ಬಿಜೆಪಿ-ಜೆಡಿಎಸ್‌ ಲೋಕಸಭೆ ಸ್ಥಾನ ಹೊಂದಾಣಿಕೆ ಜಗ್ಗಾಟ

KannadaprabhaNewsNetwork | Published : Feb 23, 2024 1:46 AM

ಸಾರಾಂಶ

ಭದ್ರಕೋಟೆಯಾಗಿರುವ ಮಂಡ್ಯ ಸಿಗದಿದ್ದರೆ ಮೈಸೂರು ಮೇಲೆ ದಳಪತಿಗಳ ಕಣ್ಣು ಬಿದ್ದಿದ್ದು, ಹಾಲಿ ಸಂಸದರು ಇರುವ ಮೈಸೂರು ಕ್ಷೇತ್ರ ಬಿಡುವ ಮನಸ್ಸು ಬಿಜೆಪಿಗೆ ಇಲ್ಲವಾಗಿದೆ. ಉಭಯ ಪಕ್ಷಗಳ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಬಿಜೆಪಿಯದ್ದೇ ಮೇಲುಗೈ ಆಗಿದ್ದು, ಹೊಂದಾಣಿಕೆ ಆಗುವ ಮುನ್ನವೇ ಮೈತ್ರಿ ಘೋಷಿಸಿದ್ದ ಜೆಡಿಎಸ್‌ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಮೈತ್ರಿಯಿಂದ ಹೊರಬರಲು ಆಗದ ಕಾರಣ ಸೀಮಿತ ಸೀಟಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಇನ್ನೂ ಕಗ್ಗಂಟು ಮುಂದುವರೆದಿದ್ದು, ಮಂಡ್ಯ ಕ್ಷೇತ್ರ ಕುರಿತಂತೆ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ.ಹಾಸನ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಒಲವು ತೋರಿರುವ ಬಿಜೆಪಿ ವರಿಷ್ಠರು ಮಂಡ್ಯ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತಿಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮತ್ತು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು ಎಂದು ತಿಳಿದು ಬಂದಿದೆ.ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಷ್‌ ಅವರು ಯಾವುದೇ ಕಾರಣಕ್ಕೂ ಕ್ಷೇತ್ರ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ ಬಿಜೆಪಿ ನಾಯಕರಿಗೂ ಈ ಬಗ್ಗೆ ನಿರ್ಣಯ ಕೈಗೊಳ್ಳುವುದು ತುಸು ಕಷ್ಟಕರವಾಗಿದೆ. ಈ ನಡುವೆ ಜೆಡಿಎಸ್ ನಾಯಕರೂ ಮಂಡ್ಯ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದಾರೆ. ಒಂದು ವೇಳೆ ಮಂಡ್ಯ ಕ್ಷೇತ್ರ ಸಿಗುವುದೇ ಇಲ್ಲ ಎಂದಾದಲ್ಲಿ ಪಕ್ಕದ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೋರುವ ಸಾಧ್ಯತೆಯೂ ಇದೆ. ಆದರೆ ಬಿಜೆಪಿ ಕ್ಷೇತ್ರ ಬಿಡುವ ಮನಸ್ಸು ಬಿಜೆಪಿಗೆ ಇಲ್ಲ ಎನ್ನಲಾಗಿದೆ.ಇದೇ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಜೆಡಿಎಸ್ ನಾಯಕರು ಅಷ್ಟೇನೂ ಗಂಭೀರವಾಗಿ ಇಲ್ಲದಿದ್ದರೂ ಬಿಜೆಪಿ ನಾಯಕರು ಸೂಚಿಸಿದರೆ ಒಪ್ಪಬಹುದು ಎಂಬ ಮಾತು ಕೇಳಿಬಂದಿದೆ.ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿನ ಬೆಳವಣಿಗೆಗಳನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಂಡಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಹೆಚ್ಚು ಮತಗಳು ಬಂದಿವೆ. ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

Share this article