ಟಿಕೆಟ್‌ಗಾಗಿ ಬಿಜೆಪಿ ವರ್ಸಸ್‌ ಜೆಡಿಎಸ್‌: ಕೃಷ್ಣ ಬೈರೇಗೌಡ

KannadaprabhaNewsNetwork | Published : Mar 10, 2024 1:51 AM

ಸಾರಾಂಶ

27 ಜನ ಬಿಜೆಪಿ-ಜೆಡಿಎಸ್‌ ಸಂಸದರಿದ್ರೂ ಒಬ್ಬರೂ ಕರ್ನಾಟಕದ ಪರವಾಗಿ ಧ್ವನಿ ಎತ್ತಿಲ್ಲ. ಇಂತಹ ಸಂಸದರನ್ನು ಇಟ್ಕೊಂಡು ರಾಜ್ಯಕ್ಕೆ ಅನ್ಯಾಯವೇ ಹೊರತು ಲಾಭವಿಲ್ಲ ಎಂದು ಕೃಷ್ಣಭೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿ ಗೊಂದಲದ ಗೂಡಾಗಿದೆ. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಲಿ ಒಬ್ಬ ಸಂಸದರ ಹೆಸರೂ ಬಂದಿಲ್ಲ. ಹಾಲಿ ಎಂಪಿಗಳ ಮೇಲೆಯೇ ಒಂದು ಪ್ರಶ್ನೆ ಗುರುತು ಇಟ್ಟಿದ್ದಾರೆ. ಬಿಜೆಪಿ ಗೊಂದಲ ಸಾಲದ್ದಕ್ಕೆ ಜೆಡಿಎಸ್‌ನವರು, ಬಿಜೆಪಿ ಸಂಸದರು ಇರುವ ಕಡೆ ಸೀಟ್‌ ತಮ್ಮದೆ ಎಂದು ಹೇಳುತ್ತಿದ್ದಾರೆ. ದಳ ವರ್ಸಸ್ ಬಿಜೆಪಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಟೀಕಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 27 ಜನ ಬಿಜೆಪಿ-ಜೆಡಿಎಸ್‌ ಸಂಸದರಿದ್ರೂ ಒಬ್ಬರೂ ಕರ್ನಾಟಕದ ಪರವಾಗಿ ಧ್ವನಿ ಎತ್ತಿಲ್ಲ. ಇಂತಹ ಸಂಸದರನ್ನು ಇಟ್ಕೊಂಡು ರಾಜ್ಯಕ್ಕೆ ಅನ್ಯಾಯವೇ ಹೊರತು ಲಾಭವಿಲ್ಲ ಎಂದರು.ಬಿಜೆಪಿ ಒಳಗಡೆನೇ ಗೊಂದಲವಿದೆ. ರಾಜ್ಯಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲು ಹಾಲಿ ಸಂಸದರಾಗಿದ್ದರೂ ಅವರಿಗೂ ಟಿಕೆಟ್‌ ಘೋಷಣೆ ಮಾಡಿಲ್ಲ. ಇಲ್ಲಿ ಬೇರೆಯವರು ಅಭ್ಯರ್ಥಿ ಎಂಬ ಚರ್ಚೆ ನಡೆಯುತ್ತಿದೆ. ಬಿಜೆಪಿ ಗೊಂದಲ ಸಾಲದ್ದಕ್ಕೆ, ಕೋಲಾರದಲ್ಲಿ ಬಿಜೆಪಿ ಎಂ.ಪಿ ಇದ್ದರೂ ದಳವದವರು ಇದು ತಮ್ಮದೇ ಸೀಟು ಅಂತಿದ್ದಾರೆ. ಮಂಡ್ಯದಲ್ಲಿ ಸುಮಲತಾ ಬಿಜೆಪಿ ಸೇರಿದ್ದಾರೆ. ಸುಮಲತಾ ಅವರು ತನಗೇ ಟಿಕೆಟ್ ಸಿಗುತ್ತೆ ಅಂತ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ವಿರುದ್ಧ ಯಾರು ನಿಲ್ಲೋದಕ್ಕೆ ತಯಾರಿಲ್ಲ. ದಳದವರು ನಿಲ್ಲೋದಕ್ಕೆ ತಯಾರಿಲ್ಲ, ಬಿಜೆಪಿಯವರೂ ತಯಾರಿಲ್ಲ. ಎಲ್ಲರೂ ಪಲಾಯನ ವಾದ ಮಾಡ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ಲೇವಡಿ ಮಾಡಿದರು. ಕೈ 2ನೇ ಪಟ್ಟಿ 11ರ ಬಳಿಕ: ಕಾಂಗ್ರೆಸ್‌ನ 2ನೇ ಪಟ್ಟಿ ಮಾ. 11ರ ಬಳಿಕ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಬಿಜೆಪಿ ಗೊಂದಲದ ನಡುವೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಸಾಕಷ್ಟು ಹೊಸ ಮುಖಗಳಿಗೆ, ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದಷ್ಟು ಶೀಘ್ರವಾಗಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.