ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗನೂರ ಗ್ರಾಮದ ಯುವಕ ಬಿಜೆಪಿ ಯುವ ಮುಖಂಡ ಹಾಗೂ ಸಂಸದ ಡಾ. ಉಮೇಶ್ ಜಾಧವ ಆಪ್ತನಾಗಿದ್ದ ಗಿರೀಶಬಾಬು ಚಕ್ರ (31) ಎಂಬಾತನನ್ನು ಗುರುವಾರ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.ಘಟನೆ ಕುರಿತು ಮೃತ ಗಿರೀಶಬಾಬು ಅಣ್ಣ ಮಲ್ಲಣ್ಣ ಚಕ್ರ (50) ದೇವಲ ಗಾಣಗಾಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಗಿರೀಶಬಾಬು ನನ್ನು ಕಳೆದ ವಾರವಷ್ಟೇ ಸಂಸದ ಡಾ. ಉಮೇಶ್ ಜಾಧವ ಅವರು ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರಾಗಿ ನೇಮಿಸಿದ್ದರು. ನೇಮಕಗೊಂಡ ಖುಷಿಗೆ ಸಚಿನ ಶರಣಪ್ಪ ಕಿರಸಾವಳಗಿ ಹಾಗೂ ಮೂರು ಜನ ಸಹಚರರು ಸಾಗನೂರ ಗ್ರಾಮದಲ್ಲಿ ಗುರುವಾರ ರಾತ್ರಿ ಗಿರೀಶಬಾಬು ಚಕ್ರನಿಗೆ ಕಿರಾಣಿ ಅಂಗಡಿಯ ಎದುರು ಹೂವಿನ ಹಾರ, ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಿದ್ದರು.
ಸನ್ಮಾನದ ಬಳಿಕ ಪಾರ್ಟಿ ಮಾಡೋಣ ನಡಿ ಎಂದು ಸಂತೋಷ ಗಡಗಿ ಎನ್ನುವವರ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪಾರ್ಟಿ ಮಾಡಲು ಬೀಯರ್ ಹಾಗೂ ತಿನ್ನಲು ತಿಂಡಿ ತರಿಸುವಂತೆ ಹೇಳಿದಾಗ ಗಿರೀಶ ತನ್ನ ಜೊತೆಗಿದ್ದ ತನ್ನ ಅಳಿಯನಿಗೆ ಕಾರಿನಲ್ಲಿ ಬೀಯರ್ ತರಲು ಕಳಿಸಿದ್ದಾರೆ, ಇದೇ ಸಮಯ ಸಾಧಿಸಿಕೊಂಡ ಸಚೀನ ಹಾಗೂ ಸಹಚರರು ಗಿರೀಶ ಕಣ್ಣಿಗೆ ಖಾರ ಎರಚಿ ಕಲ್ಲು ಹಾಗೂ ಮಾರಕಾಸ್ತ್ರದಿಂದ ಹಲ್ಲೆಗೊಳಿಸಿ ಕೊಎಲಗೈದಿದ್ದಾರೆ. ಕೊಲೆಗೈದಿರುವ ದೃಶ್ಯವನ್ನು ಕಾರಿನ ಬೆಳಕಿನಲ್ಲಿ ನೋಡಿದ್ದೇನೆ ಎಂದು ಮೃತ ಗಿರೀಶಬಾಬು ಅಳಿಯ ಮಾಹಿತಿ ನೀಡಿದ್ದಾನೆ.ಗೆಳೆಯ ಎನ್ನುತ್ತಲೇ ಗುನ್ನಾ ಇಟ್ಟ: ಗೆಳೆಯ ಎನ್ನುತ್ತಲೇ ಗುನ್ನಾ ಇಟ್ಟ ಸಚಿನ್ ಆ್ಯಂಡ್ ಗ್ಯಾಂಗ್ ಗಿರೀಶಬಾಬು ಜೊತೆಗೆ ಗೆಳೆತನ ಇಟ್ಟುಕೊಡಿದ್ದ ಸಚೀನ ಕಿರಸಾವಳಗಿ ಎರಡು ವರ್ಷಗಳ ಹಿಂದೆ ಕೊಲೆ ಕೇಸೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದವನೇ ಗೆಳೆಯ ಎನ್ನುತ್ತ ಗಿರೀಶನನ್ನು ಶಾಲು ಹೊದಿಸಿ ಹೂಹಾರ ಹಾಕಿ ಸನ್ಮಾನಿಸಿ ಸಂಭ್ರಮಿಸೋಣ ಬಾ ಎಂದು ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ. ದೇವಲ ಗಾಣಗಾಪುರ ಠಾಣೆ ಪಿಎಸ್‌ಐ ಪರಶುರಾಮ ಜಿ.ಸಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಗಿರೀಶಬಾಬು ಕೊಲೆಯಿಂದಾಗಿ ಸಾಗನೂರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಜವಾದ ಕಾರಣವೇನು ಎನ್ನುವುದು ತನಿಖೆಯ ಬಳಿಕವಷ್ಟೇ ಹೊರಬರಲಿದೆ.