ನಾಳೆ ಚಳ್ಳಕೆರೆಯಲ್ಲಿ ಬಿಜೆಪಿಯಿಂದ ಎಸ್ಟಿ ಮುನ್ನಡೆಯ ಸಮಾವೇಶ

KannadaprabhaNewsNetwork |  
Published : Feb 23, 2024, 01:45 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಫೆ.24ರ ಶನಿವಾರ ಪರಿಶಿಷ್ಟ ಪಂಗಡದ ಮುನ್ನಡೆಯ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದರು.

ಚಿತ್ರದುರ್ಗ: ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಫೆ.24ರ ಶನಿವಾರ ಪರಿಶಿಷ್ಟ ಪಂಗಡದ ಮುನ್ನಡೆಯ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕ ಸಮುದಾಯದವರ ಜನಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಬಿಜೆಪಿ ಸರ್ಕಾರ ಇದ್ದಾಗ ಈ ಜನಾಂಗಕ್ಕೆ ನೀಡಿರುವ ವಿವಿಧ ರೀತಿಯ ಸೌಲಭ್ಯಗಳು ಹಾಗೂ ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳನ್ನು ತಿಳಿಸುವ ಸಲುವಾಗಿ ಈ ಮುನ್ನಡೆ ಸಮಾವೇಶ ಆಯೋಜಿಸಲಾಗಿದೆ. ಪರಿಶಿಷ್ಟ ಪಂಗಡದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಮಾಜಿ ಸಚಿವರಾದ ಶ್ರೀರಾಮುಲು, ರಾಜುಗೌಡ, ಪರಿಘಟಕದ ರಾಜ್ಯಾಧ್ಯಕ್ಷ ಹನುಮಂತ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ಶಾಸಕರಾದ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ತಿಪ್ಪಾರೆಡಿ, ನೇರ್ಲಗುಂಟೆ ತಿಪ್ಪೇಸ್ವಾಮಿ, ಲಿಂಗಮೂರ್ತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಸಮಾವೇಶ ಆಗಿರುವುದರಿಂದ ಪಂಚಾಯಿತಿಗೆ 25ರಂತೆ ಪ್ರತಿ ತಾಲೂಕಿನಿಂದ 200ರಿಂದ 250 ಜನ ಆಯ್ದ ನಾಯಕ ಸಮುದಾಯದ ಮುಖಂಡರು ಮಾತ್ರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮುರಳಿ ತಿಳಿಸಿದರು.

ಮಾಜಿ ಶಾಸಕರಾದ ನೇರ್ಲಗಂಟೆ ತಿಪ್ಪೇಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದನ್ನು ತಿಳಿಸುವ ಕಾರ್ಯ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಮಾತನಾಡಿದ್ದಾರೆ. ಇದು ಅವರ ನಾಗರಿಕತೆಯನ್ನು ತಿಳಿಸುತ್ತದೆ. ಈ ಜನಾಂಗವನ್ನು ಬರೀ ಚುನಾವಣೆಯಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ನಂತರ ಅವರನ್ನು ಬಿಡಲಾಗುತ್ತದೆ. ಬಿಜೆಪಿ ಸರ್ಕಾರ ಇವರಿಗಾಗಿ ಮಾಡಿದ ಕೆಲಸಗಳನ್ನು ತಿಳಿಸುವ ಕಾರ್ಯ ಇದಾಗಿದೆ. ಕಾಂಗ್ರೆಸ್ ನವರು ರಾಮ ಕಾಲ್ಪನಿಕ ಎಂದು ಹೇಳಿದ್ದಾರೆ. ಆದರೆ ಅಧರ್ಮ ಯಾವಾಗ ಬರುತ್ತದೆ ಆಗ ನಾನು ಹುಟ್ಟಿ ಬಂದು ಅದನ್ನು ನಾಶ ಮಾಡುತ್ತೇನೆ ಎಂದು ಭಗವಂತ ತಿಳಿಸಿದ್ದಾನೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದರ ಮೂಲಕ ಜನತೆಯ ಭಕ್ತಿಯನ್ನು ಹೆಚ್ಚಿಸಲಾಗಿದೆ ಎಂದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್, ಜಿಲ್ಲಾಧ್ಯಕ್ಷ ಶಿವಣ್ಣ, ಪರಿಶಿಷ್ಟ ಘಟಕದ ಉಪಾಧ್ಯಕ್ಷ ಅನಿತ್, ಪ್ರಧಾನ ಕಾರ್ಯದರ್ಶಿ ರಾಮದಾಸ್, ಈಶ್ವರ ಮಂಜುನಾಥ್, ತಿಪ್ಪೇಸ್ವಾಮಿ, ಸರಸ್ವತಿ, ಕವನ ಕಾಂಚನ ಉಪಸ್ಥಿತರಿದ್ದರು.

ಕಾರ್ಯಕರ್ತನಾಗಿ ಇರಲೂ ಸಿದ್ಧ: ಪಕ್ಷ ಪಕ್ಷ ನೀಡಿದ ಸೂಚನೆಯಂತೆ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೊಂದು ವೇಳೆ ಪಕ್ಷ ಸಾಮಾನ್ಯ ಕಾರ್ಯಕರ್ತನಾಗಿ ಇರು ಎಂದರೂ ಅದಕ್ಕೂ ಸಿದ್ದನಿದ್ದೇನೆ ಎಂದು ಎ.ಮುರುಳಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸಮಿತಿ ನಿರ್ದೇಶನದಂತೆ ಜಿಲ್ಲಾಧ್ಯಕ್ಷನಾಗಿ ಎರಡನೇ ಅವಧಿಗೆ ಮುಂದುವರಿದಿದ್ದೇನೆ. ಬೇರೆಯವರು ಅಧ್ಯಕ್ಷ ಸ್ಥಾನ ಕೇಳುತ್ತಿರುವುದು ಕೂಡಾ ನ್ಯಾಯ ಸಮ್ಮತವಾಗಿದೆ. ಅಧ್ಯಕ್ಷರಾಗುವ ಎಲ್ಲ ಅರ್ಹತೆಗಳು ಅವರಲ್ಲಿವೆ. ನಾನು ಪಕ್ಷದ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಇರು ಎಂದರೆ ಇರುತ್ತೇನೆ. ಎಲ್ಲದಕ್ಕೂ ಸಿದ್ದವಾಗಿದ್ದೇನೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಲ್ಲಿಯವರೆಗೂ ಯಾರು ಪಕ್ಷದಿಂದ ಟೀಕೆಟ್ ನೀಡುವಂತೆ ಮನವಿ ಮಾಡಿಲ್ಲ. ಅರ್ಜಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಪಕ್ಷದಿಂದ ಕಚೇರಿಯನ್ನು ತೆರೆಯಲಾಗುವುದು. ರಾಜ್ಯ ಮಟ್ಟದಿಂದ ನಾಯಕರು ಬರಲಿದ್ದಾರೆ. ಅವರ ಮುಂದೆ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳಿಂದ ಅರ್ಜಿಯನ್ನು ತೆಗೆದುಕೊಳ್ಳಲಾಗುವುದು, ಕೆಲವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುವುದರ ಮೂಲಕ ಆಕಾಂಕ್ಷಿಗಳಾಗಿದ್ದಾರೆ. ಇದರ ಬಗ್ಗೆ ನಮಗೂ ಮಾಹಿತಿ ಇದೆ ಎಂದು ಪ್ರಶ್ನೆಯೊಂದಕ್ಕೆ ಮುರಳಿ ಉತ್ತರಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...