ಕಾಂಗ್ರೆಸ್‌ ವಿರುದ್ಧ ಬೀದಿಗಿಳಿದ ಬಿಜೆಪಿ

KannadaprabhaNewsNetwork |  
Published : Aug 23, 2024, 01:13 AM IST
ಬಿಜೆಪಿ | Kannada Prabha

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಈ ಮೂಲಕ ರಾಜ್ಯಪಾಲರ ತೇಜೋವಧೆ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ:ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಮತ್ತು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಹು-ಧಾ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರ್ಕಾರ, ಭ್ರಷ್ಟಾಚಾರದಲ್ಲಿ ತಲ್ಲೀನವಾಗಿದೆ. ವಾಲ್ಮೀಕಿ, ಮುಡಾ ಹಗರಣದ ಮೂಲಕ ರಾಜ್ಯ ಲೂಟಿ ಮಾಡಿದೆ ಎಂದು ಆರೋಪಿಸಿದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ರಾಜ್ಯ ದಿವಾಳಿ ಮಾಡಿದೆ. ರಾಜ್ಯದಲ್ಲಿ ನಡೆದ ಹಗರಣಗಳ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ವಿರುದ್ಧ ಖಾಸಗಿ ವ್ಯಕ್ತಿ ದೂರಿನನ್ವಯ ತನಿಖೆಗೆ ಆದೇಶಿಸಿದ ರಾಜ್ಯಪಾಲರ ವಿರುದ್ಧ ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರ ಅತ್ಯಂತ ಅವಹೇಳನಕಾರಿ ಪದ ಬಳಸುತ್ತಿರುವುದನ್ನು ಬೆಲ್ಲದ ತೀವ್ರವಾಗಿ ಖಂಡಿಸಿದರು. ಸಾಂವಿಧಾನಿಕ ಹುದ್ದೆಯಲ್ಲಿ ಇರುವ ರಾಜ್ಯಪಾಲರ ವೈಯಕ್ತಿಕ ತೇಜೋವಧೆ ಮಾಡುವ ಚಾಳಿ ಕಾಂಗ್ರೆಸ್ ಮುಂದುವರಿಸಿದೆ. ಮುಖ್ಯಮಂತ್ರಿ ವಿರುದ್ಧ ಬಂದ ಆರೋಪ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರ ಕರ್ತವ್ಯ ಎಂದು ತಿಳಿಸಿದರು.

ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮತೆ ಅರಿತು ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಅವರ ಪ್ರಕೃತಿ ದಹಿಸುವ ಹಾಗೂ ಅವಮಾನಿಸುವುದು ಸಲ್ಲ. ಕಾಂಗ್ರೆಸ್ ರಾಜ್ಯಪಾಲರ ಬಳಿ ಕ್ಷಮೆಯಾಚಿಸಲು ಆಗ್ರಹಿಸಿದರು. ವಾಲ್ಮೀಕಿ ನಿಗಮದ ಹಣ, ಪತ್ನಿಯ ಹೆಸರಿಗೆ ಮುಡಾ ನಿವೇಶನ ವರ್ಗಾವಣೆ ಮೂಲಕ ದಲಿತರಿಗೆ ಅನ್ಯಾಯ ಮಾಡಿದ ಸಿದ್ದರಾಮಯ್ಯರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ. ಕಾಂಗ್ರೆಸ್ ವಿರುದ್ಧ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆಯನ್ನು ಇದೇ ವೇಳೆ ದೂರಿದರು.ಪ್ರತಿಭಟನೆಯಲ್ಲಿ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಶಿವು ಮೆಣಸಿನಕಾಯಿ, ತಿಪ್ಪಣ್ಣ ಮಜಗ್ಗಿ, ನಿಂಗಪ್ಪ ಸುತಗಟ್ಟಿ, ಬಸವರಾಜ ಗರಗ, ಮೋಹನ ರಾಮದುರ್ಗ, ಪ್ರಮೂದ ಕಾರಕೂನ್, ಸೀಮಾ ಮಸೂತಿ, ಸುರ್ವಣಾ ವಾಲಿ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