ನಾಲ್ವಡಿಯವರ ಆಶಯಕ್ಕೆ ವಿರುದ್ಧವಾಗಿ ಎಂಡಿಎ ಕಾರ್ಯನಿರ್ವಹಣೆ: - ಸಂದೇಶ್ ಸ್ವಾಮಿ ಆರೋಪ

KannadaprabhaNewsNetwork | Published : Mar 11, 2024 1:17 AM

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದು ಸಿಐಟಿಬಿ ಸ್ಥಾಪಿಸಿದ್ದು ಮೈಸೂರಿನ ಸಮಗ್ರ ಅಭಿವೃದ್ಧಿಗೆ ಹಾಗೂ ಸೂರಿಲ್ಲದವರಿಗೆ ಸೂರು ಕಲ್ಪಿಸಲು. ಇಂದು ನಗರ ಸಾಕಷ್ಟು ವಿಸ್ತಾರವಾಗಿದೆ. ಆ ಕಾಲದಲ್ಲಿ ತಾಜ್ಯ ಸಂಗ್ರಹಕ್ಕೆ ಮೀಸಲಿರಿಸಿದ ಜಾಗದ ಹೊರತಾಗಿ ಎಂಡಿಎ ಯಾವುದೇ ಜಾಗವನ್ನು ತಾಜ್ಯ ನಿರ್ವಹಣೆಗೆ ಗುರುತಿಸಿಲ್ಲ ಮತ್ತು ಮೀಸಲಿಟ್ಟಿಲ್ಲ‌. ಒಳಚರಂಡಿ ನೀರನ್ನು ಪುನರ್ ಬಳಕೆ ಮಾಡಲು ಯಾವುದೇ ಜಾಗವನ್ನು ಮೀಸಲಿರಿಸಿಲ್ಲ. ಕಲುಷಿತ ಒಳಚರಂಡಿ ನೀರು ವಿವಿಧ ಕೆರೆಗಳು ಹಾಗೂ ನಾಲೆಗಳತ್ತ ಹರಿದಿರುವುದು ಅಪಾಯಕಾರಿ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಂದಿನ ಸಿಐಟಿಬಿ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ ಆಶಯಕ್ಕೆ ವಿರುದ್ಧವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಜಿ ಮೇಯರ್, ಎಂಡಿಎ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಆರೋಪಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದು ಸಿಐಟಿಬಿ ಸ್ಥಾಪಿಸಿದ್ದು ಮೈಸೂರಿನ ಸಮಗ್ರ ಅಭಿವೃದ್ಧಿಗೆ ಹಾಗೂ ಸೂರಿಲ್ಲದವರಿಗೆ ಸೂರು ಕಲ್ಪಿಸಲು. ಇಂದು ನಗರ ಸಾಕಷ್ಟು ವಿಸ್ತಾರವಾಗಿದೆ. ಆ ಕಾಲದಲ್ಲಿ ತಾಜ್ಯ ಸಂಗ್ರಹಕ್ಕೆ ಮೀಸಲಿರಿಸಿದ ಜಾಗದ ಹೊರತಾಗಿ ಎಂಡಿಎ ಯಾವುದೇ ಜಾಗವನ್ನು ತಾಜ್ಯ ನಿರ್ವಹಣೆಗೆ ಗುರುತಿಸಿಲ್ಲ ಮತ್ತು ಮೀಸಲಿಟ್ಟಿಲ್ಲ‌. ಒಳಚರಂಡಿ ನೀರನ್ನು ಪುನರ್ ಬಳಕೆ ಮಾಡಲು ಯಾವುದೇ ಜಾಗವನ್ನು ಮೀಸಲಿರಿಸಿಲ್ಲ. ಕಲುಷಿತ ಒಳಚರಂಡಿ ನೀರು ವಿವಿಧ ಕೆರೆಗಳು ಹಾಗೂ ನಾಲೆಗಳತ್ತ ಹರಿದಿರುವುದು ಅಪಾಯಕಾರಿ ಎಂದು ತಿಳಿಸಿದ್ದಾರೆ.

