ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆ

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೇ ತಮ್ಮ ತವರು ಕ್ಷೇತ್ರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆಗೆ ಅವಕಾಶ ಕೊಟ್ಟು ಬದಿಗೆ ಸರಿದಿದ್ದಾರೆ. ದಿ. ಬಂಗಾರಪ್ಪ ಹೆಸರನ್ನೇ ಮುಂದಿಟ್ಟು ಚುನಾವಣಾ ಕಣದಲ್ಲಿ ಪ್ರಚಾರ ಮಾಡಿದ್ದ ಮಧು ಬಂಗಾರಪ್ಪ ಸೋದರಿ ಗೀತಾ ತಮ್ಮ ತಂದೆಯ ಹೆಸರೇ ತಮ್ಮನ್ನು ಗೆಲ್ಲಿಸುತ್ತದೆ ಎಂಬ ನಂಬಿಕೆಗೆ ಅವರ ತವರು ಕ್ಷೇತ್ರದ ಮತದಾರರೇ ಕೈಕೊಟ್ಟಿದ್ದಾರೆ. ಬಂಗಾರಪ್ಪ ಹೆಸರಾಗಲೀ, ಖ್ಯಾತ ನಟ ರಾಜ್ ಕುಟುಂಬದ ಹೆಸರಾಗಲೀ ಮತದಾರರ ಮೇಲೆ ಯಾವುದೇ ಮೋಡಿ ಮಾಡಲಿಲ್ಲ.

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 3 ವಿಧಾನಸಭಾ ಕ್ಷೇತ್ರಗಳ ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷಕ್ಕೆ ಸಾಥ್ ನೀಡಿದ್ದ ಈ ಮೂರು ಕ್ಷೇತ್ರದ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಎಂದಿನಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ!!

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೇ ತಮ್ಮ ತವರು ಕ್ಷೇತ್ರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆಗೆ ಅವಕಾಶ ಕೊಟ್ಟು ಬದಿಗೆ ಸರಿದಿದ್ದಾರೆ. ದಿ. ಬಂಗಾರಪ್ಪ ಹೆಸರನ್ನೇ ಮುಂದಿಟ್ಟು ಚುನಾವಣಾ ಕಣದಲ್ಲಿ ಪ್ರಚಾರ ಮಾಡಿದ್ದ ಮಧು ಬಂಗಾರಪ್ಪ ಸೋದರಿ ಗೀತಾ ತಮ್ಮ ತಂದೆಯ ಹೆಸರೇ ತಮ್ಮನ್ನು ಗೆಲ್ಲಿಸುತ್ತದೆ ಎಂಬ ನಂಬಿಕೆಗೆ ಅವರ ತವರು ಕ್ಷೇತ್ರದ ಮತದಾರರೇ ಕೈಕೊಟ್ಟಿದ್ದಾರೆ. ಬಂಗಾರಪ್ಪ ಹೆಸರಾಗಲೀ, ಖ್ಯಾತ ನಟ ರಾಜ್ ಕುಟುಂಬದ ಹೆಸರಾಗಲೀ ಮತದಾರರ ಮೇಲೆ ಯಾವುದೇ ಮೋಡಿ ಮಾಡಲಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಸೊರಬ, ಭದ್ರಾವತಿ ಮತ್ತು ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಯತ್ತ ಮನಸೋತು ಮತ ಹಾಕಿದ್ದ ಮತದಾರರು ಈ ಬಾರಿಯ ಚುನಾವಣೆಯಲ್ಲಿಯೂ ತಮ್ಮ ಕೈ ಹಿಡಿಯುತ್ತಾರೆ ಎಂದು ಪಕ್ಷದ ನಾಯಕರು ನಂಬಿದ್ದರು. ಆದರೆ ಜಿಲ್ಲೆಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಮತದಾರರು ಬಿಜೆಪಿಯತ್ತ ಹೊರಳಿರುವುದು ಸ್ಪಷ್ಟವಾಗುತ್ತದೆ.

ಸೊರಬ:

ಸೊರಬ ವಿಧಾನಸಭಾ ಕ್ಷೇತ್ರವು ಜಿಲ್ಲಾ ಉಸ್ತುವಾರಿ ಸಚಿವರೂ, ಇಡೀ ಚುನಾವಣೆಯ ಹೊಣೆ ಹೊತ್ತ ಮಧು ಬಂಗಾರಪ್ಪ ಸೊರಬ ಕ್ಷೇತ್ರವು ಸ್ವಕ್ಷೇತ್ರ ಮಾತ್ರವಲ್ಲ, ಕಾಂಗ್ರೆಸ್ ಅಭ್ಯರ್ಥಿ ಗೀತಾ ತವರು ಮನೆಯೂ ಆಗಿತ್ತು. ಹೀಗಾಗಿ ಇಲ್ಲಿ ಮಾತ್ರ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಉಲ್ಟಾಪಲ್ಟಾ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪನವರಿಗೆ 98,912 ಮತಗಳು ಸಿಕ್ಕಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಗೆ 70,233 ಮತಗಳು ಮಾತ್ರ ಸಿಕ್ಕಿದೆ. ಈ ಕ್ಷೇತ್ರದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ 54,650 ಮತ ಗಳಿಸಿದ್ದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 88,170 ಮತ ಪಡೆದಿದೆ.

ಸಾಗರ:

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ 88,988 ಮತಗಳ ಗಳಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರದಲ್ಲಿ 68,690 ಮತಗಳ ಮಾತ್ರ ಗಳಿಸಿದರು. ಬದಲಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 70,946 ಮತ ಗಳಿಸಿದ್ದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 95,209 ಮತಗಳನ್ನು ಗಳಿಸಿದೆ.

ಭದ್ರಾವತಿ:2023 ರ ವಿಧಾನಸಭಾ ಚುನಾವಣೆಯಲ್ಲಿ 66,208 ಮತ ಪಡೆದಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗೆ 65,105 ಮತ ಗಳಿಸಿಕೊಟ್ಟಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 63,503 ಮತ್ತು ಬಿಜೆಪಿ 21,279 ಮತ ಪಡೆದಿದ್ದು,ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒಟ್ಟು 84108 ಮತ ಗಳಿಸಿದೆ. ಈ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಒಂದು ಸಾವಿರ ಮತಗಳನ್ನು ಮಾತ್ರ ಬಿಟ್ಟುಕೊಟ್ಟಿದೆ.

ಡಿಕೆಶಿ ಮಾತು:

ಈ ಬಾರಿ ಚುನಾವಣೆಗೆ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭದ್ರಾವತಿಯ ಬಿ. ಕೆ. ಸಂಗಮೇಶ್ ಸೇರಿ ಮೂರು ಮಂದಿ ಕಾಂಗ್ರೆಸ್ ಶಾಸಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಡೆದ ಮತಕ್ಕಿಂತ ಒಂದು ಮತ ಕೂಡ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈ ಮೂರೂ ಕ್ಷೇತ್ರಗಳಲ್ಲಿ ಇದು ನಡೆದಿಲ್ಲ.

Share this article