ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳ ವಿರುದ್ಧ ರೈತರ ಆಕ್ರೋಶ
ಹೊಸದುರ್ಗ: ತಾಲೂಕಿನ ಬೊಕೀಕೆರೆ, ಹೊನ್ನೇಕೆರೆ ಹಾಗೂ ಶಿವನೇ ಕಟ್ಟೆ ಗ್ರಾಮಗಳ ತೆಂಗಿನ ತೋಟಗಳಿಗೆ ತಗುಲಿರುವ ಕಪ್ಪು ತಲೆ ಹುಳ ಹಾಗೂ ಬೆಂಕಿ ರೋಗದ ಕುರಿತು ತಾಂತ್ರಿಕ ಕಾರ್ಯಗಾರ ನಡೆಸಲು ಹಾಗೂ ಗೋನಿಯೋಜಸ್ ಪರೋಪ ಜೀವಿ ಬಿಡುಗಡೆಗಾಗಿ ರೈತರ ತೋಟಗಳಿಗೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತರ ವಿರೋಧ ಎದುರಿಸಬೇಕಾಯಿತು. ತೆಂಗಿನ ತೋಟಗಳಲ್ಲಿ ರೋಗ ಹೆಚ್ಚಾಗಿ ದಿನದಿಂದ ದಿನಕ್ಕೆ ತೆಂಗು ಬೆಳೆಯು ಹಾಳಾಗುತ್ತಿರುವ ಹಿನ್ನಲೆಯಲ್ಲಿ ಸಮಸ್ಯೆಗೆ ಸಿಲುಕಿರುವ ರೈತರ ನೋವು ಅಧಿಕಾರಿಗಳು, ವಿಜ್ಞಾನಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಯಿತು. ರೋಗ ನಿಯಂತ್ರಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳು ಹಾಗೂ ಜಪ್ರತಿನಿಧಿಗಳ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತ ಕೃಷಿಕರ ಆಕ್ರೋಶ, ಅಸಹನೆ ಎದುರಿಸಬೇಕಾಯಿತು. ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳನ್ನು ರೈತರಿಗೆ ತಿಳಿಸಲು ವಿಜ್ಞಾನಿಗಳು ಪ್ರಯತ್ನಿಸಿದರು.ತೋಟಗಾರಿಕೆ ವಿಜ್ಞಾನಿ ಪ್ರಕಾಶ್ ಮಾತನಾಡಿ, ಕಪ್ಪು ತಲೆ ಹುಳಗಳ ಹತೋಟಿ ಕ್ರಮವನ್ನು ಪ್ರಾರಂಭಿಕ ಹಂತದಲ್ಲಿಯೇ ಆರಂಭಿಸಬೇಕಾಗಿತ್ತು. ರೋಗವು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ರೋಗ ತಗಲಿರುವ ಎಲ್ಲಾ ತೆಂಗಿನ ಮರಗಳಿಗೂ ಔಷಧೋಪಚಾರ ನಡೆಸುವ ಅನಿವಾರ್ಯತೆ ಇದೆ. ಪ್ರತಿ ಮರಕ್ಕೂ ಔಷಧಿಯನ್ನು ಸಿಂಪಡಿಸುವ ಮೂಲಕ ತೆಂಗು ಬೆಳೆಯನ್ನು ರಕ್ಷಿಸಬಹುದಾಗಿದೆ. ರೈತರು ಸಾಮೂಹಿಕವಾಗಿ ರೋಗ ನಿಯಂತ್ರಣಕ್ಕೆ ಪ್ರಯತ್ನಿಸಿದರೆ ಮಾತ್ರ ರೋಗವನ್ನು ಹತೋಟಿ ಮಾಡಬಹುದಾಗಿದೆ ಎಂದರು. ಕೃಷಿ ಸಮಾಜದ ನಿರ್ದೇಶಕ ರಾಗಿ ಶಿವಮೂರ್ತಿ ಮಾತನಾಡಿ, ರೋಗ ನಿಯಂತ್ರಣದಲ್ಲಿ ತೋಟಗಾರಿಕೆ ಇಲಾಖೆಯ ವೈಫಲ್ಯವಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ರೋಗದ ಕುರಿತು ರೈತರಿಗೆ ಮಾಹಿತಿ ನೀಡುವಲ್ಲಿ, ಪರಿಹಾರ ಕ್ರಮಗಳನ್ನು ಸೂಚಿಸುವಲ್ಲಿ ತೋಟಗಾರಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ. ರೈತರಿಗೆ ತೆಂಗಿನ ತೋಟವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನಾದರೂ ರೋಗಪೀಡಿತ ತೋಟಗಳ ಸಂರಕ್ಷಣೆಗೆ ತೋಟಗಾರಿಕೆ ಇಲಾಖೆ ಮುಂದಾಗಬೇಕು ಎಂದು ಮನವಿ ಮಾಡಿದರು. ಕಪ್ಪು ತಲೆ ಹುಳದ ಬಾದೆಯಿಂದ ಹಾಳಾದ ತೋಟಗಳ ನಿರ್ವಹಣೆ ಹಾಗೂ ರೋಗದ ಹತೋಟಿಗಾಗಿ ಸರ್ಕಾರ ನೀಡಿದ ಸಹಾಯಧನವನ್ನು ಶ್ರೀರಾಂಪುರ ಹೋಬಳಿಗೆ ಮಾತ್ರ ಸೀಮಿತಗೊಳಿಸಿ ವಿತರಿಸಲಾಗಿದೆ. ಕಸಬಾ ಹೋಬಳಿಯ ಬಹುತೇಕ ತೋಟಗಳು ರೋಗಕ್ಕೆ ಸಿಲುಕಿ ನಲುಗುತ್ತಿವೆ. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ತಾಲೂಕಿನ ಎಲ್ಲಾ ತೆಂಗು ಬೆಳೆಗಾರರಿಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಮೂಲಕ ರೋಗವನ್ನ ಹತೋಟಿಗೆ ತರುವ ಕೆಲಸಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ತೋಟಗಾರಿಕೆ ಅಧಿಕಾರಿಗಳಾದ ಶೋಭಾ, ವೆಂಕಟೇಶ್, ನರಸಿಂಹಮೂರ್ತಿ, ಕೃಷಿಕರಾದ ಮಾಚೇನಹಳ್ಳಿ ಬಸಣ್ಣ, ಚಿದಾನಂದ್, ಬಂಗಾರಪ್ಪ, ಮಂಜಪ್ಪ, ಅರೆ ತಿಮ್ಮಪ್ಪ ಮತ್ತಿತರರಿದ್ದರು.