ಕಾಂಗ್ರೆಸ್ ಶಾಸಕನ ಗೆಲುವಿಗೆ ಬಿಜೆಪಿ ಕಾರ್ಯಕರ್ತನ ಹರಕೆ! ಸಿದ್ಧಿವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರದ ಸೇವೆ

KannadaprabhaNewsNetwork |  
Published : Aug 24, 2024, 01:36 AM ISTUpdated : Aug 24, 2024, 06:29 AM IST
ಪೊಟೊ: 23ಎಸ್ಎಂಜಿಕೆಪಿ05ರಿಪ್ಪನಪೇಟೆ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹರಕೆ ತೀರಿಸಿದರು. | Kannada Prabha

ಸಾರಾಂಶ

ರಿಪ್ಪನಪೇಟೆ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಗೆಲುವಿಗೆ ಹರಕೆ ಹೊತ್ತಿದ್ದ ಅಭಿಮಾನಿ, ಬಿಜೆಪಿ ಕಾರ್ಯಕರ್ತನೊಟ್ಟಿಗೆ ಹರಕೆ ತೀರಿಸಿದರು.

 ರಿಪ್ಪನ್‌ಪೇಟೆ : ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಗೆಲುವಿಗಾಗಿ ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತರೊಬ್ಬರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಪಟ್ಟಣದ ಸಿದ್ಧಿವಿನಾಯಕ ದೇವಸ್ಥಾನದ ಸನ್ನಿಧಿಗೆ ಆಗಮಿಸಿ ತನ್ನ ಅಭಿಮಾನಿಯೊಂದಿಗೆ ಹರಕೆಯನ್ನು ಸಲ್ಲಿಸಿರುವ ಘಟನೆ ನಡೆದಿದೆ.

ಪಟ್ಟಣದ ಬಿಜೆಪಿ ಕಟ್ಟಾ ಕಾರ್ಯಕರ್ತ ಹರೀಶ್ ಪ್ರಭು ಎಂಬುವರು ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರವರ ಗೆಲುವಿಗಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರದ ಸೇವೆಯ ಹರಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಅಭಿಮಾನಿಯೊಂದಿಗೆ ಪಟ್ಟಣದ ದೇವಸ್ಥಾನಕ್ಕೆ ಆಗಮಿಸಿ ಹರಕೆಯನ್ನು ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಪ್ರಭು, ಕಳೆದ 30 ವರ್ಷಗಳಿಂದ ನಾನು ಸಂಘ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ, ನಾನು ಈಗಲೂ ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತನಾಗಿದ್ದು, ನನ್ನ ರಕ್ತದ ನರ ನಾಡಿಗಳಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತವಿದೆ ಆದರೆ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಮಾನವೀಯ ಮೌಲ್ಯಗಳು ಹಾಗೂ ಅವರ ಉಪಕಾರದ ಮನೋಭಾವ ನನ್ನನ್ನು ಪಕ್ಷದ ಚೌಕಟ್ಟನ್ನು ಮೀರಿ ಅವರ ಪರವಾಗಿ ನಿಲ್ಲುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ಸ್ವಾಮಿಯ ಮೊರೆ ಹೋಗಿದ್ದೆನು.

 ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದರೊಂದಿಗೆ ನನ್ನ ಅಭಿಲಾಷೆ ಈಡೇರಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಸಮ್ಮುಖದಲ್ಲಿ ನನ್ನ ಹರಕೆಯನ್ನು ಸಲ್ಲಿಸಿದ್ದೇನೆ ಹಾಗೂ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಮಂತ್ರಿಯಾಗುವುದರೊಂದಿಗೆ ಇನ್ನಷ್ಟು ಉನ್ನತ ಹುದ್ದೆಗೆ ಏರಲಿ ಎಂದು ಶ್ರೀ ಸ್ವಾಮಿಯಲ್ಲಿ ಮತ್ತೊಮ್ಮೆ ಹರಕೆ ಮಾಡಿಕೊಂಡಿದ್ದೇನೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