ಮೈಸೂರು : ಸಿಎಂ ಮೇಲಿನ ಮುಡಾ ಹಗರಣ ಆರೋಪ ಅದು ಕೇವಲ ಆರೋಪ ಅಷ್ಟೇ. ಅದು ಒಂದು ವಿಷಯವೇ ಅಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷಯ ಅಲ್ಲದನ್ನು ವಿಷಯ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಯತ್ನವನ್ನ ಬಿಜೆಪಿ ಮಾಡುತ್ತಿದೆ. ಉಳಿದಂತೆ ಮುಡಾದ ಒಟ್ಟಾರೆ ವಿಚಾರವನ್ನ ತನಿಖಾ ಸಂಸ್ಥೆ ತನಿಖೆ ಮಾಡುತ್ತಿದೆ ಎಂದರು.ಸಿದ್ದರಾಮಯ್ಯ ನೈತಿಕವಾಗಿ ಬಹಳ ಗಟ್ಟಿಯಿರುವ ನಾಯಕ. ಸಮಾವೇಶ ಮಾಡಿ ಅವರಿಗೆ ನೈತಿಕ ಶಕ್ತಿ ತುಂಬುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಸದಾ ಕಾಲಕ್ಕೂ ನೈತಿಕತೆ ಉಳ್ಳ ಶಕ್ತಿವಂತ ನಾಯಕ. ಹಾಸನದ ಸಮಾವೇಶ ಪ್ರಜಾಪ್ರಭುತ್ವ ಆಶಯವನ್ನ ಗಟ್ಟಿ ಮಾಡುವ ಸಮಾವೇಶ. ಇದಕ್ಕೆ ಬೇರೆ ರೀತಿಯ ಅರ್ಥ ಬೇಡ. ಸಮಾವೇಶ ಪಕ್ಷದ ವಿರುದ್ಧ ಇದೇ ಎಂಬುದು ಬಿಜೆಪಿ, ಜೆಡಿಎಸ್ ಸೃಷ್ಟಿ ಮಾಡಿದ ಪಿತೂರಿ ಅಷ್ಟೇ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆಬೇರೆ ಪಕ್ಷದಿಂದ ನಮ್ಮ ತತ್ವ ಒಪ್ಪಿ ಬರುವವರಿಗೆ ಕಾಂಗ್ರೆಸ್ ಬಾಗಿಲು ಸದಾ ತೆರೆದಿರುತ್ತದೆ. ಕಾಂಗ್ರೆಸ್ ಮನೆ ಯಾವತ್ತು ಸಂಪೂರ್ಣ ಭರ್ತಿಯಾಗಿರುವುದಿಲ್ಲ. ಅದು ಸದಾ ಕಾಲ ಅದರ ಬಾಗಿಲು ತೆರೆದಿರುತ್ತದೆ. ಕಾಂಗ್ರೆಸ್ ಪಕ್ಷ ಅಲ್ಲ, ಕಾಂಗ್ರೆಸ್ ಒಂದು ಚಳವಳಿ. ಹೀಗಾಗಿ, ನಾವು ಸದಾ ಕಾಲ ಬಾಗಿಲು ತೆರೆದಿರುತ್ತೇವೆ, ಬರುವವರಿಗೆ ಸ್ವಾಗತ ಕೋರುತ್ತೇವೆ. ಈಗ ಸದ್ಯಕ್ಕೆ ಬೇರೆ ಪಕ್ಷದಿಂದ ಬರುವವರು ನನಗೆ ಕಾಣುತ್ತಿಲ್ಲ ಎಂದು ಅವರು ಹೇಳಿದರು.
ಯತ್ನಾಳ್ ಸಾಕ್ಷಿ ಕೊಟ್ಟರೆ ತನಿಖೆಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಈ ಬಗ್ಗೆ ಸಾಕ್ಷಿ ಕೊಟ್ಟರೆ ನಾವು ಅದನ್ನು ತನಿಖೆ ಮಾಡಿಸುತ್ತೇವೆ. ತಮ್ಮ ಹೇಳಿಕೆಯನ್ನ ಸಾಬೀತು ಪಡಿಸಲು ಯತ್ನಾಳ್ ಕೈಯಲ್ಲಿ ಮಾತ್ರ ಸಾಧ್ಯ. ಅವರು ಮೊದಲು ಸಾಕ್ಷಿ ಕೊಡಲಿ. ಆ ನಂತರ ಯಾವ ತನಿಖಾ ಸಂಸ್ಥೆಯಿಂದ ತಬಿಖೆ ಮಾಡಿಸಬೇಕು ಎಂಬುದನ್ನ ನಿರ್ಧರಿಸುತ್ತೇವೆ ಎಂದರು.
ಒಕ್ಕಲಿಗ ಸ್ವಾಮೀಜಿ ಮೇಲೆ ಕೇಸ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ನೆಲದಲ್ಲಿ ಕಾನೂನು ಎಲ್ಲರಿಗೂ ಒಂದೇ. ಅವರಿಗೊಂದು ಇವರಿಗೊಂದು ಕಾನೂನು ಇಲ್ಲ. ಕಾನೂನಿನಡಿಯಲ್ಲಿ ಯಾವುದು ತಪ್ಪಾಗಿರುತ್ತದೆ ಅದರ ಮೇಲೆ ಕ್ರಮ ಆಗುತ್ತದೆ. ಈ ವಿಚಾರದಲ್ಲಿ ರಾಜಕೀಯದ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದರು.