ಡಂಬಳ:ಎಸ್‌ಸಿ,ಎಸ್‌ಟಿ-ಟಿಎಸ್‌ಪಿ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ ಖಂಡಿಸಿ ಡಂಬಳ ಹೋಬಳಿಯ ಬಿಜೆಪಿ ಎಸ್‌ಸಿ-ಎಸ್‌ಟಿ ಮೋರ್ಚಾ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಡಂಬಳ ಹೋಬಳಿ ಅಧ್ಯಕ್ಷ ಅಂದಪ್ಪ ಹಾರೂಗೇರಿ ಮಾತನಾಡಿ, 2023 ಮತ್ತು 2024ನೇ ಸಾಲಿನಲ್ಲಿ ಒಟ್ಟು ಸುಮಾರು ₹ 25 ಸಾವಿರ ಕೋಟಿಯಷ್ಟು ಹಣವನ್ನು ಕಾಂಗ್ರೆಸ್ ಸರ್ಕಾರ ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ ಮತ್ತು ಕುಟುಂಬವನ್ನು ಸಶಕ್ತಗೊಳಿಸಬೇಕು. ದಲಿತಕೇರಿ, ಕಾಲನಿಗಳಿಗೆ, ಆದಿವಾಸಿ ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಭೂ ಒಡೆತನ, ಭೂಮಿಗೆ ನೀರು, ಸ್ವ ಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ ಶಾಲೆ, ಹಾಸ್ಟೆಲ್ ನಿರ್ಮಾಣ ಇದಕ್ಕಾಗಿ ಬಳಸಬೇಕಾದ ಹಣ ದುರುಪಯೋಗ ಮಾಡಿಕೊಂಡಿದ್ದು, ಬೇರೆ ಉದ್ದೇಶಕ್ಕೆ ಬಳಸಿ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈ ಸರ್ಕಾರ ಮರೆತಿದೆ ಎಂದು ದೂರಿದರು.
ಎಸ್‌ಸಿ ಮೋರ್ಚಾ ಅಧ್ಯಕ್ಷ ಕೆ.ಡಿ. ಬಂಡಿ, ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಸಮುದಾಯ ಓಲೈಸುವ ಬಜೆಟ್ ಮಂಡಿಸಿದ್ದಾರೆ. ಕೇವಲ ಒಂದು ಸಮುದಾಯ ಓಲೈಕೆ ಮಾಡುತ್ತಿರುವುದು ತೀರಾ ಖಂಡನೀಯ. ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಮುಖ್ಯಮಂತ್ರಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. ಇದರಿಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಎಸ್‌ಸಿ-ಎಸ್‌ಟಿ ಸಮುದಾಯದ ಯೋಜನೆ ಅನುಷ್ಠಾನವಾಗಿಲ್ಲ. ಬರಲಿರುವ ಬಜೆಟ್‍ನಲ್ಲಿ ದಲಿತರ ಮೀಸಲು ನಿಧಿಗೆ ಕನ್ನ ಹಾಕಲು ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ಆರೋಪಿಸಿದರು.ಬಿಜೆಪಿ ಹಿರಿಯ ನೇತಾರ ಡಿ. ಪ್ರಸಾದ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಆಂದೋಲನ ಹಮ್ಮಿಕೊಳ್ಳಲಿದೆ. ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದ ಜನ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.