ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಪಕ್ಷದ ಹಲವು ನಾಯಕರು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ವಕ್ಫ್ ಆಸ್ತಿ ಕುರಿತಂತೆ ಜನಾಂದೋಲನ ನಡೆಸಲು ತೀರ್ಮಾನಿಸಿದ್ದಾರೆ.
ಬೆಂಗಳೂರು : ಉಪಚುನಾವಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಪಕ್ಷದ ಹಲವು ನಾಯಕರು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ವಕ್ಫ್ ಆಸ್ತಿ ಕುರಿತಂತೆ ಜನಾಂದೋಲನ ನಡೆಸಲು ತೀರ್ಮಾನಿಸಿದ್ದಾರೆ.
ವಕ್ಫ್ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ಧ ಇದೇ ತಿಂಗಳ 25ರಿಂದ ಡಿ.25ರವರೆಗೆ ಬೀದರ್‌ನಿಂದ ಜನಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಈ ಅಭಿಯಾನಕ್ಕೆ ಯತ್ನಾಳ್ ಅವರೇ ನೇತೃತ್ವ ವಹಿಸಲಿದ್ದಾರೆ.ಶುಕ್ರವಾರ ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಯತ್ನಾಳ್ ಜತೆಗೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮತ್ತಿತರರು ಪಾಲ್ಗೊಂಡಿದ್ದರು.
ವಕ್ಫ್ ಬೋರ್ಡ್‌ನಿಂದ ಯಾವುದೇ ರೀತಿಯ ಅನ್ಯಾಯವಾಗಿದ್ದರೆ ಸಾರ್ವಜನಿಕರು 9035675734 ವಾಟ್ಸಪ್ ಸಂಖ್ಯೆಗೆ ಮಾಹಿತಿ ಕಳುಹಿಸಲು ಈ ನಾಯಕರು ಮನವಿ ಮಾಡಿದ್ದಾರೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ವಕ್ಫ್ ಆಸ್ತಿ ಕುರಿತಂತೆ ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ.
ಯತ್ನಾಳ್ ಅವರು ವಿಜಯಪುರದಲ್ಲಿ ಹೋರಾಟ ಪ್ರಾರಂಭ ಮಾಡಿದ್ದರು. ಅವರ ಹೋರಾಟದ ಪರಿಣಾಮವಾಗಿ ಕೇಂದ್ರದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ವಕ್ಫ್ ವಿಚಾರದಲ್ಲಿ ಸಾಕಷ್ಟು ದೂರು ಬಂದಿವೆ. ಈ ತಿಂಗಳ 25ರಿಂದ ಡಿ.25ರವರೆಗೂ ಒಂದು ತಿಂಗಳ ಕಾಲ ಜನ ಜಾಗೃತಿ ಅಭಿಯಾನ ಮಾಡುತ್ತೇವೆ.
ಒಂದು ವಾರ್ ರೂಮ್ ಸಹ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಈ ಜನಜಾಗೃತಿ ಅಭಿಯಾನ ನಡೆಯಲಿದೆ. ಬೀದರ್ ಜಿಲ್ಲೆಯಿಂದ ಅಭಿಯಾನ ಪ್ರಾರಂಭವಾಗಿ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಮೂಲಕ ಸಾಗಲಿದೆ ಎಂದು ಮಾಹಿತಿ ನೀಡಿದರು.1954ರಿಂದ ಆರಂಭವಾದ ಗೆಜೆಟ್ ಆದೇಶವನ್ನು ರದ್ದು ಮಾಡಬೇಕು. ರೈತರು, ಮಠಗಳು, ಸರ್ಕಾರಿ ಜಾಗಗಳಿಗೆ ವಕ್ಫ್ ಕ್ಲೇಮ್ ಮಾಡುತ್ತಿದೆ. ಆ ಜಾಗಗಳನ್ನು ಕಾಯಂ ವಾಪಸ್ ಕೊಡಬೇಕು ಹಾಗೂ ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೊಳಿಸಬೇಕು ಎಂದು ಇದೇ ವೇಳೆ ಲಿಂಬಾವಳಿ ಆಗ್ರಹಿಸಿದರು.
