ಮತ್ತೆ ಬಾಯ್ಲರ್‌ ಸ್ಟೋಟ: ಗುಣಮಟ್ಟದ ಬಗ್ಗೆ ಅನುಮಾನ

KannadaprabhaNewsNetwork | Published : Jul 8, 2024 12:35 AM

ಸಾರಾಂಶ

ಈ ಹಿಂದೆ ಪ್ರಾಯೋಗಿಕ ಪರೀಕ್ಷೆ ವೇಳೆ ಒಮ್ಮೆ ಸ್ಫೋಟಗೊಂಡು ಮೂವರನ್ನು ಬಲಿ ತೆಗೆದುಕೊಂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬೆಳಗಿನ ಮತ್ತೆ ಅದೇ ಜಾಗದಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಆದರೆ, ಕಾರ್ಮಿಕರು ಟೀ ಕುಡಿಯಲು ಹೊರಗಡೆ ಹೋಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಪದೇ ಪದೇ ಬಾಯ್ಲರ್ ಸ್ಟೋಟಗೊಳ್ಳುತ್ತಿರುವ ಕಾರಣಕ್ಕೆ ಬಾಯ್ಲರ್ ನಿರ್ಮಾಣದ ಗುಣಮಟ್ಟದ ಬಗ್ಗೆ ಅನುಮಾನ ಮೂಡಲಾರಂಭಿಸಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಹಿಂದೆ ಪ್ರಾಯೋಗಿಕ ಪರೀಕ್ಷೆ ವೇಳೆ ಒಮ್ಮೆ ಸ್ಫೋಟಗೊಂಡು ಮೂವರನ್ನು ಬಲಿ ತೆಗೆದುಕೊಂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬೆಳಗಿನ ಮತ್ತೆ ಅದೇ ಜಾಗದಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಆದರೆ, ಕಾರ್ಮಿಕರು ಟೀ ಕುಡಿಯಲು ಹೊರಗಡೆ ಹೋಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಪದೇ ಪದೇ ಬಾಯ್ಲರ್‌ ಸ್ಟೋಟಗೊಳ್ಳುತ್ತಿರುವ ಕಾರಣಕ್ಕೆ ಬಾಯ್ಲರ್‌ ನಿರ್ಮಾಣದ ಗುಣಮಟ್ಟದ ಬಗ್ಗೆ ಅನುಮಾನ ಮೂಡಲಾರಂಭಿಸಿದೆ.

ಕಾರ್ಖಾನೆಯಲ್ಲಿ ಬಾಯ್ಲರ್ (ಇಎಸ್‌ಪಿ ವಿಭಾಗದಲ್ಲಿ) ಸ್ಫೋಟಗೊಂಡ ಪರಿಣಾಮ ಇಡಿ ಬಾಯ್ಲರ್ ವ್ಯವಸ್ಥೆ ಹಾಗೂ ಅದರ ಅಳವಡಿಕೆಯ ವಸ್ತುಗಳೆಲ್ಲವೂ ಛಿದ್ರಛಿದ್ರವಾಗಿವೆ. ಇದರಿಂದಾಗಿ ಮುಂದಿನ ಸೀಸನ್‌ನಲ್ಲಿ ಪ್ರತಿದಿನ ನುರಿಯುತ್ತಿದ್ದ 5 ಸಾವಿರ ಟನ್ ಕಬ್ಬು ನುರಿಸುವಿಕೆಗೆ ಹೊಡೆತ ಬಿದ್ದಂತಾಗಿದೆ.

ತಪ್ಪಿದ ಭಾರೀ ಅನಾಹುತ:

ಮುಂದಿನ ಸೀಜನ್‌ಗೆ ಕಬ್ಬು ನುರಿಸಲು ಈಗಿನಿಂದಲೇ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಿದ್ಧತೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ನಿರಂತರವಾಗಿ ಕಾರ್ಮಿಕರ ಕೆಲಸ ನಡೆದಿತ್ತು. ಈ ವೇಳೆ ಕಾರ್ಖಾನೆಯ ಬಾಯ್ಲರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 15 ಕಾರ್ಮಿಕರು ಟೀ‌ ಕುಡಿಯಲು ತೆರಳಿದ್ದ ವೇಳೆ ಬಾಯ್ಲರ್ ಸ್ಫೋಟಗೊಂಡಿದ್ದರಿಂದ ಅದೃಷ್ಟವಶಾತ್ ಎಲ್ಲ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಮಿಕರು ಹೊರಗೆ ಬಂದಿದ್ದ ವೇಳೆ ಬ್ಲಾಸ್ಟ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದಾರೆ.

