ಹನುಮ ಧ್ವಜ ತೆರವು ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jan 30, 2024, 02:01 AM IST
29ಎಚ್‌ಪಿಟಿ4- ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಮತ್ತು ಯುವ ನಾಯಕ ಸಿದ್ದಾರ್ಥ ಸಿಂಗ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಶಾಂತಿಯುತ ವಾತಾವರಣ ನೆಲೆಸಿರುವಾಗ ರಾಜ್ಯ ಸರ್ಕಾರ ಕೋಮುಭಾವನೆ ಕೆರಳಿಸುವಂತ ಕೆಲಸ ಮಾಡಿದೆ.

ಹೊಸಪೇಟೆ: ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಅಲ್ಲಿನ ರಾಮಭಕ್ತರು ಅಳವಡಿಸಿದ್ದ ಹನುಮ ಧ್ವಜವನ್ನು ಇಳಿಸಿದ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡನೀಯ. ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮದ ಸಾರ್ವಜನಿಕರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರ ಕ್ರಮ ಅಕ್ಷಮ್ಯ. ಕೂಡಲೇ ಈ ಸರ್ಕಾರ ಗ್ರಾಮದ ಹಾಗೂ ರಾಜ್ಯದ ಸಮಸ್ತ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಹಿಂದೂ ವಿರೋಧಿ ನೀತಿ ಅನುಸರಿಸುತ್ತಲೇ ಇದ್ದಾರೆ. ಹಿಂದೂಗಳು ಹಾಗೂ ರಾಮಭಕ್ತರನ್ನು ಕಂಡರೆ ಅವರಿಗೆ ಯಾಕೆ ಸಹಿಸಲು ಆಗುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ. ರಾಜ್ಯದಲ್ಲಿ ಶಾಂತಿಯುತ ವಾತಾವರಣ ನೆಲೆಸಿರುವಾಗ ರಾಜ್ಯ ಸರ್ಕಾರ ಕೋಮುಭಾವನೆ ಕೆರಳಿಸುವಂತ ಕೆಲಸ ಮಾಡಿದೆ. ಹಿಂದೂಗಳನ್ನು ದಮನಿಸುವ ಸಲುವಾಗಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಸರ್ಕಾರ ತನ್ನ ಧೋರಣೆಯನ್ನು ಬದಲಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಯುವ ನಾಯಕ ಸಿದ್ಧಾರ್ಥ ಸಿಂಗ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಸಮಾಜದಲ್ಲಿ ಸಾಮರಸ್ಯದ ಬದಲಿಗೆ ಅಶಾಂತಿ ಉಂಟು ಮಾಡಲು ಮುಂದಾಗಿದೆ. ಶಾಂತಿಯಿಂದ ಇರುವ ರಾಜ್ಯದಲ್ಲಿ ಕೋಮುಸೌಹಾರ್ದ ಹದಗೆಡಿಸಿ ಅಶಾಂತಿ ಉಂಟು ಮಾಡಿ ಜನರ ಮಧ್ಯೆ ಬಿರುಕು ತಂದಿಡುವ ಕಾರ್ಯ ನಿಲ್ಲಿಸಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ರಾಜ್ಯದ ಜನರೇ ಈ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ದೇಶದ ಇತಿಹಾಸದಲ್ಲಿ ರಾಷ್ಟ್ರಧ್ವಜವನ್ನು ಮಧ್ಯಾಹ್ನ 3 ಗಂಟೆಗೆ ಆರೋಹಣ ಮಾಡಿದ ಉದಾಹರಣೆ ಇಲ್ಲ. ಈ ಸರ್ಕಾರ ಆ ಕೆಲಸವನ್ನೂ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ರಾಜ್ಯ ಸರ್ಕಾರ ಒಂದು ಧರ್ಮದ ಪರವಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಹಿಂದೂಗಳಿಂದ ಮತ ಪಡೆದು ಇದೀಗ ಹಿಂದೂ ವಿರೋಧಿ ನೀತಿ ಅನುಸರಿಸುವುದು ಸರಿಯಲ್ಲ. ಕೂಡಲೇ ಕೆರೆಗೋಡು ಗ್ರಾಮದಲ್ಲಿ ಪುನಃ ಹನುಮ ಧ್ವಜ ಹಾರಿಸಬೇಕು. ಈ ಮೂಲಕ ರಾಜ್ಯ ಸರ್ಕಾರ ಹಿಂದೂ ಸಮಾಜಕ್ಕೆ ಗೌರವ ಕೊಡಬೇಕು ಎನ್ನುವ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿ ಪೂಜಪ್ಪ, ಮುಖಂಡರಾದ ಸೂರ್ಯಪಾಪಣ್ಣ, ಭದ್ರವಾಡಿ, ಚಂದ್ರಶೇಖರ್, ಬಸವರಾಜ ಕರ್ಕಿಹಳ್ಳಿ, ಶಿವಶಂಕರ್, ಕಾಸಟ್ಟಿ ಉಮಾಪತಿ, ಸಾಲಿ ಸಿದ್ದಯ್ಯಸ್ವಾಮಿ, ಭೋಜಪ್ಪ, ಶಂಕರ ಮೇಟಿ, ಭಾರತಿ ಪಾಟೀಲ್, ಮಧುಸೂದನ, ಚಂದ್ರು, ಹೊನ್ನೂರಪ್ಪ, ಜೋಗಿ ಹನುಮಂತಪ್ಪ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