ಯತ್ನಾಳ್ ಮಾತನಾಡಿ, ರೈತರು, ಮಠಗಳಿಗೆ ವಕ್ಫ್ ಆದೇಶದಿಂದ ಅನ್ಯಾಯವಾಗುತ್ತಿದೆ. ಕ್ರಿಮಿನಲ್ ಪ್ರಕರಣಗಳು ರದ್ದಾಗಿ ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನವಾಗಬೇಕು. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಮೂಲಕ ಜಂಟಿ ಸಂಸದೀಯ ಸಮಿತಿಗೆ ವರದಿಯನ್ನು ನೀಡುತ್ತೇವೆ. ಈಗಾಗಲೇ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಎಷ್ಟೋ ಮಾಹಿತಿ ಯಾವುದೇ ಸರ್ಕಾರಕ್ಕೂ ಇಲ್ಲ ಎಂದರು.
ರಾಜ್ಯದಲ್ಲಿ ಮೊದಲಿಗೆ ಒಂದು ಲಕ್ಷ ಎಕರೆ ಜಮೀನು ತಮ್ಮದಿದೆ ಎಂದರು. ಈಗ 6 ಲಕ್ಷ ಎಕರೆ ಭೂಮಿ ವಕ್ಫ್ ಬೋರ್ಡ್‌ಗೆ ತೆಗೆದುಕೊಳ್ಳಲು ಕ್ಲೈಮ್ ಮಾಡಿದ್ದಾರೆ. ಇಡೀ ದೇಶದಲ್ಲಿ 38 ಲಕ್ಷ ಎಕರೆ ಜಮೀನು ತಮ್ಮದು ಎನ್ನುತ್ತಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ಲೀಗಲ್ ಟೀಂ ಮೂಲಕ ಹೋರಾಟ ಮಾಡುತ್ತಿದ್ದೇವೆ. ಅದರ ಜೊತೆಗೆ ರಾಜ್ಯದ ಜನರಿಗೆ ಜನಜಾಗೃತಿ ಅಭಿಯಾನ ಮಾಡುತ್ತಿದ್ದೇವೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಸೇರಿ ಯಾರೇ ವಕ್ಫ್‌ನಿಂದ ನೋಟಿಸ್ ಕೊಟ್ಟಿದ್ದರೂ ನಮ್ಮ ಸಮರ್ಥನೆ ಇಲ್ಲವೇ ಇಲ್ಲ. ನಮ್ಮ ಹೋರಾಟದ ಉದ್ದೇಶ ಟ್ರಿಬ್ಯುನಲ್ ರದ್ದಾಗಬೇಕು ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಈ ಜನಜಾಗೃತಿ ಅಭಿಯಾನಕ್ಕೆ ಪಕ್ಷದ ಕೇಂದ್ರ ಸಮಿತಿಯ ಅನುಮತಿ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಈಗಾಗಲೇ ನಮ್ಮ ಪ್ರಧಾನಿ, ಗೃಹ ಸಚಿವರು ಧ್ವನಿಗೂಡಿಸಿದ್ದಾರೆ. ಇದು ಬಿಜೆಪಿಯಿಂದ ಮಾಡುತ್ತಿರುವ ಹೋರಾಟ. ನಮ್ಮ ಹೋರಾಟಕ್ಕೆ ಕೇಂದ್ರ ಸಚಿವರು ಬಂದಿದ್ದರು. ಅವರು ಬಂದಿದ್ದು ನಮ್ಮ ಹೋರಾಟಕ್ಕೆ ಬೆಂಬಲ ಇದೆ ಅಂತ ಅಲ್ಲವೇ ಎಂದು ಹೇಳಿದರು.