ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಸಿರ್ ಹುಸೇನ್‌ಗೆ ಧಿಕ್ಕಾರ
ಕನ್ನಡಪ್ರಭ ವಾರ್ತೆ ಹಾಸನವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾಸಿರ್ ಹುಸೇನ್‌ಗೆ ಧಿಕ್ಕಾರ, ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಘೋಷಣೆ ಕೂಗಿ ಬಿಜೆಪಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಬಿಜೆಪಿ ಮಂಡಲ ಅಧ್ಯಕ್ಷ ವೇಣುಗೋಪಾಲ್ ಹಾಗೂ ಇತರರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದೊಯ್ದರು.
ನಂತರ ಮಾತನಾಡಿದ ವೇಣುಗೋಪಾಲ್, ‘ಬಿಜೆಪಿ ಅಭ್ಯರ್ಥಿ ಜಯಗಳಿಸಿದ ನಂತರ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಭಾರತ ಮಾತೆಗೆ ಜೈಕಾರ ಕೂಗಿದರೆ, ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವ್ಯತ್ಯಾಸ. ಕಳೆದ ಕೆಲವು ದಿನಗಳ ಹಿಂದೆ ಡಿ.ಕೆ.ಸುರೇಶ್ ಭಾರತದ ವಿಭಜನೆ ಬಗ್ಗೆ ಮಾತನಾಡಿದರು. ಅಲ್ಲಿ ಅವರ ನಾಯಕ ಭಾರತ ಜೋಡೋ ಯಾತ್ರೆ ನಡೆಸಿದ್ದರೆ ಇಲ್ಲಿನ ಅವರ ಸಂಸದರು ಭಾರತದ ವಿಭಜನೆ ಬಗ್ಗೆ ಮಾತನಾಡುತ್ತಾರೆ’ ಎಂದು ಟೀಕಿಸಿದರು.ಇತ್ತೀಚಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾರಿಗೆ ಸಾವಿರಾರು ಕೋಟಿ ರು. ಹಣ ಕೊಟ್ಟಿದ್ದಾರೆ. ದೇವಾಲಯದ ಹಣ ಬಳಸಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು.
‘ಕಾಂಗ್ರೆಸ್ ರಾಷ್ಟ್ರೀಯತೆ ಪಾಕಿಸ್ತಾನಕ್ಕೆ ಇದೆ, ಭಾರತಕ್ಕೆ ಇಲ್ಲ. ಕಾಂಗ್ರೆಸ್ ಪಕ್ಷದವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ಆರೋಪಿಗಳು ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೆರವಣಿಗೆ ಮೂಲಕ ತೆರಳಿ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಹಿನ್ನೆಲೆ ಮುನ್ನೆಚ್ಚರಿಕ ಕ್ರಮವಾಗಿ ವೇಣುಗೋಪಾಲ್ ಸೇರಿದಂತೆ ಅನೇಕರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ಬಿಜೆಪಿ ಮುಖಂಡರಾದ ಆರ್. ಮೋಹನ್, ನಾರಾಯಣಗೌಡ, ರತ್ನ ಪ್ರಕಾಶ್, ಅನ್ನಪೂರ್ಣ, ರಾಕೇಶ್, ಎಸ್.ಡಿ.ಚಂದ್ರು, ಚನ್ನಕೇಶವ, ಅರುಣ್ ಕುಮಾರ್ ಇದ್ದರು.ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಖಂಡಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.