ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ಇನ್ನು ಕೇವಲ ೧೨ ದಿನಗಳಲ್ಲಿ ನಡೆಯಲಿದ್ದು, ಈ ಕ್ಷೇತ್ರದ ಮಾಜಿ ಸಂಸದರು, ಉತ್ತಮ ಕಾರ್ಯಗಳ ಮೂಲಕ ಹೆಸರುಗಳಿಸಿದ ದಲಿತ ಸಮೂಹದ ನಾಯಕ, ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಪಡೆಯುವಂತೆ ಮಾಡಬೇಕೆಂದು ಮಾಜಿ ಸಚಿವ ಎಚ್.ಆಂಜಯನೇಯ ತಿಳಿಸಿದರು.
ಇಲ್ಲಿನ ಗುರುರಾಘವೇಂದ್ರ ಕಲ್ಯಾಣಮಂಟಪದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಸಂವಿಧಾನ ನಾಡಿನ ಹೆಮ್ಮೆಯಾಗಿದೆ. ಇಂತಹ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಹೊರಟ್ಟಿದ್ದು, ಈ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತದಾರರನ್ನು ಜಾಗೃತಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ಮನವಿ ಮಾಡಬೇಕೆಂದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಮಾತನಾಡಿ, ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಚಿತ್ರದುರ್ಗ ಜಿಲ್ಲೆಯೊಂದಿಗೆ ವಿಶೇಷ ಪ್ರೀತಿ, ಗೌರವ ಹೊಂದಿದ್ದಾರೆ. ಒಂದು ಬಾರಿ ಗೆಲುವು ಸಾಧಿಸಿ, ಒಂದು ಬಾರಿ ಸೋತರು ಸಹ ಜಿಲ್ಲೆಯಲಿದ್ದುಕೊಂಡೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಬಿಜೆಪಿಯ ಪೊಳ್ಳು ಭರವಸೆಗಳಿಗೆ ಜನತೆ ಮಾರುಹೋಗಬಾರದು ಎಂದರು.
ಮೊಳಕಾಲ್ಮುರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಕಳೆದ 10 ವರ್ಷಗಳಿಂದ ರಾಷ್ಟ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಜನತೆಗೆ ನೀಡಿದ ಯಾವುದೇ ಭರವಸೆ ಈಡೇರಿಲ್ಲ, ವಿಶೇಷವಾಗಿ ರಾಜ್ಯಕ್ಕೆ ಬರುವ ಆದಾಯವನ್ನೇ ಕಡಿತಗೊಳಿಸಿದೆ. ಪ್ರತಿಯೊಂದು ಹಂತದಲ್ಲೂ ಸರ್ಕಾರಕ್ಕೆ ಸಹಕಾರ ನೀಡದೆ ಜನವಿರೋಧಿ ಧೋರಣೆತಾಳಿದೆ ಎಂದು ಆರೋಪಿಸಿದರು.ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿ, ಸಂವಿಧಾನವನ್ನು ಬದಲಾಯಿಸುವ ದೃಷ್ಟಿ ಹೊಂದಿರುವ ಬಿಜೆಪಿಯನ್ನು ಸೋಲಿಸುವುದೇ ನಮ್ಮೆಲ್ಲರ ಗುರಿಯಾಗಬೇಕು. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಕಾಂಗ್ರೆಸ್ ಬಗ್ಗೆ ಬಿಜೆಪಿ ಪಕ್ಷ ಲಘು ಮಾತನಾಡುವುದನ್ನು ಕೈಬಿಡಬೇಕು. ಈ ಬಾರಿಯ ಗೆಲುವಿಗೆ 5 ಗ್ಯಾರಂಟಿಗಳ ಕೊಡುಗೆ ಪ್ರಮುಖ ಕಾರಣವಾಗುತ್ತದೆ ಎಂದರು.
ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆದ್ದರೆ ಪ್ರಧಾನಮಂತ್ರಿ ಪಕ್ಕ ಕುಳಿತುಕೊಳ್ಳುತ್ತೇನೆ, ಚಂದ್ರಪ್ಪ ಗೆದ್ದರೆ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ ಅಂದಿದ್ದ್ರೂ ಆದರೆ, ನನಗೆ ಜನರ ಬಳಿಯೇ ಸದಾ ಕುಳಿತುಕೊಳ್ಳುವ ಇಚ್ಛೆ ಇದೆ. ಮತದಾರ ತೀರ್ಪು ನೀಡುವ ಮೊದಲೇ ಇಂತಹ ಮಾತುಗಳು ಅವರಿಗೆ ಶೋಭಿಸುವುದಿಲ್ಲವೆಂದು ಟಾಂಗ್ ನೀಡಿದರು.ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇಂದಿನ ಪ್ರಚಾರ ಸಭೆಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಆಗಮಿಸಿದ್ದಾರೆ. ನಿಮ್ಮೆಲ್ಲರಲ್ಲೂ ಈ ಬಾರಿ ಚಂದ್ರಪ್ಪನವರನ್ನು ಗೆಲ್ಲಿಸಬೇಕೆಂಬ ಛಲಮೂಡಿದೆ ಎಂದರು.
ಜಿಲ್ಲಾ ಕೆಪಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ಮಾಜಿ ಶಾಸಕ ಸಾಲಿಂಗಯ್ಯ, ವಾಣಿಜ್ಯೋದ್ಯಮಿ ಎಸ್.ರುದ್ರಮುನಿಯಪ್ಪ, ಟಿ.ಪ್ರಭುದೇವ್, ಶಂಕರ್, ಬಾಬು, ಮಂಜುನಾಥ, ಪ್ರಕಾಶ್ ಮೂರ್ತಿ, ಬಾಬುರೆಡ್ಡಿ, ರವಿಬಾಬು, ಗೀತಾ ನಂದಿನಿಗೌಡ, ಶಶಿಕಲಾ, ಸೋಮಗುದ್ದು ರಂಗಸ್ವಾಮಿ, ಕೆ.ವೀರಭದ್ರಪ್ಪ, ಶಶಿಧರ, ರಮೇಶ್‌ಗೌಡ ಇದ್ದರು.