ಅಶೋಕ್‌ ಹೇಳಿಕೆಗೆ ತಿರುಗೇಟು: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಐಟಿಬಿಟಿ ಕಂಪೆನಿಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತವೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್‌ ಹೇಳಿಕೆಗೆ ತಿರುಗೇಟು ನೀಡಿದ ಕೃಷ್ಣ ಬೈರೇಗೌಡ, ಸೆಪ್ಟೆಂಬರ್ ತಿಂಗಳಿನಲ್ಲಿ ಬರ ಪರಿಹಾರಕ್ಕೆ ಅನುದಾನ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೆವು. ಮನವಿ ಕೊಟ್ಟು ಆರು ತಿಂಗಳಾದರೂ ಕೇಂದ್ರ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ರೈತರಿಗೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿಯಿದ್ದರೆ ಮೊದಲು ದೆಹಲಿಗೆ ಹೋಗಲಿ, ಕೇಂದ್ರ ಸಚಿವರು, ಪ್ರಧಾನಿ ಜತೆ ಕೂತು ಮಾತನಾಡಲಿ. ಕರ್ನಾಟಕಕ್ಕೆ ಬರಬೇಕಾದ ಹಣವನ್ನು ಮೊದಲು ಕೊಡಿಸಲಿ. ಅದು ಬಿಟ್ಟು ಸುಮ್ಮನೆ ಪ್ರಚಾರಕ್ಕಾಗಿ ಹೇಳಿಕೆ ಕೊಡುವುದರಿಂದ ಸಮಸ್ಯೆ ಪರಿಹಾರವಾಗಲ್ಲ ಎಂದರು.ರಾಜ್ಯಕ್ಕಾದ ಅನ್ಯಾಯಕ್ಕೆ ಬಿಜೆಪಿ ಕಾರಣ: ರಾಜ್ಯದ ಬಿಜೆಪಿ ನಾಯಕರೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಏನೇ ಅನ್ಯಾಯ ಮಾಡಿದರೂ ಬಾಯಿ ಬಿಡ್ತಿಲ್ಲ. ಸಮರ್ಥನೆ ಮಾಡಿಕೊಂಡು ಅನ್ಯಾಯ ಮುಂದುವರಿಯಲು ಪ್ರತ್ಯಕ್ಷವಾಗಿ ಕಾರಣರಾಗಿದ್ದಾರೆ. ಬರಬೇಕಾದ ಹಣವನ್ನು ಬಾಯಿಬಿಟ್ಟು ಕೇಳಲಿ ಎಂದು ಸವಾಲು ಹಾಕಿದರು.ರಾಜ್ಯದ 223 ತಾಲೂಕುಗಳಲ್ಲಿ ಬರ ಘೋಷಣೆ ಆಗಿದೆ. ರಾಜ್ಯಾದ್ಯಂತ 675 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೈವೇಟ್ ಟ್ಯಾಂಕರ್ ಹಾಗೂ ಖಾಸಗಿ ಬೋರ್ ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡ್ತಿದ್ದೇವೆ. 4000 ಬೋರ್ ವೆಲ್‌ಗಳ ಬಾಡಿಗೆಗೆ ಒಪ್ಪಂದ ಮಾಡಿದ್ದೇವೆ. ಬೆಂಗಳೂರಿನಲ್ಲಿಯೂ ವಾಡಿಕೆಗಿಂತ ಹೆಚ್ಚು ಸಮಸ್ಯೆ ಕಂಡುಬಂದಿದೆ. ಬಿಬಿಎಂಪಿ ಜತೆ ಸಭೆ ಮಾಡಿ ಬೇಕಾದ ಹಣ ಕೊಡುವ ಕೆಲಸ ಮಾಡ್ತಿದ್ದೇವೆ. ಸಮಸ್ಯೆ ನಿಭಾಯಿಸಲು ಸರ್ಕಾರ ತೀವ್ರವಾದ ಹೆಜ್ಜೆ ಇಟ್ಟಿದೆ ಎಂದು ವಿವರಿಸಿದರು.ದಲಿತ ಸಿಎಂ ವಿಚಾರದ ಬಗ್ಗೆ ತಕರಾರಿಲ್ಲ ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿ ಹೇಳಿದಂತೆ ಸಂವಿಧಾನದ ಆಶಯವನ್ನು ಸಚಿವ ಮಹದೇವಪ್ಪ ಹೇಳಿದ್ದಾರೆ. ಎಲ್ಲರಿಗೂ ಸಹ ಸಮಪಾಲು ಸಿಗಬೇಕೆಂಬ ವಿಚಾರ ಹೇಳಿದ್ದಾರೆ. ಅದರಲ್ಲಿ ಯಾವುದೇ ತಕರಾರು ಇಲ್ಲ. ಒಮ್ಮೊಮ್ಮೆ ಅವಕಾಶ ಆಗಿ ಬರುತ್ತೆ. ಒಮ್ಮೊಮ್ಮೆ ಅವಕಾಶ ಸಿಗೋದಿಲ್ಲ. ಇದೆಲ್ಲಾ ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗ. ಆದರೆ ಅವಕಾಶ ಸಿಗಬೇಕು ಎಂಬುದರಲ್ಲಿ ಯಾವುದೇ ತಕರಾರಿಲ್ಲ. ದಲಿತರು, ಬೇರೆ ಜನಾಂಗದವರು ಎಲ್ಲರಿಗೂ ಅವಕಾಶ ಸಿಗಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಿದೆಯೆಂದು ಹೇಳಬಹುದು. ಕಾಂಗ್ರೆಸ್ ಪಕ್ಷದಲ್ಲಿ ಬೇರೆ ರಾಜ್ಯದಲ್ಲಿ ಇಂತಹ ಅವಕಾಶ ಮಾಡಿಕೊಟ್ಟಿದ್ದೇವೆ. ಕರ್ನಾಟಕದಲ್ಲೂ ಸಮಯ ಸಂದರ್ಭ ಕೂಡಿ ಬಂದಾಗ ಆಗಲಿದೆ ಎಂದು ಹೇಳಿದರು.

Share this article