ಆರೋಗ್ಯಪೂರ್ಣ ಜೀವ ನಿರ್ವಹಣೆಗೆ ಬ್ಲಡ್ಡು, ಬದುಕಿನ ನಿರ್ವಹಣೆಗೆ ದುಡ್ಡು ಬೇಕು, ಇವುಗಳು ದಾನದ ಮೂಲಕ ಸತ್ಪಾತ್ರಕ್ಕೆ ಸಲ್ಲಬೇಕು ಎಂದು ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವಮಹಾಸ್ವಾಮಿಗಳು ನುಡಿದರು.
ಹಾನಗಲ್ಲ:ಆರೋಗ್ಯಪೂರ್ಣ ಜೀವ ನಿರ್ವಹಣೆಗೆ ಬ್ಲಡ್ಡು, ಬದುಕಿನ ನಿರ್ವಹಣೆಗೆ ದುಡ್ಡು ಬೇಕು, ಇವುಗಳು ದಾನದ ಮೂಲಕ ಸತ್ಪಾತ್ರಕ್ಕೆ ಸಲ್ಲಬೇಕು ಎಂದು ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವಮಹಾಸ್ವಾಮಿಗಳು ನುಡಿದರು.ಶನಿವಾರ ಹಾನಗಲ್ಲ ತಾಲೂಕು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಆವರಣದಲ್ಲಿ ಶ್ಯಾಡಗುಪ್ಪಿ ಎಸ್‌ಎಸ್. ಮೂರಮಟ್ಟಿ ಚಾರಿಟೇಬಲ್ ಟ್ರಸ್ಟ, ಭೂಮಿಕಾ ಕೋಚಿಂಗ್ ಕ್ಲಾಸ್ ಸಂಯುಕ್ತ ಆಶ್ರಯದಲ್ಲಿ ಟ್ರಸ್ಟನ ೧೨ ನೇ ವಾರ್ಷಿಕೋತ್ಸದ ಅಂಗವಾಗಿ ಆಯೋಜಿಸಿದ ಸಾಧಕ ಸಂಭ್ರಮ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಮಾಜಕ್ಕೆ ಮಾರ್ಗದರ್ಶಿ ಗುರುಗಳ ಅವಶ್ಯಕತೆಯಿದೆ. ಹಾಗೇಯೇ ಇಂದು ವಿದ್ಯಾರ್ಥಿಗಳಿಗೂ ಬದುಕಿನ ಮಾರ್ಗದರ್ಶನ ಮಾಡುವ ವಿದ್ಯಾಗುರುಗಳ ಅವಶ್ಯಕತೆಯೂ ಇದೆ. ಗುರುಗಳಾದವರು ಗರ್ವ ಬಿಟ್ಟು, ಹಮ್ಮು ಬಿಮ್ಮುಗಳನ್ನು ದೂರವಿಟ್ಟು ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆಯೂ ಇದೆ. ಅಂತಹ ಗುರುಗಳನ್ನು ಮಾತ್ರ ಸಮಾಜ ಒಪ್ಪಿಕೊಳ್ಳುತ್ತದೆ. ಸಾರ್ಥಕ ಜೀವನಕ್ಕೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಪರೋಪಕಾರ ಗುಣ ಬೆಳೆಸಿಕೊಳ್ಳೋಣ. ಇಂದು ರಕ್ತ ದಾನವೂ ಸೇರಿ ಸಮಾಜದ ಹಿತಕ್ಕೆ ಜ್ಞಾನ, ಹಣದ ದಾನದ ಅಗತ್ಯವೂ ಇದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಮಾದರಿ ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ತೀರ ಮಹತ್ವದ್ದಾಗಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡದಿದ್ದರೆ ಉತ್ತಮ ಸಮಾಜ ನಿರ್ಮಾಣದಲ್ಲಿ ದೊಡ್ಡ ಸೋಲು ಉಣ್ಣಬೇಕಾಗುತ್ತದೆ. ಇತ್ತೀಚೆಗೆ ಶಿಕ್ಷಣದ ದಾರಿ ವಿಭಿನ್ನವಾಗಿದ್ದು ಪ್ರತಿಭಾವಂತ ಪರಿಶ್ರಮಿಗೆ ಮಾತ್ರ ಎಲ್ಲವೂ ದಕ್ಕಬಲ್ಲದು. ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಅದಕ್ಕನುಗುಣವಾಗಿ ಸ್ಪರ್ಧೆ ನೀಡಿ
