕ್ಷರು ಕಾಳಜಿ ತೆಗೆದುಕೊಳ್ಳುತ್ತಾರೆ. ಅವರನ್ನು ಕರೆದು ಮಾತನಾಡಿಸಿ ಸರಿ ಮಾಡುವ ಕೆಲಸ ಮಾಡುತ್ತಾರೆ ಎಂದರು.

ಕಾಂಗ್ರೆಸ್‌ನಲ್ಲಿ ಯಾವುದು ಸರಿ ಇಲ್ಲ ಎಂಬ ವಿಚಾರ, ರಾಜಕಾರಣ ಅಂದರೆ ಹಾಗೆ ಏನು ಮಾಡಲೂ ಆಗುವುದಿಲ್ಲ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿಯಾಗಿರುತ್ತದೆ. ಅವರವರ ವೈಯಕ್ತಿಕ ಅಭಿಪ್ರಾಯ ಹೇಳಿಕೊಳ್ಳುತ್ತಾರೆ. ಅಂತಹ ಯಾವುದೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದರು.

ಇದಕ್ಕೆ ರಾಜಕಾರಣ ಎನ್ನುವುದು:

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೈ ಶ್ರೀರಾಮ್ ಎಂದ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್, ಅದಕ್ಕೆ ರಾಜಕಾರಣ ಎನ್ನುವುದು. ಈ ರಾಜಕಾರಣದಲ್ಲಿ ಯಾವಾಗ ಏನಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರು ಕೂಡ ಪರಿವರ್ತನೆಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಸನಗೌಡ ಪಾಟೀಲ ಯತ್ನಾಳ ಅವರೇ ಈಗ ಯಡಿಯೂರಪ್ಪ ಕುಟುಂಬವನ್ನು ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿದ್ದ ವೇಳೆ ನನ್ನನ್ನು ಕಡೆಗಣಿಸಲು ಏನು ಕಾರಣ ಎಂಬುದನ್ನು ಯತ್ನಾಳ್ ಅವರೇ ಉತ್ತರ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರು, ಪ್ರತಿಪಕ್ಷ ನಾಯಕ ಆದರೂ ರಿಪೇರಿ ಮಾಡದಷ್ಟು ಹಾಳಾಗಿದೆ. ಅದನ್ನು ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಅದರ ಪರಿಣಾಮ ಈಗ ನಾವು ನೋಡುತ್ತಿದ್ದೇವೆ ಎಂದರು.

Share this article