ದ.ಕ. ಲೋಕಸಭಾ ಕ್ಷೇತ್ರ: ಬಿಜೆಪಿಗೆ ಕ್ಷೇತ್ರ ಉಳಿಸುವ ಹುಮ್ಮಸ್ಸು, ಕಾಂಗ್ರೆಸ್‌ಗೆ ಗೆಲ್ಲುವ ತವಕ

KannadaprabhaNewsNetwork | Published : Apr 25, 2024 1:06 AM

ಸಾರಾಂಶ

ಬಿಜೆಪಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ತವಕವಾದರೆ, ಕಾಂಗ್ರೆಸ್‌ಗೆ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಜಿದ್ದು. ಹಾಗಾಗಿ ಈ ಚುನಾವಣೆ ದ.ಕ. ಪಾಲಿಗೆ ಮಹತ್ವವೆನಿಸಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು ಮತದಾನ ನಡೆಯಲಿದ್ದು, ಬುಧವಾರ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ. ಬಹಿರಂಗ ಪ್ರಚಾರದ ಕೊನೆ ದಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಅಲ್ಲಲ್ಲಿ ರೋಡ್‌ಶೋ ನಡೆಸಿದ್ದಲ್ಲದೆ, ಕೊನೆ ಹಂತದ ಮನೆ ಮನೆ ಪ್ರಚಾರ ಮುಕ್ತಾಯಗೊಳಿಸಿವೆ. ಅಂತಿಮವಾಗಿ ಪ್ರಮುಖ ಎದುರಾಳಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನೇರ ಜಿದ್ದಾಜಿದ್ದಿಯ ಕ್ಷಣಕ್ಕೆ ಒಂದೇ ದಿನ ಬಾಕಿ ಉಳಿದಿದೆ.

ಮೋದಿಯ ನೆಚ್ಚಿದ ಬಿಜೆಪಿ:

ನಾಮಪತ್ರ ಸಲ್ಲಿಕೆ ಬಳಿಕ ಇಲ್ಲಿವರೆಗೆ ಬಿಜೆಪಿ ಚುನಾವಣಾ ಪ್ರಚಾರಕ್ಕೆ ನೆಚ್ಚಿಕೊಂಡದ್ದು ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು. ಮೋದಿ ಅವರನ್ನು ಮಂಗಳೂರಿಗೆ ಕರೆಸಿ ಬೃಹತ್‌ ರೋಡ್‌ಶೋ ನಡೆಸಿ ಸಂಚಲನ ಮೂಡಿಸಲು ಪ್ರಯತ್ನಿಸಿದೆ. ಮೈಸೂರು ಸಂಸದ ಪ್ರತಾಪ್‌ಸಿಂಹ ಅವರನ್ನು ಕರೆಸಿ ಪುತ್ತೂರಲ್ಲಿ ಸಮಾವೇಶ ನಡೆಸಿದೆ. ಕೊನೆ ಕ್ಷಣದಲ್ಲಿ ತಾಲೂಕು ಕೇಂದ್ರಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ರೋಡ್‌ಶೋ ಹಾಗೂ ಸಭೆಗಳನ್ನು ನಡೆಸಿದರೆ, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ರೋಡ್‌ಶೋ ಕೂಡ ನಡೆಸಲಾಗಿದೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವ ಸ್ಟಾರ್‌ ಪ್ರಚಾರಕರನ್ನೂ ಬಿಜೆಪಿ ಕರೆಸಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ವಿದೇಶಾಂಗ ಸಚಿವ ಜೈಶಂಕರ್‌ ಕರೆಸುವ ಪ್ರಯತ್ನ ಕೈಗೂಡಲಿಲ್ಲ.

ಅಭ್ಯರ್ಥಿ ಮಾತ್ರವಲ್ಲ ಮುಖಂಡರು, ಕಾರ್ಯಕರ್ತರು ಎರಡ್ಮೂರು ಸುತ್ತಿನ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಪಾಳಯದಲ್ಲಿ ಈ ಬಾರಿ ಹೇಳುವಂತಹ ಪ್ರಚಾರ ಕಾರ್ಯ ನಡೆದಿಲ್ಲ ಎಂದು ಸ್ವಪಕ್ಷೀಯರೇ ಹೇಳುತ್ತಿದ್ದಾರೆ. ರಾಜ್ಯಕ್ಕೆ ಇಲ್ಲಿಂದಲೇ ರಣಕಹಳೆ ಮೊಳಗಿಸಿದ್ದ ಕಾಂಗ್ರೆಸ್‌:

ಚುನಾವಣೆ ಘೋಷಣೆ ಸನಿಹದಲ್ಲಿ ಮಂಗಳೂರಿನ ಹೊರವಲಯದಲ್ಲಿ ಸಮಾವೇಶ ನಡೆಸಿದ್ದ ಕಾಂಗ್ರೆಸ್‌ ನಾಯಕರು ಕರಾವಳಿಯಿಂದಲೇ ಚುನಾವಣಾ ರಣಕಹಳೆ ಮೊಳಗಿಸಿದ್ದರು. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಆಗಮಿಸಿ ಚುನಾವಣಾ ಪ್ರಚಾರ ಘರ್ಜನೆ ಮೊಳಗಿಸಿದ್ದರು. ಆದರೆ ನಾಮಪತ್ರ ಸಲ್ಲಿಕೆ ಬಳಿಕ ದ.ಕ. ಕ್ಷೇತ್ರದಲ್ಲಿ ಯಾವುದೇ ಸ್ಟಾರ್‌ ಪ್ರಚಾರಕರನ್ನು ಕರೆಸದೆ ಚುನಾವಣಾ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್‌ ಅಚ್ಚರಿಯ ತಂತ್ರಗಾರಿಕೆ ನಡೆಸಿದೆ.

ಈ ಹಿಂದೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಕರೆಸಿ ಚುನಾವಣಾ ಪ್ರಚಾರಕ್ಕೆ ಮೊರೆ ಹೋಗುತ್ತಿದ್ದ ಕಾಂಗ್ರೆಸಿಗರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನೂ ಕರೆಸುವ ಗೋಜಿಗೂ ಹೋಗಿಲ್ಲ. ಇನ್ನೊಂದೆಡೆ ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಮಂಗಳೂರಿಗೆ ಭೇಟಿ ನೀಡಿದರೂ ಕೇವಲ ಕಾರ್ಯಕರ್ತರ ಸಭೆ, ಸುದ್ದಿಗೋಷ್ಠಿಗಷ್ಟೇ ಸೀಮಿತಗೊಳಿಸಿದ್ದರು. ಅಭ್ಯರ್ಥಿಯಿಂದ ಮನೆ ಮನೆ ಪ್ರಚಾರ, ಕಾರ್ಯಕರ್ತರ ಭೇಟಿಗೆ ಹೆಚ್ಚಿನ ಸಮಯ ಮೀಸಲಿರಿಸಿದೆ.

ಒಗ್ಗಟ್ಟು ಕಾಯ್ದುಕೊಂಡ ಮುಖಂಡರು:

ಪ್ರತಿ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವಲ್ಲಿ ಪ್ರಮುಖ ಪಾತ್ರ ಗುಂಪುಗಾರಿಯದ್ದು. ಈ ಬಾರಿ ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್‌, ವಿನಯ ಕುಮಾರ್‌ ಸೊರಕೆ, ಮಿಥುನ್‌ ರೈ, ಐವನ್‌ ಡಿಸೋಜಾ ಸೇರಿದಂತೆ ಎಲ್ಲ ಮುಖಂಡರು ಒಟ್ಟಾಗಿಯೇ ಪ್ರಚಾರ ಅಖಾಡಕ್ಕೆ ಧುಮುಕಿದ್ದಾರೆ. ಗುಂಪುಗಾರಿಕೆಯಿಂದ ಇದೇ ಮೊದಲ ಬಾರಿ ಹೊರಬಂದ ಮುಖಂಡರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಎಫೆಕ್ಟ್‌:

ಈ ಬಾರಿ ಲೋಕಸಭಾ ಚುನಾವಣೆಯ ಅಬ್ಬರ ಎಲ್ಲೂ ಕಂಡುಬಂದಿಲ್ಲ. ಚುನಾವಣೆ ತನ್ನ ಪಾಡಿಗೆ ನಡೆಯುತ್ತದೆ ಎಂದು ಭಾಸವಾಗುವಂತೆ ಕಂಡುಬಂದಿದೆ. ಮನೆ ಮನೆ ಭೇಟಿಗೆ ರಾಜಕೀಯ ಪಕ್ಷಗಳು ಒತ್ತು ನೀಡಿರುವುದು, ಅಬ್ಬರದ ಪ್ರಚಾರದಿಂದ ವಿಮುಖವಾಗಿರುವುದು ಇದಕ್ಕೆ ಕಾರಣವಾದರೆ, ಸಾಮಾಜಿಕ ಜಾಲತಾಣಗಳು ತಮ್ಮಲ್ಲೇ ಪ್ರಚಾರದ ಭರಾಟೆ ಶುರುವಿಟ್ಟುಕೊಂಡಿರುವುದು ಕೂಡ ಇನ್ನೊಂದು ಕಾರಣವಾಗಿದೆ.

ಪರಸ್ಪರ ಆರೋಪ, ಪ್ರತ್ಯಾರೋಪ, ಉತ್ತರ, ಪ್ರತ್ಯುತ್ತರಗಳಿಗೆ ಜಾಲತಾಣಗಳು ಸಾಕಷ್ಟು ವೇದಿಕೆ ಕಲ್ಪಿಸಿಕೊಟ್ಟಿವೆ. ಜಾಲತಾಣಗಳ ಸದ್ದಿಲದ ಪ್ರಚಾರ ಕಾರ್ಯ ಹೊರಗೆ ಚುನಾವಣಾ ಕಾವನ್ನು ತಗ್ಗಿಸಿದೆ. ಯಾರು ಗೆದ್ದರೂ ಹೊಸಬರೇ!

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರು ಗೆದ್ದರೂ ಹೊಸಬರೇ ಆಯ್ಕೆಯಾಗುವುದಂತೂ ಸತ್ಯ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಮೊದಲ ಬಾರಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌.ಪೂಜಾರಿ ಕೂಡ ಹೊಸಮುಖ. ಇಬ್ಬರೂ ಕೂಡ ಗೆಲವಿಗೆ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ತವಕವಾದರೆ, ಕಾಂಗ್ರೆಸ್‌ಗೆ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಜಿದ್ದು. ಹಾಗಾಗಿ ಈ ಚುನಾವಣೆ ದ.ಕ. ಪಾಲಿಗೆ ಮಹತ್ವವೆನಿಸಿದೆ.

Share this article