ಕನ್ನಡಪ್ರಭ ವಾರ್ತೆ ನಾಪೋಕ್ಲು
ಹಣದಿಂದ ಒಂದು ಜೀವ ಉಳಿಸಲು ಸಾಧ್ಯವಿಲ್ಲ. ಬದಲಿಗೆ ರಕ್ತದಾನದಿಂದ ಮಾತ್ರ ಜೀವ ಉಳಿಸಲು ಸಾಧ್ಯ ಎಂದು ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ, ಎನ್.ಎಸ್.ಎಸ್. ಘಟಕಗಳು ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಜೀವನ ಸ್ವಾರ್ಥ ರಹಿತವಾಗಿರಬೇಕು. ಪ್ರತಿಯೊಬ್ಬರೂ ರಕ್ತದ ಮಾಲೀಕರಾಗಿದ್ದು ಅದರ ಜೊತೆಯಲ್ಲಿ ರಕ್ತದಾನಿಗಳು ಆಗಬೇಕೆಂದರು.ಆರೋಗ್ಯ ಜಾಗೃತಿಯಲ್ಲಿ ರೆಡ್‌ಕ್ರಾಸ್ ಮತ್ತು ಎನ್.ಎಸ್.ಎಸ್. ಘಟಕಗಳ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಆರೋಗ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಘಟಕ ಅಧಿಕಾರಿ ಮೊಹಮ್ಮದ್ ಇಬ್ರಾಹಿಂ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ವಿವರಿಸಿದರು. ರಕ್ತದಾನ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ರಕ್ತದಾನ ಸರ್ವ ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳು ಅದರ ಮಹತ್ವ ಅರಿಯಬೇಕು ಎಂದರು.
ಸಂತ ಜೋಸೆಫರ ಆಸ್ಪತ್ರೆಯ ವತಿಯಿಂದ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಮತ್ತು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಚರ್ಚ್ ಸಹಾಯಕ ಗುರು ಫಾ. ಚಾರ್ಲ್ಸ್, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.