ಹುಬ್ಬಳ್ಳಿ: ಶ್ರೀರಾಮನ ಹೆಸರಲ್ಲಿ ಬಿಜೆಪಿ ದೇಶವನ್ನು ಲೂಟಿ ಮಾಡುವ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು.
ಶನಿವಾರ ಸಂಜೆ ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು."ರಾಮ ನಾಮ ಜಪನಾ ದೇಶ ಕಾ ಮಾಲ್ ಲೂಟನಾ " ಎಂಬುದು ಬಿಜೆಪಿಯ ಕನಸಾಗಿದೆ. ಇದನ್ನು ಬಿಟ್ಟರೆ 10 ವರ್ಷಗಳಲ್ಲಿ ಅವರು ಏನೂ ಮಾಡಿಲ್ಲ. ಈ ಬಾರಿಯೂ ಇದನ್ನೇ ಜಪಿಸುತ್ತಾ ಚುನಾವಣೆಗೆ ಹೋಗುವ ತವಕದಲ್ಲಿದ್ದಾರೆ ಎಂದರು.
ಇನ್ನು 3-4 ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುತ್ತಿದ್ದು, ಈ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಕಾರ್ಯಕರ್ತರು ಮೊದಲು ಪಕ್ಷದ ಐಡಿಯಾಲಜಿಗಳ ಕುರಿತು ಅರಿವು ಹೊಂದಬೇಕು. ಪಕ್ಷವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಅರಿವು ಹೊಂದಿದರೆ ಮಾತ್ರ ಜನತೆಯ ಮುಂದೆ ಮಾತನಾಡಲು, ಜಾಗೃತಿ ಮೂಡಿಸಲು ಸಾಧ್ಯ ಎಂದರು.ಈಚೆಗೆ ರಾಮ ಮಂದಿರ ಉದ್ಘಾಟಿಸಿ ಇವರೇ ಹಿಂದೂಗಳ ರಕ್ಷಣೆಯ ನೇತೃತ್ವ ವಹಿಸಿದಂತೆ ಬಿಜೆಪಿ ಬಿಂಬಿಸಲಾಗುತ್ತಿದೆ. ಆದರೆ, ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಟ್ಟು ಮತ ಕೇಳೋಣ ಎಂದರು.
ಬಿಜೆಪಿ ಏನೇ ಬೆಂಕಿ ಹಚ್ಚಲಿ, ನಾವು ಬೆಂಕಿ ಆರಿಸುವ ಕಾರ್ಯ ಮಾಡೋಣ. ದೇಶದಲ್ಲಿ 33 ಕೋಟಿ ದೇವರುಗಳಿವೆ. ಆದರೆ, ಆರ್‌ಎಸ್‌ಎಸ್, ಬಿಜೆಪಿಯವರು ಒಂದೇ ಒಂದು ಗುಡಿ ಕಟ್ಟಿಲ್ಲ. ಕಟ್ಟಿರುವುದು ಒಂದೇ ಶ್ರೀರಾಮ ಮಂದಿರ ಅದೂ ಜನರ ಹಣದಿಂದ. ಚುನಾವಣೆ ಅಂದರೆ ಸಂಘರ್ಷದ ಹಾದಿ ಎಂಬಂತಾಗಿದೆ. ಕಾಂಗ್ರೆಸ್ ಮಾಡಿರುವ ಕೆಲಸಕ್ಕೂ, ಮೋದಿ ಮಾಡುತ್ತಿರುವ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸ ಎಂದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಧಾರವಾಡ ಲೋಕಸಭೆ ಯಾರನ್ನ ಕಣಕ್ಕಿಳಿಸಬೇಕು ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡೋಣ. ಅವರು ಯಾರ ಹೆಸರು ಸೂಚಿಸುತ್ತಾರೆಯೋ ಅವರ ಗೆಲುವಿಗೆ ಎಲ್ಲರೂ ಶ್ರಮಿಸೋಣ. ಹಾಗೆಯೇ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸೇರಿ ಸಲ್ಲಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವಂತಾಗಲಿ ಎಂದು ಸಲಹೆ ನೀಡಿದರು.
ಇದೇ ವೇಳೆ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ, ಬಹುಜನ ಸಮಾಜ ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.ಈ ವೇಳೆ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಹಲ್ತಾಫ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.