ಕೆ.ಎಂ. ಮಂಜುನಾಥ್
ಬಳ್ಳಾರಿ: 1999ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶವೇ ಬಳ್ಳಾರಿಯ ಕಡೆ ದೃಷ್ಟಿ ನೆಟ್ಟಿತ್ತು. ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಖ್ಯಾತಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಇಲ್ಲಿ ಸ್ಪರ್ಧೆಗಿಳಿದಿದ್ದರು. ಇಬ್ಬರು ಘಟಾನುಘಟಿ ನಾಯಕಿಯರ ಪೈಪೋಟಿಯಿಂದಾಗಿ ಬಳ್ಳಾರಿ ಹೆಚ್ಚು ಸುದ್ದಿಯಾಗಿತ್ತು.
ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ರಾಷ್ಟ್ರೀಯ ನಾಯಕಿಯರ ನಡುವಿನ ಪೈಪೋಟಿ ತಾರಕಕ್ಕೇರಿತ್ತು. ಕಾಂಗ್ರೆಸ್‌ನ ಭದ್ರಕೋಟೆಯನ್ನು ಒಡೆಯಬೇಕು ಎಂದು ಪಣತೊಟ್ಟಿದ್ದ ಸುಷ್ಮಾ ಸ್ವರಾಜ್ ಅವರು ಇಡೀ ಜಿಲ್ಲೆಯಲ್ಲಿ ಹಗಲಿರುಳೆನ್ನದೆ ಪ್ರಚಾರ ನಡೆಸಿದರು. ಸುಷ್ಮಾ ಅವರಿಗೆ ಜಿಲ್ಲೆಯ ಬಿಜೆಪಿ ನಾಯಕರು ಸಾಥ್ ನೀಡಿದರಲ್ಲದೆ, ಕೈ ಪಕ್ಷಕ್ಕೆ ಸೋಲುಣಿಸಲೇಬೇಕು ಎಂದು ಸತತ ಪ್ರಯತ್ನ ನಡೆಸಿದ್ದರು. ಹಳ್ಳಿಹಳ್ಳಿಗಳನ್ನು ಸುತ್ತಿದ ಸುಷ್ಮಾ ಸ್ವರಾಜ್, ಗಣಿ ಜಿಲ್ಲೆಯ ಮತದಾರರು ಗೆಲುವಿನ ದಡ ಸೇರಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದರು.
ಆದರೆ, ಚುನಾವಣೆಯ ಫಲಿತಾಂಶ ಬಂದಾಗ ಬಿಜೆಪಿಗೆ ತೀವ್ರ ನಿರಾಸೆ ಕಾದಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದ ಸೋನಿಯಾ ಗಾಂಧಿ ಅವರು 4,14,650 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಭಾರೀ ಅಂತರದಲ್ಲಿ ಸೋಲುಣಿಸಿ, ವಿಜಯದ ನಗೆ ಬೀರಿದರು.
ಬಳ್ಳಾರಿ ಹಾಗೂ ಅಮೇಥಿಯಿಂದ ಸ್ಪರ್ಧೆ ಮಾಡಿದ್ದ ಸೋನಿಯಾ ಗಾಂಧಿ ಅವರು ಬಳ್ಳಾರಿಯ ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ, ಉತ್ತರ ಪ್ರದೇಶದ ಅಮೇಥಿಯನ್ನು ಉಳಿಸಿಕೊಂಡರು. ಈ ಹಿನ್ನೆಲೆಯಲ್ಲಿ 2000ನೇ ಸಾಲಿನಲ್ಲಿ ಜರುಗಿದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಳೂರು ಬಸವನಗೌಡ ಅವರು ಜಯ ಗಳಿಸಿದರು.
ಸುಷ್ಮಾ ಸ್ಪರ್ಧೆ- ಕಮಲಕ್ಕೆ ನೆರವು: ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರು ಸೋಲನುಭವಿಸಿದರೂ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಸುಷ್ಮಾ ಸ್ಪರ್ಧೆ ಹೆಚ್ಚು ಸಹಕಾರಿಯಾಯಿತು. ಕಾಂಗ್ರೆಸ್ ಭದ್ರಕೋಟೆ ಎಂದೇ ಹೆಸರಾದ ಬಳ್ಳಾರಿ ಜಿಲ್ಲೆಯಲ್ಲಿ ಕಮಲ ಅರಳಲು ಸುಷ್ಪಾ ಸ್ಪರ್ಧೆ ಹೆಚ್ಚು ಆಸ್ಪದ ಒದಗಿಸಿತು. 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿತ್ತು. ಕೆ. ನಾಗಭೂಷಣಂ ಅಭ್ಯರ್ಥಿಯಾಗಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ 84,837 ಮತಗಳನ್ನು ಪಡೆಯಿತು. 1996ರ ಚುನಾವಣೆಯಲ್ಲಿ ಹಿರಿಯ ವಕೀಲ ಇಂದುಶೇಖರ್ ಅವರು ಬಿಜೆಪಿಯಿಂದ ಸ್ಪರ್ಧಿಸಿ 43,286 ಮತಗಳನ್ನು ಪಡೆದರು. 1998ರಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿಯಿತು. 1999ರ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿ ಸೋಲುಂಡರೂ, 3,58,550 ಮತಗಳನ್ನು ಪಡೆದು ದೇಶದ ಗಮನ ಸೆಳೆದರು.
