ಅಜಾತ ಶತೃ ಆಗಿದ್ದವರು ಮಹಾನ್ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ದಾವಣಗೆರೆ: ಸೈದ್ಧಾಂತಿಕವಾಗಿ ಬಿಜೆಪಿಯನ್ನು ಟೀಕಿಸುತ್ತಿದ್ದವರೂ ಸಹ ಅವರನ್ನು ಟೀಕಿಸುತ್ತಿರಲಿಲ್ಲ ಅಂತಹ ಅಜಾತ ಶತೃ ಆಗಿದ್ದವರು ಮಹಾನ್ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಭಾರತ ರತ್ನ ದಿ.ಅಟಲ್ ಬಿಹಾರಿ ವಾಜಪೇಯಿಯವರ 99ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ದೇಶ ಕಂಡ ಅಪ್ರತಿಮ ರಾಜಕಾರಣಿ ವಾಜಪೇಯಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ, ಬಿಜೆಪಿಯ ಮೃದು ಹಿಂದುತ್ವದ ಮುಖವಾಗಿದ್ದವರು ಎಂದರು.
ಕವಿ ಹೃದಯಿ, ಚತುರ ಮಾತುಗಾರ, ಮುತ್ಸದಿ ಆಡಳಿತಗಾರ ಹೀಗೆ ನಾನಾ ಹೆಸರಿನಿಂದ ವಾಜಪೇಯಿಯವರಿಗೆ ಬಣ್ಣಿಸಿದರೂ ಅದೇನು ಉತ್ಪ್ರೇಕ್ಷೆಯಲ್ಲ. 13 ದಿನ ದೇಶದ ಪ್ರಧಾನಿಯಾಗಿ, ನಂತರ ಹಲವಾರು ಪಕ್ಷಗಳನ್ನು ಕಟ್ಟಿಕೊಂಡು, ಐದು ವರ್ಷ ಕಾಲ ಸ್ಥಿರ ಆಡಳಿತ ನೀಡಿದ ಹೆಗ್ಗಳಿಕೆ ವಾಜಪೇಯಿಯವರಿಗೆ ಸಲ್ಲುತ್ತದೆ. ಅಲ್ಲಿವರೆಗೆ ಕಾಂಗ್ರೆಸ್ಸೇತರ ಯಾವುದೇ ನಾಯಕರು 5 ವರ್ಷ ಆಡಳಿತ ನೀಡಿದ ನಿದರ್ಶನ ಇರಲಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಇಂದು ಏನಾಗಿದೆಯೋ ಅದರ ಪ್ರತಿ ಹಂತದ ಬೆಳವಣಿಗೆಯಲ್ಲಿ ಮಹಾನ್ ನಾಯಕ ವಾಜಪೇಯಿ ಪರಿಶ್ರಮ ಇದೆ. ಬಿಜೆಪಿ ಇಂದು ದೇಶಾದ್ಯಂತ ಹೆಮ್ಮರವಾಗಿ ಬೆಳೆದು ನಿಂತಿರುವುದಕ್ಕೆ ವಾಜಪೇಯಿ ಹಾಕಿದ ಭದ್ರ ಬುನಾದಿಯೇ ಕಾರಣವೆಂದರೂ ತಪ್ಪಾಗದು. 1998ರಿಂದ 2004ರವರೆಗೆ ಪ್ರಧಾನಿಯಾಗಿ ವಾಜಪೇಯಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದರು. ಮೈತ್ರಿ ರಾಜಕಾರಣದ ಒತ್ತಡ ಮತ್ತು ಸಂದಿಗ್ಧತೆಗಳನ್ನು ಸಂಭಾಳಿಸುತ್ತಲೇ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಹಿಂದೆ ಬೀಳಲಿಲ್ಲ ಎಂದು ವಿವರಿಸಿದರು.
ಪ್ರೋಕ್ರಾನ್ ಪರಮಾಣು ಪರೀಕ್ಷೆ, ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ, ಗ್ರಾಮ ಸಡಕ್ ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನ, ಹೊಸ ಟೆಲಿಕಾಂ ನೀತಿ ಹೀಗೆ ಹಲವಾರು ಯೋಜನೆಗಳನ್ನು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಸಮುದಾಯದ ಜನರಿಗೆ ತಲುಪಲು ವಾಜಪೇಯಿ ಕಾರಣರಾಗಿದ್ದಾರೆ. ಭೌತಿಕವಾಗಿ ವಾಜಪೇಯಿ ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಜನರ ಮನದಲ್ಲಿ ಅಟಲ್‌ರ ನೆನಪು ಅಚ್ಚಳಿಯದೇ ಉಳಿದಿದೆ. ವಾಜಪೇಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷ ಮಂಜಾನಾಯ್ಕ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಹಿರಿಯ ಮುಖಂಡರಾದ ವೈ.ಮಲ್ಲೇಶ, ಅಕ್ಕಿ ಪ್ರಭು ಕಲ್ಬುರ್ಗಿ, ಡಿಸಿಸಿ ಬ್ಯಾಂಕ್ ಮಾಡಿ ನಿರ್ದೇಶಕ ನಾಗರಾಜಪ್ಪ ಕತ್ತಲಗೆರೆ, ಶೇಖರಪ್ಪ, ಶಿವನಗೌಡ ಪಾಟೀಲ, ರಾಜು ನೀಲಗುಂದ, ಕೆಟಿಜೆ ನಗರ ಎಂ.ಆನಂದ, ನಿಂಗರಾಜ ರೆಡ್ಡಿ, ಟಿಂಕರ್ ಮಂಜಣ್ಣ, ವಕೀಲ ರಾಘವೇಂದ್ರ ಮೊಹರೆ, ಸ್ವಾಮಿ ಇತರರು ಇದ್ದರು.