ರಾಜ್ಯ ಬಿಜೆಪಿಯಿಂದ ಇಂದು ನಾರಿಶಕ್ತಿ ಸ್ಕೂಟರ್‌ ಯಾತ್ರೆ

KannadaprabhaNewsNetwork | Updated : Mar 05 2024, 10:53 AM IST

ಸಾರಾಂಶ

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ರಾಜ್ಯಾದ್ಯಂತ ‘ನಾರಿಶಕ್ತಿ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ರಾಜ್ಯಾದ್ಯಂತ ‘ನಾರಿಶಕ್ತಿ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಕೂಟಿ, ಬೈಕ್, ಸೈಕಲ್ ಯಾತ್ರೆಗಳು ನಡೆಯಲಿವೆ ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶಾದ್ಯಂತ ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಮಾರ್ಚ್ 4ರಿಂದ 6 ರವರೆಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಪಶ್ಚಿಮ ಬಂಗಾಳದ ಸಂದೇಶ್‍ಖಾಲಿಯಲ್ಲಿ ಗರಿಷ್ಠ ಮಹಿಳಾ ದೌರ್ಜನ್ಯ ನಡೆಯುತ್ತಿದೆ. 

ಇದೇ 6 ರಂದು ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು, ಅನಾಚಾರಗಳು ಹಾಗೂ ಮಹಿಳೆಯರ ಮೇಲೆ ನಡೆದಂತಹ ಘನ ಘೋರ ಆಕ್ರಮಣವನ್ನು ಖಂಡಿಸಲಾಗುವುದು. 

ಶಾಜಹಾನ್ ಎಂಬ ಒಬ್ಬ ಪುಂಡನ ಬೆಂಬಲಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ನಿಂತಿದೆ. ಇದರ ವಿರುದ್ಧ ಹಾಗೂ ನಮ್ಮ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರಂತರವಾಗಿ ನಿರ್ಲಕ್ಷ್ಯ ವಹಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾವು ಸಂದೇಶ್‍ಖಾಲಿಯಲ್ಲಿ ಒಂದು ಲಕ್ಷ ಮಹಿಳೆಯರ ಸಭೆಯನ್ನು ಆಯೋಜಿಸಲಿದೆ. ಈ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. 

ಬೆಳಗ್ಗೆ 10.30ಕ್ಕೆ ದೇಶದ ಎಲ್ಲಾ ಮಂಡಲಗಳಲ್ಲಿ ಹಾಗೂ ಕರ್ನಾಟಕದ 312 ಸಂಘಟನಾತ್ಮಕ ಮಂಡಲಗಳಲ್ಲಿ ಎಲ್‍ಇಡಿ ಪರದೆ ಅಳವಡಿಸಿ ಪ್ರಧಾನಿಯವರ ಭಾಷಣವನ್ನು ನೇರ ಪ್ರಸಾರ ಮಾಡಲಾಗುತ್ತದೆ. ಇದನ್ನು ನಾವೆಲ್ಲರೂ ಕೇಳಲಿದ್ದೇವೆ. ನಂತರ 12ಕ್ಕೆ ಮಹಿಳಾ ಸಮಾವೇಶ ನಡೆಯಲಿವೆ ಎಂದು ಹೇಳಿದರು.

Share this article