ಕನ್ನಡಪ್ರಭ ವಾರ್ತೆ ಮೈಸೂರು
ರಕ್ತದಾನ ಎಂದರೆ ಜೀವದಾನ, ಇದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಮೈಸೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗ, ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಕೆ.ಆರ್. ಆಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ- 2024 ರಕ್ತದಾನಿಗಳ ಹಬ್ಬದಲ್ಲಿ ಅವರು ಮಾತನಾಡಿದರು.
ರಕ್ತದಾನದಿಂದ ಕಾರ್ಯತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ಅಲ್ಲದೆ, ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80 ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಬಹುದು ಎಂದರು.ದೇಶದಲ್ಲಿ ಪ್ರತಿ ಎರಡು ಸೆಕೆಂಡ್ ಗೆ ಯಾರಿಗಾದರೂ ರಕ್ತದ ಅಗತ್ಯ ಇದ್ದೆ ಇರುತ್ತದೆ. ಪ್ರತಿವರ್ಷ ಅಂದಾಜು 3 ಕೋಟಿ ರಕ್ತದ ಘಟಕಗಳನ್ನು ಪೂರಣ ಮಾಡಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತ ಬೇಕಾಗುತ್ತದೆ. ಆದರೆ, ಕೇವಲ ಎರಡೂವರೆ ಕೋಟಿ ಯೂನಿಟ್ ಮಾತ್ರ ರಕ್ತ ಲಭ್ಯವಾಗುತ್ತಿದೆ. ಹೀಗಾಗಿ, ರಕ್ತದಾನ ಮಾಡಲು ಮತ್ತಷ್ಟು ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ಹೇಳಿದರು.
ಅನಿಮಿಯಾ ಬಗ್ಗೆ ನಿರ್ಲಕ್ಷ್ಯ ಬೇಡ:ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಮಾತನಾಡಿ, ರಕ್ತದಾನ ಮಾಡುವುದು ಸಮಾಜದ ಸೇವೆ. ರಕ್ತ ಕೇಂದ್ರಗಳಲ್ಲಿ ರಕ್ತ ಶೇಖರಣೆ ಇದ್ದರೆ ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು ಪುಣ್ಯದ ಕೆಲಸ ಎಂದರು.
ಅನಿಮಿಯಾ ಮುಕ್ತ ಭಾರತಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಕ್ರಮ ತೆಗೆದುಕೊಂಡು, ಜನರು ಕೂಡ ಸರ್ಕಾರದ ಹಲವಾರು ಸ್ಪಂದಿಸಿ, ಅಗತ್ಯ ನೆರವು ಪಡೆದು ರೋಗದಿಂದ ಮುಕ್ತರಾಗಬೇಕು. ಅನಿಮಿಯಾ ರೋಗ ಕಾಣಿಸಿಕೊಂಡ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಅನಿಮಿಯಾ ಕಾಣಿಸಿಕೊಂಡಾಗ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು ಎಂದರು.ಹೆಚ್ಚು ರಕ್ತದಾನಿಗಳಿಗೆ ಸನ್ಮಾನ:
ಇದೇ ವೇಳೆ ಹೆಚ್ಚು ಬಾರಿ ರಕ್ತದಾನ ಮಾಡಿದ ಆಶೀಶ, ಮಹೇಶ, ಮನು, ಬಸವರಾಜು, ಸಂತೋಷ, ಸೆಬಾಸ್ಟಿನ್ ರಿಚರ್ಡ್ ಲೋಬೊ, ಆನಂದ, ಹರೀಶ್ ಕುಮಾರ್, ಡಾ. ಗಿರೀಶ, ಸ್ನೇಕ್ ಕೋಬ್ರಾಕುಮಾರ್, ವಿನೋದ್ ಬಿದರಗೂಡು, ಕೃಷ್ಣ, ಅಶ್ವಿನಿ, ಎ.ಎಲ್. ಸಂಜಯ್, ಡಾ.ಎಂ.ಎ. ಮನು, ಮಹೇಶ, ಶ್ವೇತಾ ಎಸ್. ಭಾರದ್ವಾಜ, ಎಸ್. ವಿನುತಾ ಶ್ರೀಹರಿ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕಾಧಿಕಾರಿ ಡಾ. ಮೊಹಮ್ಮದ್ ಸಿರಾಜ್ ಅಹಮದ್, ಕೆ.ಆರ್. ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ. ಕುಸುಮಾ, ಮೈಸೂರು ವಿವಿ ಸಾಮಾಜಿಕ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಚಂದ್ರಮೌಳಿ, ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷೆ ಡಾ.ಎಂ.ಎಸ್. ಸ್ವಪ್ನ, ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಅಧ್ಯಕ್ಷ ಪ್ರೊ. ಪ್ರಮೋದ್ ಎಂ. ಗವಾರಿ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ. ಗಿರೀಶ, ಕಾರ್ಯನಿರ್ವಾಹಕ ಟ್ರಸ್ಟಿ ಸಿ.ಜಿ. ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವ್ರಿಕಂ ಅಯ್ಯಂಗಾರ್ ಮೊದಲಾದವರು ಇದ್ದರು.35 ಲಕ್ಷ ಜನಸಂಖ್ಯೆ ಇರುವ ಮೈಸೂರು ಜಿಲ್ಲೆಯಲ್ಲಿ ಪ್ರತಿ ವರ್ಷ 35 ಸಾವಿರ ಮಹಿಳೆಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿಯಾಗುತ್ತಿದ್ದಾರೆ. ಇವರಲ್ಲಿ ಹಲವರು ರಕ್ತಹೀನತೆಗೆ (ಅನಿಮಿಯಾ) ಒಳಗಾಗುತ್ತಾರೆ. ಉತ್ತಮ ಆಹಾರ, ಜೀವನಶೈಲಿಯ ಕೊರತೆಯಿಂದ ಯುವಜನತೆಗೂ ಈ ಸಮಸ್ಯೆ ಕಾಡುತ್ತಿದೆ. ರಕ್ತ ಹೀನತೆ ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದ್ದು, ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ರಕ್ತ ನೀಡುವುದೇ ಅಂತಿಮ ಮದ್ದು. ಇಂಥ ರೋಗಿಗಳ ಬದುಕಿಗೆ ರಕ್ತದಾನಿಗಳೇ ಆಸರೆ.
- ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