ವಿಶೇಷ ಕಾರ್ಯಕ್ರಮಗಳು - ಬೆಕ್ಕಿನ ಕಲ್ಮಠದಿಂದ ಅಮ್ಮಿರ್ ಹಮ್ಮದ್ ವೃತ್ತ, ಗೋಪಿವೃತ್ತ, ಲಕ್ಷ್ಮೀ ಟಾಕೀಸ್ ವೃತ್ತ ಮಾರ್ಗವಾಗಿ ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣವರೆಗೆ ಅದ್ಧೂರಿ ಮೆರವಣಿಗೆ
- 2 ಸಾವಿರ ಬೈಕ್‌ಗಳೊಂದಿಗೆ ಕಾರ್ಯಕರ್ತರ ರ್ಯಾಲಿ, ಬಳಿಕ ಬೃಹತ್ ಅಭಿನಂದನಾ ಸಮಾರಂಭ, 6 ರಿಂದ 7 ಸಾವಿರ ಜನ ಸೇರುವ ನಿರೀಕ್ಷೆ- ಜಿಲ್ಲೆಯ ಹಿರಿಯರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆಯಲಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
- ನ.30ರಂದು ಶಿಕಾರಿಪುರದಲ್ಲಿ 20 ಸಾವಿರ ಜನ ಸೇರಿಸಿ ಬಹಿರಂಗ ಸಭೆ, ನೂತನ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅಭಿನಂದನಾ ಸಮಾರಂಭ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿಕಾರಿಪುರ ಕ್ಷೇತ್ರ ಶಾಸಕ, ಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ನ.29ರಂದು ಆಗಮಿಸುವ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಜಿಲ್ಲೆಗೆ ಬರಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 10.30 ಗಂಟೆಗೆ ಬೆಕ್ಕಿನ ಕಲ್ಮಠದಿಂದ ಅಮ್ಮಿರ್ ಹಮ್ಮದ್ ವೃತ್ತ, ಗೋಪಿವೃತ್ತ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ವೃತ್ತ ಮಾರ್ಗವಾಗಿ ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಬಿ.ವೈ.ವಿಜಯೇಂದ್ರ ತೆರೆದ ವಾಹನದ ಜೊತೆಗೆ ಸುಮಾರು 2 ಸಾವಿರ ಬೈಕ್‌ಗಳ ರ್ಯಾಲಿ ಮೂಲಕ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಲಿದ್ದಾರೆ. ಬಳಿಕ ಬೃಹತ್ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಕೆ.ಎಸ್. ಈಶ್ವರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ವಿಧಾನ ವರಿಪತ್ ಸದಸ್ಯರಾದ ಡಿ.ಎಸ್. ಅರುಣ್, ಎಸ್.ರುದ್ರೇಗೌಡ, ಮಾಜಿ ಶಾಸಕರಾದ ಅಶೋಕ್ ನಾಯಕ್, ಹರತಾಳು ಹಾಲಪ್ಪ, ಸ್ವಾಮಿರಾವ್ ಸೇರಿದಂತೆ ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ಗಣ್ಯರು, ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಈ ಸಮಾರಂಭದಲ್ಲಿ 6 ರಿಂದ 7 ಸಾವಿರ ಜನರ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮ ಬಳಿಕ ರಾಜ್ಯಾಧ್ಯಕ್ಷರು ಜಿಲ್ಲೆಯ ಹಿರಿಯರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆಯಲಿದ್ದಾರೆ. ವಿಶೇಷವಾಗಿ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಲಿದ್ದಾರೆ. ಸಂಘಟನೆಯ ಕೆಳಸ್ತರದ ಪದಾಧಿಕಾರಿಗಳ ಜೊತೆಗೂ ಚರ್ಚಿಸಲಿದ್ದಾರೆ. ಇಡೀ ಜಿಲ್ಲೆಯಲ್ಲಿ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಗಮಿಸುತ್ತಿರುವ ಹಿನ್ನೆಲೆ ನಗರವನ್ನು ನವವಧುವಿನಂತೆ ಸಿಂಗರಿಸಲಾಗಿದೆ. ಜಿಲ್ಲೆಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದು ಈ ಸಂಭ್ರಮಕ್ಕೆ ಎಲ್ಲರಿಗೂ ಪ್ರೇರಣೆ ನೀಡಿದಂತಾಗಿದೆ ಎಂದು ತಿಳಿಸಿದರು.
ನ.30ರಂದು ಶಿಕಾರಿಪುರದಲ್ಲಿ 20 ಸಾವಿರ ಜನರ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಅಲ್ಲಿ ನೂತನ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶಿಕಾರಿಪುರದ ಹಳೆ ಸಂತಕಟ್ಟೆ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಭೆ ಸ್ಥಳವನ್ನು ತಲುಪಲಿದ್ದಾರೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ತು ಸದಸ್ಯರಾದ ಡಿ.ಎಸ್. ಅರುಣ್, ಎಸ್.ರುದ್ರೇಗೌಡ, ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯಕ್, ಮುಖಂಡರಾದ ಎಸ್. ದತ್ತಾತ್ರಿ, ಶಿವರಾಜ್, ಶ್ರೀನಾಥ್, ರತ್ನಾಕರ್ ಶೆಣೈ, ಅಣ್ಣಪ್ಪ ಮತ್ತಿತರರು ಇದ್ದರು.
- - - (-ಪೋಟೋ: ಬಿ.ವೈ.ವಿಜಯೇಂದ್ರ)