ಅರಳಿದ ಕಮಲ: ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯಿಂದಾಗಿ ಜಿಲ್ಲೆಯಲ್ಲಾದ ಬಿಜೆಪಿಯ ಸಂಘಟನೆಯಿಂದಾಗಿ 2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಅವರು ಗೆಲುವು ಸಾಧಿಸುವ ಮೂಲಕ ಕಮಲ ಪಕ್ಷದಿಂದ ಗೆದ್ದ ಮೊದಲ ಸಂಸದ ಎಂಬ ದಾಖಲೆ ಬರೆದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದ ಕೆ.ಸಿ. ಕೊಂಡಯ್ಯ ಅವರು 31,676 ಮತಗಳ ಅಂತರದಲ್ಲಿ ಸೋತರು.
2009ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ (ಶ್ರೀರಾಮುಲು ಸಹೋದರಿ) ಅವರು ಕಾಂಗ್ರೆಸ್‌ನ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರ ವಿರುದ್ಧ 2243 ಮತಗಳ ಅಂತರದ ಜಯ ಸಾಧಿಸಿದರು. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ. ಶ್ರೀರಾಮುಲು ಅವರು ಕಾಂಗ್ರೆಸ್‌ನ ಎನ್.ವೈ. ಹನುಮಂತಪ್ಪ ಅವರ ವಿರುದ್ಧ 85,144 ಮತಗಳ ಭಾರೀ ಅಂತರದ ಗೆಲುವು ಸಾಧಿಸಿದರು. 2018ರಲ್ಲಿ ಜರುಗಿದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರು ಬಿಜೆಪಿಯ ಜೆ. ಶಾಂತಾ ಅವರನ್ನು 2,43,161 ಭಾರೀ ಅಂತರದಲ್ಲಿ ಸೋಲಿಸಿ, ಸಂಸತ್ ಸದಸ್ಯರಾದರು. 2019ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ ವೈ. ದೇವೇಂದ್ರಪ್ಪ ಅವರು ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಅವರನ್ನು 55,707 ಮತಗಳಿಂದ ಸೋಲಿಸಿ, ಗಣಿ ಜಿಲ್ಲೆಯಲ್ಲಿ ಕಮಲ ಪಕ್ಷದ ಸಂಘಟನೆ ಗಟ್ಟಿಯಾಗಿದೆ ಎಂಬುದನ್ನು ನಿರೂಪಿಸಿದರು.
ಒಂದೂವರೆ ದಶಕದ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಹೆಚ್ಚು: 2004ರಿಂದ 2019ರ ವರೆಗೆ ಒಟ್ಟು 5 ಬಾರಿ ಬಳ್ಳಾರಿ ಲೋಕಸಭಾ ಚುನಾವಣೆ ನಡೆದಿದ್ದು, ಬಿಜೆಪಿ ನಾಲ್ಕು ಬಾರಿ ಗೆಲುವು ಸಾಧಿಸಿದೆ. ಒಮ್ಮೆ ಕಾಂಗ್ರೆಸ್ ಗೆಲುವು ಪಡೆದಿದೆ.
2004ರಲ್ಲಿ ಕರುಣಾಕರ ರೆಡ್ಡಿ, 2009ರಲ್ಲಿ ಜೆ. ಶಾಂತಾ, 2014ರಲ್ಲಿ ಬಿ. ಶ್ರೀರಾಮುಲು ಹಾಗೂ 2019ರಲ್ಲಿ ವೈ. ದೇವೇಂದ್ರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಬಿ. ಶ್ರೀರಾಮುಲು ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರಿಂದಾಗಿ 2018ರಲ್ಲಿ ಜರುಗಿದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಅವರು ಬಿಜೆಪಿಯ ಜೆ. ಶಾಂತಾ ಅವರ ವಿರುದ್ಧ ಗೆದ್ದರು.