ಜಡ್ಡುಗಟ್ಟಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ಶಾಸಕ ಪಿ. ರವಿಕುಮಾರ್

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಮಂಡ್ಯದಲ್ಲಿ ನಗರೋತ್ಥಾನ ಕಾಮಗಾರಿ ನಿರ್ವಹಿಸುವಲ್ಲಿ ಗುತ್ತಿಗೆದಾರರು ಸಂಪೂರ್ಣ ನಿರ್ಲಕ್ಷ್ಯ, ಕಳೆದ ಒಂದು ವರ್ಷದಿಂದ ನಗರೋತ್ಥಾನ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಕೆಲವೆಡೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನು ಎರಡು ತಿಂಗಳೊಳಗೆ ಕಾಮಗಾರಿ ಮುಗಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ. ಪ್ಯಾಕೇಜ್ ಟೆಂಡರ್ ಮಾಡುವುದರಿಂದ ಸಮಯ ಉಳಿಯುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯಗುತ್ತಿಗೆದಾರರು ಜಡ್ಡುಗಟ್ಟಿಹೋಗಿದ್ದಾರೆ. ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಕಾಮಗಾರಿಗಳನ್ನು ನಿರ್ವಹಿಸಲು ಕಾಡಿಬೇಡುವಂತಹ ಪರಿಸ್ಥಿತಿ ಎದುರಾಗಿದೆ. ಅವರೆಲ್ಲರೂ ಶಕ್ತಿ ಪ್ರದರ್ಶನಕ್ಕೆ ನಿಂತಿದ್ದಾರೆ. ಈಗ ನಾವು ಮತ್ತು ನೀವು (ಸದಸ್ಯರು) ಒಗ್ಗಟ್ಟಾಗಿ ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಧರಣಪ್ಪ ಸಭಾಂಗಣದಲ್ಲಿ ಗುರುವಾರ ನಡೆದ ನಗರಸಭೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದಿಂದ ನಗರೋತ್ಥಾನ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಕೆಲವೆಡೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನು ಎರಡು ತಿಂಗಳೊಳಗೆ ಕಾಮಗಾರಿ ಮುಗಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಅವರು ನಗರೋತ್ಥಾನ ಕಾಮಗಾರಿಯಲ್ಲಿ ಇದುವರೆಗೂ ಎಷ್ಟು ಕಾಮಗಾರಿಗಳು ನಡೆದಿವೆ, ಎಷ್ಟು ಪೂರ್ಣಗೊಂಡಿವೆ, ಬಾಕಿ ಎಷ್ಟಿವೆ ಎಂದು ಪ್ರಶ್ನಿಸಿದಾಗ, ನಗರಸಭೆ ಎಇಇ ರವಿಕುಮಾರ್ ಅವರು, ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ೧೬.೯೨ ಕೋಟಿ ರು. ಹಣದಲ್ಲಿ ಒಂದು ವರ್ಷದಿಂದ ೫.೯೯ ಕೋಟಿ ರು. ಕಾಮಗಾರಿಗಳು ನಡೆದಿದ್ದು, ೬ ಕೋಟಿ ರು. ಬಿಲ್ ಹಣವನ್ನು ನೀಡಲಾಗಿದೆ. ಉಳಿದ ೬ ಕೋಟಿ ರು. ಕಾಮಗಾರಿಗಳು ನಡೆಯಬೇಕಿದೆ ಎಂದು ವಿವರಿಸಿದರು.

ಪ್ಯಾಕೇಜ್ ಕಾಮಗಾರಿಯನ್ನು ರದ್ದುಗೊಳಿಸಿ ಕಡಿಮೆ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆಯುವಂತೆ ಎಚ್.ಎಸ್.ಮಂಜು ಸಲಹೆ ನೀಡಿದಾಗ, ಶಾಸಕ ಪಿ.ರವಿಕುಮಾರ್ ಪ್ಯಾಕೇಜ್ ಟೆಂಡರ್ ಮಾಡುವುದರಿಂದ ಸಮಯ ಉಳಿಯುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಬಹುದು. ಟೆಂಡರ್‌ನಲ್ಲಿ ಗುಣಾತ್ಮಕವಾಗಿ ಕೆಲಸ ಮಾಡುವ ಟೆಂಡರ್‌ದಾರರು ಭಾಗವಹಿಸುವರು. ೨ ಲಕ್ಷದ ಕಾಮಗಾರಿಗಳಿಗೆಲ್ಲಾ ಪ್ರತ್ಯೇಕ ಟೆಂಡರ್ ಕರೆಯಬೇಕಾದರೆ ಇಡೀ ವರ್ಷ ಟೆಂಡರ್ ನಡೆಸಬೇಕು. ಸಮಯ ವ್ಯರ್ಥದ ಜೊತೆಗೆ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲಾಗುವುದಿಲ್ಲ ಎಂದರು.

೧೫ನೇ ಹಣಕಾಸು ಯೋಜನೆಯ ಟೆಂಡರ್‌ನ್ನು ಸಕಾರಣವಿಲ್ಲದೆ ಮುಂದೂಡಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ, ಯಾರನ್ನು ಕೇಳಿ ಮುಂದೂಡಿದಿರಿ. ನಮಗೆ ವಿಷಯ ತಿಳಿಸಿದಿರಾ. ನಿಮಗೆ ನೀವೇ ಸುಪ್ರೀಮಾ. ಬೇಗ ಬೇಗ ಟೆಂಡರ್ ಮುಗಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವ ಬದಲು ಟೆಂಡರ್ ಮುಂದೂಡಿ ಸಮಯ ವ್ಯರ್ಥ ಮಾಡುವುದೇಕೆ ಎಂದು ಶಾಸಕ ರವಿಕುಮಾರ್ ನಗರಸಭೆ ಎಇಇ ಅವರನ್ನು ಪ್ರಶ್ನಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಒಣಗಿನಿಂತಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಅವರು ಯಾವುದೇ ಕ್ರಮವನ್ನೂ ಜರುಗಿಸುವುದಿಲ್ಲ. ಈಗಾಗಲೇ ಕಳೆದ ವರ್ಷ ಒಣಗಿದ ಮರದ ಕೊಂಬೆ ಬಿದ್ದು ಪೌರ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಆದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಸದಸ್ಯ ಎಂ.ಪಿ.ಅರುಣ್‌ಕುಮಾರ್ ಸಭೆಯ ಗಮನಕ್ಕೆ ತಂದರು.

ಇದರ ಜೊತೆಗೆ ರಸ್ತೆಯಲ್ಲಿ ಬೆಳೆದುನಿಂತಿರುವ ನಾಲ್ಕು ತೆಂಗಿನ ಮರಗಳನ್ನು ತೆರವುಗೊಳಿಸುವಂತೆ ಕೋರಿದರೂ ಇದುವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿಲ್ಲ ಎಂದು ಸದಸ್‌ಯೆ ಮೀನಾಕ್ಷಿ ಪುಟ್ಟಸ್ವಾಮಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಒಣಗಿರುವ ಮರಗಳನ್ನು ತೆರವುಗೊಳಿಸುವುದಕ್ಕೆ ಏನು ತೊಂದರೆ ನಿಮಗೆ. ನಾನು ಡಿಎಫ್‌ಒ ಜೊತೆ ಮಾತನಾಡುತ್ತೇನೆ. ಸದಸ್ಯರು ಹೇಳಿರುವ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಎಆರ್‌ಎಫ್‌ಒ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಪೌರಾಯುಕ್ತ ಆರ್.ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ ಇದ್ದರು.

Share this article