ನಾಳೆ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಸಮಾವೇಶ: ಶಿವಕುಮಾರ

KannadaprabhaNewsNetwork |  
Published : Mar 11, 2024, 01:15 AM IST
10ಕೆಡಿವಿಜಿ5-ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಓಬಿಸಿ ಮೋರ್ಚಾ ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಬಿ.ಎಂ.ಸತೀಶ, ಎ.ವೈ.ಪ್ರಕಾಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಸಂದೇಶ ಸಾರಲು ಮಾ.12ರಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದುಳಿದ ವರ್ಗದವರೇ ಆದ ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಸಂದೇಶ ಸಾರುವ ನಿಟ್ಟಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಜಿಲ್ಲಾ ಸಮಾವೇಶವನ್ನು ಇಲ್ಲಿನ ವಿನೋಬ ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಮುದಾಯ ಭವನದಲ್ಲಿ ಮಾ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ಆರಂಭಗೊಳ್ಳುವ ಸಮಾವೇಶದಲ್ಲಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಎಂ.ಡಿ. ಲಕ್ಷ್ಮೀನಾರಾಯಣ ಇತರರು ಭಾಗವಹಿಸುವರು ಎಂದರು.

ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಅಹಿಂದ ಮಂತ್ರ ಜಪ ಮಾಡುತ್ತಿದ್ದರು. ಆದರೆ, ಮುಖ್ಯಮಂತ್ರಿಯಾದ ನಂತರ ಹಿಂದ ಎಂಬುದನ್ನೇ ಹಿಂದಕ್ಕೆ ತಳ್ಳಿ, ಹಿಂದುಳಿದವರು, ದಲಿತರನ್ನು ಬಿಟ್ಟು, ಅಲ್ಪಸಂಖ್ಯಾತರನ್ನು ಹೊತ್ತು ಮೆರೆಯುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದವರಾಗಿದ್ದು, ಇಡೀ ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೋದಿಯಂತಹ ನಾಯಕರ ಜೊತೆಗೆ ಹಿಂದುಳಿದ ವರ್ಗ ಇದೆಯೆಂಬ ಸಂದೇಶ ಸಾರಲು ಸಮಾವೇಶ ಆಯೋಜಿಸಿದೆ ಎಂದು ಅವರು ಹೇಳಿದರು.

ರೈತ ಮೋರ್ಚಾ ಮುುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಯೋಜನೆ, ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಈವರೆಗೆ ಹಿಂದುಳಿದ ವರ್ಗಗಳು ಶೈಕ್ಷಣಿಕ, ಸಾಮಾಜಿಕ, ‍ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಯಾವುದೇ ಕಾರ್ಯಕ್ರಮ ಜಾರಿಗೊಳಿಸಿಲ್ಲ. ಮತಗಳಿಗಾಗಿ ಬರೀ ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳು ತೀವ್ರ ಬೇಸತ್ತಿದ್ದಾರೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಹಾಗಾಗಿ ಕಾಯಕ ಸಮಾಜದವರಿಗೆ ಸಾಲ ಸೌಲಭ್ಯ, ಇತರೆ ಅನುಕೂಲಕ್ಕಾಗಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ. ದಾವಣಗೆರೆಯಲ್ಲಿ 1.50 ಲಕ್ಷ ರು., ರಾಜ್ಯದಲ್ಲಿ 24 ಲಕ್ಷ ಜನರು ನೋಂದಣಿ ಮಾಡಿಸಿದ್ದಾರೆ. ಈ ಯೋಜನೆಗಾಗಿ 6 ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರಿಗೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ದೂಡಾ ಮಾಜಿ ಅಧ್ಯಕ್ಷ, ಉಪ್ಪಾರ ಸಮಾಜದ ಮುಖಂಡ ಎ.ವೈ.ಪ್ರಕಾಶ ಮಾತನಾಡಿ, ಹಿಂದುಳಿದ ವರ್ಗಗಳವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಧಿಕಾರ ದೊರೆಯುವುದಿಲ್ಲ. ನಾವೇನಾದರೂ ಬಿಜೆಪಿಯಲ್ಲಿ ಇಲ್ಲದೇ ಇದ್ದಿದ್ದರೆ ನಾನಾಗಲೀ ಅಥವಾ ರಾಜನಹಳ್ಳಿ ಶಿವಕುಮಾರ ಆಗಲಿ ದಡಾ ಅಧ್ಯಕ್ಷರಾಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ, ಅಧಿಕಾರವಂತೂ ಹಿಂದುಳಿದ ವರ್ಗದವರಿಗೆ ಸಿಗುವುದಿಲ್ಲ. ಹಿಂದುಳಿದ ವರ್ಗದವರು ಕಾಂಗ್ರೆಸ್ಸನ್ನು ಬಿಟ್ಟು, ಬಿಜೆಪಿಗೆ ಸೇರ್ಪಡೆ ಯಾಗಬೇಕು ಎಂದು ಕರೆ ನೀಡಿದರು.

ಪಕ್ಷದ ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹೇಂದ್ರ ಹೆಬ್ಬಾಳು, ರಘುನಂದನ್ ಅಂಬರಕರ್, ಡಿ.ಬಸವರಾಜ ಗುಬ್ಬಿ, ಕೊಟ್ರೇಶಾಚಾರ್, ನವೀನ, ಕಿರೀಟ್ ಕಲಾಲ್, ಅಣಜಿ ಗುಡ್ಡೇಶ್ ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