ಅಂಕುಶ ಗಣಿಸುವ ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು.ಹುಬ್ಬಳ್ಳಿಯ ನ್ಯಾಯವಾದಿ ಸರ್ವನ್ ಆದಿತ್ಯ ಚನ್ನಬಸಪ್ಪ ಪ್ರೇರಕ ನುಡಿಗಳನ್ನಾಡಿ, ವಿದ್ಯೆಗೆ ವಿನಯ ಸುವಾಸನೆ ಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವಿರಲಿ. ಅಹಂಕಾರದಿಂದ ದೂರವಿರಿ. ಈಗ ಓದು ಪ್ರತಿಷ್ಠೆಗಲ್ಲ. ಬದುಕಿಗಾಗಿ ಓದಬೇಕು. ನಾಳೆಗಳ ಅರಿವು ನಮಗಿದ್ದರೆ ಈಗ ಉತ್ತಮ ಓದಿನ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಗ್ರಾಮೀಣ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ಎಸ್.ಎಸ್. ಮೂರಮಟ್ಟಿ, ಸಾಹಿತ್ಯ ಸಂಗೀತ ಕಲೆಗೆ ಮುಪ್ಪಿಲ್ಲ. ಹಣದ ಹಿಂದೆ ಬಿದ್ದ ಕಲಾವಿದ ಬೆಳೆಯಲಾರ. ಕಲಾವಿದರನ್ನು ಗೌರವಿಸುವ ಮನಸ್ಸು ಸಮಾಜದ್ದಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಖ್ಯಾತ ರಂಗ ನಟಿ ಪುಷ್ಪಮಾಲಾ ಅಣ್ಣೀಗೇರಿ ಅವರಿಗೆ ಕಲಾನಿಧಿ ಪ್ರಶಸ್ತಿ, ಹುನಗುಂದದ ಶಿಕ್ಷಕ ಮಾಲತೇಶ ನಾಡಿಗೇರ ಅವರಿಗೆ ಗುರುಚೇತನ ಪ್ರಶಸ್ತಿ, ಪ್ರಗತಿಪರ ರೈತ ಶಿವಯೋಗಿ ಬಾಳೂರ ಅವರಿಗೆ ಪ್ರಗತಿಪರ ರೈತ ಪ್ರಶಸ್ತಿ, ಹಾವೇರಿ ತಾಲೂಕು ಕಾಟೇನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಮುಖ್ಯಶಿಕ್ಷಕಿ ಮಂಜುಳಾ ಚಂದ್ರಗಿರಿ ಅವರಿಗೆ ಉತ್ತಮ ಶಾಲೆ ಪ್ರಶಸ್ತಿ, ಶಹನಾಯಿ ಕಲಾವಿದ ರಾಮಣ್ಣ ಭಜಂತ್ರಿ ಅವರಿಗೆ ಗೌರವ ಸಮ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವೂ ನಡೆಯಿತು.ಶಿಕ್ಷಕ ಗಿರೀಶ ದೊಡ್ಡಮನಿ ಆಶಯ ನುಡಿ ನುಡಿದರು. ಶಿಕ್ಷಕಿ ನೀಲಮ್ಮ ಮೂರಮಟ್ಟಿ ಪ್ರಶಸ್ತಿ ಪುರಸ್ಕೃತರನ್ನ ಪರಿಚಯಿಸಿದರು. ಶಿಕ್ಷಕ ನವೀನಕುಮಾರ ಸ್ವಾಗತಿಸಿದರು. ಪ್ರತಿಭಾ ಹೊಸಳ್ಳಿ, ಭೂಮಿಕಾ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಶೃತಿ ಬೊಮ್ಮಣ್ಣನವರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.