ಭಟ್ಕಳ:
ತಾಲೂಕಿನ ಹೆಬಳೆಯ ತೆಂಗಿನಗುಂಡಿ ಬೀಚ್ ರಸ್ತೆಗೆ ಹಾಕಲಾಗಿದ್ದ ವೀರಸಾವರ್ಕರ್ ಹೆಸರಿನ ನಾಮಫಲಕವನ್ನು ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಮಂಗಳವಾರ ಪಂಚಾಯಿತಿ ಎದುರು ಧರಣಿ ನಡೆಸಿ ಅನಧಿಕೃತವಾಗಿ ಹಾಕಲಾದ ಎಲ್ಲ ನಾಮಫಲಕ ಮತ್ತು ಕಟ್ಟಡ ತೆರವುಗೊಳಿಸಲು ಒತ್ತಾಯಿಸಿದರು.ಆರಂಭದಲ್ಲಿ ಹೆಬಳೆ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರು ಮಾತ್ರ ಧರಣಿ ಕುಳಿತಿದ್ದು, ಈ ವಿಚಾರ ತಿಳಿದ ನಂತರ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ಸ್ಥಳಕ್ಕಾಗಮಿಸಿ ವೀರಸಾವರ್ಕರ್ ನಾಮಫಲಕ ತೆರವುಗೊಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ನಾಮಫಲಕರ ಮರುಸ್ಥಾಪನೆಗೆ ಅವಕಾಶ ಕೊಡಬೇಕು, ಇಲ್ಲದಿದ್ದಲ್ಲಿ ಅನಧಿಕೃತವಾದ ಎಲ್ಲವನ್ನೂ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.ಧರಣಿ ನಿರತ ಹೆಬಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, ತೆಂಗಿನಗುಂಡಿ ಬಂದರು ರಸ್ತೆಗೆ ವೀರ ಸಾರ್ವಕರ ಹೆಸರಿಡುವಂತೆ 2022ರಲ್ಲಿ ಸಾರ್ವಜನಿಕರು ನೀಡಿದ ಮನವಿಯನ್ನು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 30 ಸದಸ್ಯರು ಅನುಮೋದನೆ ನೀಡಿದ್ದಾರೆ. ಆದರೆ ಇದಕ್ಕೆ ಅಂದಿನ ಪಿಡಿಒ ಹಿಂಬರಹ ನೀಡದ ಕಾರಣ ನಾಮಫಲಕ ಹಾಕಲು ಅನುಮತಿ ಪಡೆದುಕೊಂಡಿರಲಿಲ್ಲ. ವೀರ ಸಾರ್ವಕರ ನಾಮಫಲಕ ತೆರವು ಮಾಡುವಂತೆ ಯಾವುದೇ ಲಿಖಿತ ದೂರುಗಳು ಪಂಚಾಯಿತಿಗೆ ಬರದೇ ಇದ್ದರೂ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರದೇ ಶನಿವಾರ ಏಕಾಏಕಿ ಜೆಸಿಬಿ ಯಂತ್ರ ತಂದು ನಾಮಫಲಕ ಮತ್ತು ಧ್ವಜಸ್ತಂಭ ತೆರವು ಮಾಡಿದ್ದಾರೆ. ಆಡಳಿತ ಸದಸ್ಯರ ಹಾಗೂ ಅಧ್ಯಕ್ಷರ ವಿರೊಧದ ನಡುವೆಯೂ ಪಿಡಿಒ ಯಾರ ಒತ್ತಡಕ್ಕೆ ಮಣಿದು ನಾಮಫಲಕ ತೆರವು ಮಾಡಿದ್ದಾರೆ ಎನ್ನುವುದನ್ನು ಈಗಲೇ ಸ್ಪಷ್ಟಪಡಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಕಲಾಗಿರುವ ಎಲ್ಲ ಅನಧಿಕೃತ ನಾಮಫಲಕ ತೆರವು ಮಾಡುವಂತೆ ನಾವು ಎರಡು ದಿನಗಳ ಹಿಂದಯೇ ಲಿಖಿತವಾಗಿ ದೂರು ನೀಡಿದ್ದರೂ ಪಿಡಿಒ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ತೆಂಗಿನಗುಂಡಿ ರಸ್ತೆಯಲ್ಲಿ ಹಾಕಲಾಗಿರುವ ಜಾಮಿಯಾಬಾದ್ ರಸ್ತೆ ಎನ್ನುವ ಅನಧಿಕೃತ ನಾಮಫಲಕವನ್ನು ಮೊದಲು ತೆರವು ಮಾಡಬೇಕು. ಪಿಡಿಒ ಇದಕ್ಕೆ ಒಪ್ಪದಿದ್ದಲ್ಲಿ ಧರಣಿ ಮುಂದುವರಿಸಲಾಗುವುದು ಎಂದರು.ಜಿಲ್ಲಾ ಬಿಜೆಪಿ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ, ಗ್ರಾಪಂ ಸದಸ್ಯರ ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ನಾಮಫಲಕ ತೆರವು ಮಾಡಿರುವುದಕ್ಕೆ ಪಿಡಿಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡದಂತೆ ಎಚ್ಚರಿಕೆ ನೀಡಿ, ಸಾರ್ವಕರ್ ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಪಿಡಿಒ ಹೆಬಳೆಯ ಜಾಮಿಯಾಬಾದ್ ರಸ್ತೆ ನಾಮಫಲಕ ತೆರವು ಮಾಡಲು ಮುಂದಾಗದೇ ಇದ್ದಾಗ, ಆಕ್ರೋಶಗೊಂಡ ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜತೆಗೂಡಿ ತೆಂಗಿನಗುಂಡಿ ಬಂದರನಲ್ಲಿ ಪುನಃ ವೀರ ಸಾರ್ವಕರ ನಾಮಫಲಕ ಅಳವಡಿಸಲು ಕಟ್ಟೆಕಟ್ಟಲು ಮುಂದಾದರು. ಇದಕ್ಕೆ ಪೊಲೀಸರು ತಡೆಯಲು ಯತ್ನಿಸಿದಾಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು.
ಈ ವೇಳೆ ಮಾತನಾಡಿದ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತಿತರರು ಲಿಖಿತವಾಗಿ ನೀಡಿರುವ 6 ಅನಧಿಕೃತ ನಾಮಫಲಕವವನ್ನು ವಾರದೊಳಗೆ ಪಿಡಿಒ ತೆರವುಗೊಳಿಸಿದಲ್ಲಿ ನಾವು ಸ್ವಯಂ ಪ್ರೇರಿತರಾಗಿ ನಾಮಫಲಕ ಹಾಕಲು ಕಟ್ಟಿದ್ದ ಕಟ್ಟೆ ತೆರವುಗೊಳಿಸುತ್ತೇವೆ. ಒಂದೊಮ್ಮೆ ನಾವು ತಿಳಿಸಿದ ಅನಧಿಕೃತ ನಾಮಫಲಕ ತೆರವು ಮಾಡದೇ ಇದ್ದಲ್ಲಿ ಇದೇ ಕಟ್ಟೆಯಲ್ಲಿ ವೀರ ಸಾರ್ವಕರ ನಾಮಫಲಕ ಮರುಸ್ಥಾಪಿಸುವುದಾಗಿ ಎಚ್ಚರಿಕೆ ನೀಡಿದರು.ತೆಂಗಿನಗುಂಡಿಯ ಈ ನಾಮಫಲಕದ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಬಳೆ ಗ್ರಾಪಂನಲ್ಲಿ ಪಂಚಾಯಿತಿ ಸದಸ್ಯರೇ ಧರಣಿ ಕುಳಿತಿದ್ದರಿಂದ ಇಲ್ಲಿಯೂ ಸಹ ಪೊಲೀಸ್ ಭದ್ರತೆ ಹಾಕಲಾಗಿದೆ.