ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಮನುಷ್ಯ ಏನೆಲ್ಲ ಸಂಶೋಧಿಸಿ ಮುನ್ನಡೆದಿದ್ದರೂ, ಮನುಷ್ಯನ ದೇಹದೊಳಗಿನ ರಕ್ತವನ್ನು ಮಾತ್ರ ಸೃಷ್ಟಿಸಲು ಸಾಧ್ಯವಾಗಿಲ್ಲ. ಇಂತಹ ಅತ್ಯಮೂಲ್ಯವಾದ ರಕ್ತದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕಾದ ಮತ್ತು ನೆನಪಿಸಿಕೊಳ್ಳಬೇಕಾದ ದಿನವೇ ವಿಶ್ವ ರಕ್ತದಾನಿಗಳ ದಿನಾಚರಣೆಯಾಗಿದೆ. ಇಂತಹ ಸಂದರ್ಭದಲ್ಲಿ ರಕ್ತದಾನ ಎಂಬುದು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಬೇಕಾಗಿದೆ.
ಇತ್ತೀಚೆಗೆ ರಕ್ತದಾನದ ಕುರಿತು ಇದ್ದ ಕೆಲವು ತಪ್ಪು ಗ್ರಹಿಕೆಗಳು ದೂರವಾಗುತ್ತಿದೆ. ರಕ್ತದಾನ ಎನ್ನುವುದು ಅತ್ಯಂತ ಶ್ರೇಷ್ಠ ಎಂಬ ತಿಳುವಳಿಕೆ ಮೂಡುತ್ತಿದೆ. ವರ್ಷ ದಿಂದ ವರ್ಷಕ್ಕೆ ರಕ್ತ ರಕ್ತ ನೀಡಲು ಮುಂದೆ ಬರುತ್ತಿರುವ ದಾನಿಗಳ ಸಂಖ್ಯೆ ಏರುತ್ತಿದೆ. ಆದರೆ ಏರುತ್ತಿರುವ ಬೇಡಿಕೆಯನ್ನು ಸರಿಗಟ್ಟಲು ಈ ಸಂಖ್ಯೆ ಸಾಕಾಗುತ್ತಿಲ್ಲ. ಪ್ರತಿ ವರ್ಷವೂ ಏಪ್ರಿಲ್‌ನಿಂದ ಜೂನ್ ವರೆಗೆ ರಕ್ತದ ಸಂಗ್ರಹದ ಸಮಸ್ಯೆ ಅತ್ಯಧಿಕವಾಗಿರುತ್ತದೆ. ಅದರಲ್ಲಿಯೂ ಈ ಬಾರಿ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಿತ್ತು.ಮಲೆನಾಡಿನಲ್ಲಿ 25 ರಕ್ತನಿಧಿ ಕೇಂದ್ರ:
ಮಲೆನಾಡಿನ ಎಂಟು ಜಿಲ್ಲೆಗಳಲ್ಲಿ 25 ರಕ್ತನಿಧಿ ಕೇಂದ್ರಗಳಿವೆ. ರಕ್ತ ನಿಧಿ ಕೇಂದ್ರಗಳು ಎಷ್ಟೇ ಇದ್ದರೂ ದಾನಿಗಳ ಸಂಖ್ಯೆ ಹೆಚ್ಚಳವಾಗದಿದ್ದಲ್ಲಿ ಏನೂ ಲಾಭವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು, ರಕ್ತನಿಧಿ ಕೇಂದ್ರಗಳು ರಕ್ತದಾನದ ಬಗ್ಗೆ ಅರಿವು ಮೂಡಿಸುವ ಯತ್ನ ನಡೆಸುತ್ತಿವೆ. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ. ಹೀಗಾಗಿ ಹಾಗೂ ಹೀಗೂ ರಕ್ತಸಂಗ್ರಹಣೆ ಸ್ವಲ್ಪ ಹೆಚ್ಚುತ್ತಿದೆ.ಶಿವಮೊಗ್ಗ ನಗರ ಇತ್ತೀಚೆಗೆ ಹೆಲ್ತ್ ಹಬ್ ಆಗುತ್ತಿದ್ದು, ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ. ಹೀಗಾಗಿ ಶಿವಮೊಗ್ಗ ನಗರದಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಕನಿಷ್ಟ ಸುಮಾರು 200 ಯೂನಿಟ್ ರಕ್ತ ಬೇಕಿದ್ದರೆ, ಸದ್ಯ ಸಂಗ್ರಹವಾಗುತ್ತಿರುವುದು 120 ಯೂನಿಟ್ ಮಾತ್ರ. ಹೀಗಾಗಿ ಕೆಲವೊಮ್ಮೆ ಶಸ್ತ್ರ ಚಿಕಿತ್ಸೆಯನ್ನು ಕೂಡ ಮುಂದೂಡುವ ಪರಿಸ್ಥಿತಿ ಎದುರಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 350-400 ತಲ್ಸೀಮಿಯಾ [ರಕ್ತ ಉತ್ಪತ್ತಿಯಾಗದ ಕಾಯಿಲೆ] ರೋಗಿ ಗಳಿದ್ದು, ಇವರಿಗೆ ಪ್ರತಿ 28 ದಿನಕ್ಕೆ ರಕ್ತವನ್ನು ಕಡ್ಡಾಯವಾಗಿ ಕೊಡಲೇಬೇಕು. ಇನ್ನು ಹೆರಿಗೆಯಂತಹ ಸಂದರ್ಭದಲ್ಲಿ ರಕ್ತ ಪೂರೈಸಲೇಬೇಕು. ಹೀಗೆ ರಕ್ತದ ಪರಿಸ್ಥಿತಿ ಕಠಿಣವಾಗಿಯೇ ಇದೆ. ಆದರೆ ಸಾರ್ವಜನಿಕರಿಗೆ ಇದು ಗೊತ್ತಾಗುವುದೇ ಇಲ್ಲ. ಅಂಗಡಿಗೆ ಹೋಗಿ ಸಾಮಾನು ಖರೀದಿಸಿದಂತೆ ರಕ್ತನಿಧಿ ಕೇಂದ್ರಕ್ಕೆ ಹೋಗಿ ರಕ್ತಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಇಲ್ಲ ಎಂದರೆ ಗಲಾಟೆಯನ್ನೂ ಮಾಡುತ್ತಾರೆ. ಆದರೆ ರಕ್ತ ನೀಡುವುದು ನಮ್ಮ ಜವಾಬ್ದಾರಿ ಕೂಡ ಎಂಬ ಅರಿವು ಬಹುತೇಕರಿಗೆ ಇಲ್ಲ.ಕೊಟ್ಟವರೇ ಕೊಡಬೇಕು:
ರಕ್ತದಾನಿಗಳ ಸಂಖ್ಯೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಳವಾಗದ ಕಾರಣ ರಕ್ತ ನೀಡಿದವರೇ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಅನಿವಾರ್ಯತೆ ಇದೆ. ಈ ರಕ್ತದಾನಿಗಳು ಇದನ್ನೊಂದು ಹೆಮ್ಮೆ ಮಾತ್ರವಲ್ಲ, ತಮ್ಮ ಆದ್ಯ ಕರ್ತವ್ಯ ಎಂದು ಕೂಡ ಭಾವಿಸಿದ್ದಾರೆ.ರಕ್ತದಾನಿಗಳು:
ಶಿವಮೊಗ್ಗ ನಗರದ ಧರಣೇಂದ್ರ ದಿನಕರ್ 111 ಬಾರಿ, ಮಧು 107 ಬಾರಿ, ಯಜ್ಞನಾರಾಯಣ 106 ಬಾರಿ, ರೋಟರಿ ರಕ್ತನಿಧಿ ಕೇಂದ್ರದ ಎಸ್. ಕೆ. ಸತೀಶ್ 98 ಬಾರಿ ರಕ್ತ ನೀಡಿದ್ದಾರೆ. ಇವರಲ್ಲದೆ, ಅನೇಕ ದಾನಿಗಳು ಕೂಡ ಈ ಪಟ್ಟಿಯಲ್ಲಿದ್ದಾರೆ. ಶಿವಮೊಗ್ಗ ನಗರದಲ್ಲಿ ಇಂತಹ ಸುಮಾರು 100 ಮಂದಿ ಸ್ವಯಂ ರಕ್ತದಾನಿ ಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ರಕ್ತದಾನಿಗಳ ಗುಂಪು, ವ್ಯಾಟ್ಸಪ್ ಗುಂಪು ಹೀಗೆ ಅನೇಕ ದಾನಿಗಳು ಸಂಘಟನೆಯ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ.ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಆರು ರಕ್ತನಿಧಿ ಕೇಂದ್ರಗಳಿವೆ. ಶಿಕಾರಿಪುರ, ಸೊರಬ ಮತ್ತು ಶಿರಾಳಕೊಪ್ಪದಲ್ಲಿ ಮೆಗ್ಗಾನ್ ಆಸ್ಪತ್ರೆಯ ರೆಫೆರಲ್ ಯೂನಿಟ್‌ಗಳಿವೆ. ಭದ್ರಾವತಿ ಮತ್ತು ಹೊಸನಗರದಲ್ಲಿ ಒಂದೇ ಒಂದು ರಕ್ತನಿಧಿ ಕೇಂದ್ರವಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಒಬ್ಬರು ರಕ್ತ ನೀಡುವುದರಿಂದ ನಾಲ್ಕು ಮಂದಿಯ ಜೀವ ಉಳಿಯುತ್ತದೆ. ರಕ್ತ ನೀಡಿದವರ ಆರೋಗ್ಯವೂ ಸುಧಾರಿಸುತ್ತದೆ. ರಕ್ತದಾನ ಎನ್ನುವುದು ಒಂದು ಆಂದೋಲನವಾಗಬೇಕು. ಅದರಲ್ಲಿಯೂ ಮಲೆನಾಡು ಮಾದರಿ ಎನ್ನುವಂತಹ ದಿನ ಬರಬೇಕು ಎನ್ನುತ್ತಾರೆ ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಪಿಆರ್ ಓ ಎಸ್. ಕೆ.ಸತೀಶ್.