ನಗರಾಭಿವೃದ್ಧಿ ಕಾಯ್ದೆ ಪ್ರಕಾರ ಬಡಾವಣೆಯ ನಿವೇಶನದಾರರಿಂದ ಯಾವುದೇ ಕಂದಾಯವನ್ನು ವಸೂಲಿ ಮಾಡುವಂತಿಲ್ಲ. ಅದರೂ ಕಂದಾಯ ಮತ್ತು ವರ್ಗಾವಣೆ ಶುಲ್ಕ ವಸೂಲಿ ಮಾಡಿ, ಬಜೆಟ್ ಮಂಡಿಸಿ ಸರ್ಕಾರದ ಅನುಮತಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಇದಕ್ಕೆ ಯಾವ ರೀತಿ ಅನುಮೋದನೆ ನೀಡುತ್ತಿದ್ದಾರೆ ಎಂಬುದು ಆಶ್ಚರ್ಯ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ಎಂಡಿಎ ಮುಖ್ಯ ಉದ್ದೇಶ ಜಮೀನು ಖರೀದಿಸಿ, ಬಡಾವಣೆ ಅಭಿವೃದ್ಧಿ ಮಾಡಿ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ನಿವೇಶನ ಅಥವಾ ಮನೆ ನಿರ್ಮಿಸುವುದು. ನಂತರ ಆ ಬಡಾವಣೆಯನ್ನು ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸುವುದು. ಸ್ಥಳೀಯ ಸಂಸ್ಥೆಯು ಕಂದಾಯ ವಸೂಲಿ ಮಾಡಿ ನಿರ್ವಹಿಸಬೇಕಿರುವುದು ನಿಯಮ. ಆದರೆ, ಕಾಯ್ದೆಯ ಶೇ.100 ರಲ್ಲಿ 20 ರಷ್ಟಾದರೂ ನಿಯಮವನ್ನು ಎಂಡಿಎ ಪಾಲಿಸುತ್ತಿಲ್ಲ. ಮೂಲ ಉದ್ದೇಶ ಮರೆತು ರಿಯಲ್ ಎಸ್ಟೇಟ್ ಏಜೆನ್ಸಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದ್ದಾರೆ.

400- 500 ಖಾಸಗಿ ಬಡಾವಣೆಗಳು ನಿರ್ಮಾಣಗೊಂಡು, ಸಿಡಿಪಿ ನಕ್ಷೆ ಪ್ರಕಾರ ರಸ್ತೆ ಸಂಪರ್ಕವನ್ನು ಬೇರೆ ಜಮೀನಿನಲ್ಲಿ ತೋರಿಸಿ ಬಡಾವಣೆಗೆ ಅನುಮೋದನೆ ಪಡೆದಿವೆ. ಈ ಎಡವಟ್ಟಿನಿಂದ ನಿವೇಶನ ಕೊಂಡ ಬಡವರು ಮನೆ ಕಟ್ಟಲಾಗದೆ ಹತ್ತಾರು ವರ್ಷಗಳಿಂದ ಪರಿತಪಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ನರಸಿಂಹರಾಜ ಕ್ಷೇತ್ರದಲ್ಲಿ ಹೆಚ್ಚಿನ ಅನಧಿಕೃತ ಬಡಾವಣೆಗಳಿವೆ. ಇಂದಿಗೂ ರೆವಿನ್ಯೂ ಬಡಾವಣೆಗಳು ತಲೆ ಎತ್ತುತ್ತಲಿವೆ. 35 ವರ್ಷಗಳಿಂದ ಎಂಡಿಎ ಸದಸ್ಯರಾಗಿರುವ ಶಾಸಕ ತನ್ವೀರ್ ಸೇಠ್ ಅವರು ಈ ಬಗ್ಗೆ ಸಭೆಯಲ್ಲಿ ಚರ್ಚಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅದೆನೇ ಇರಲಿ, ಎಂಡಿಎ ಕಾರ್ಯವೈಖರಿ ಹಾಗೂ ಅನಧಿಕೃತ ಬಡಾವಣೆಗಳ ಅಕ್ರಮ ಮತ್ತು ಅನ್ಯಾಯದಿಂದ ಬೇಸತ್ತು ತನ್ವೀರ್ ಸೇಠ್ ಅವರು ಎಂಡಿಎ ಮುಚ್ಚುವುದು ಒಳ್ಳೆಯದು ಎಂದು ಸಲಹೆ ನೀಡಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

Share this article