ಮೂವರನ್ನು ಬಲಿ ಪಡೆದಿದ್ದ ಬಾಯ್ಲರ್:

ಕಾರ್ಖಾನೆಯಲ್ಲಿ ಇದೇ ಮೊದಲಲ್ಲದೇ ಈ‌ ಹಿಂದೆ 2023 ಮಾರ್ಚ್ 4 ರಂದು ಬ್ಲಾಸ್ಟ್ ಬಾಯ್ಲರ್ ಆಗಿತ್ತು. ಆಗ ಮೂವರು ಕಾರ್ಮಿಕರು ಮೃತಪಟ್ಟು, ಇಬ್ಬರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು. ಸುಮಾರು ₹51 ಕೋಟಿ ವೆಚ್ಚದಲ್ಲಿ ಪೂನಾದ ಎಸ್‌ಎಸ್‌ ಎಂಜಿನಿಯರಿಂಗ್ ಕಂಪನಿಯಿಂದ ಅಳವಡಿಸಲಾಗಿದ್ದ 220 ಟನ್ ಸಾಮರ್ಥ್ಯದ ಬಾಯ್ಲರ್ ಅನ್ನು ಪ್ರಯೋಗಿಕ ಪರೀಕ್ಷೆ ನಡೆಸುವ ವೇಳೆ ಮೂವರನ್ನು ಬಲಿ ಪಡೆದಿದ್ದ ಇಲ್ಲಿನ ಬಾಯ್ಲರ್ ಕಳೆದ ವರ್ಷ ದುರಸ್ತಿ ಮಾಡಲಾಗಿತ್ತು. ಆದರೆ ಕಳೆದ ಬಾರಿ ರಿಪೇರಿ ಆಗಿದ್ದ ಸ್ಥಳದಲ್ಲೇ ಮತ್ತೆ ಸ್ಫೋಟವಾಗಿದೆ.

ಕಳಪೆ ಕಾಮಗಾರಿ?:

ಪದೇಪದೇ ಹೀಗೆ ಬಾಯ್ಲರ್ ಸ್ಫೋಟವಾಗುತ್ತಿರುವುದರಿಂದ ಈ‌ ಹಿಂದಿನ ಆಡಳಿತ ಮಂಡಳಿ ಕಳಪೆ ಗುಣಮಟ್ಟದ ಬಾಯ್ಲರ್ ನಿರ್ಮಾಣ ಮಾಡಿತ್ತಾ ಎಂಬ ಸಂಶಯ ಕಾಡುತ್ತಿದೆ. ಪೂನಾ ಮೂಲದ ಎಸ್‌ಎಸ್ ಎಂಜಿನಿಯರಿಂಗ್ ಕಂಪನಿ ₹51 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಬಾಯ್ಲರ್ ಕಾಮಗಾರಿಯಲ್ಲಿ ಏನಾದರೂ ಅವ್ಯವಹಾರ ಆಗಿರಬಹುದು ಎಂದು ಈಗಿನ ಆಡಳಿತ ಮಂಡಳಿ ಆರೋಪಿಸಿದೆ. ಕಾರ್ಖಾನೆಯ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ಅವರ ನೇತ್ರತ್ವದ ಆಡಳಿತ ಮಂಡಳಿ ಬಾಯ್ಲರ್ ನಿರ್ಮಾಣದ ಕಾಮಗಾರಿಯನ್ನು ಎಸ್‌ಎಸ್‌ ಎಂಜಿನಿಯರಿಂಗ್ ಕಂಪನಿಗೆ ಟೆಂಡರ್‌ ನೀಡಿದ್ದರು ಎಂಬ ಆರೋಪವಿದೆ.

ಈ ಮೊದಲು ಪ್ರತಿದಿನ 6 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯದ ಯಂತ್ರಗಳು ಅಳವಡಿಕೆಯಾಗಿದ್ದು, ಕಳೆದ 30 ವರ್ಷಗಳಿಂದಲೂ ಅದೇ ಸಾಮರ್ಥ್ಯದಲ್ಲೇ ಕಬ್ಬು ನುರಿಸಲಾಗುತ್ತಿದೆ. ಹೊಸದಾಗಿ 5 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯದ ಪ್ರಾಜೆಕ್ಟ್ ಸಿದ್ದಪಡಿಸಿದ್ದು, ಅದರಲ್ಲಿ ಪದೇಪದೇ ಸಮಸ್ಯೆ ಎದುರಾಗುತ್ತಿದೆ. ಕಳೆದ 30 ವರ್ಷಗಳಿಂದ ಕಾರ್ಖಾನೆಯ ನಿರ್ವಹಣೆಯನ್ನು ದೆಹಲಿಯ ಐಜಾಕ್ ಕಂಪನಿ ನಿರ್ವಹಣೆ ಮಾಡುತ್ತಿತ್ತು. ಹೊಸದಾದ ಪ್ರಾಜೆಕ್ಟ್ ನಿರ್ವಹಣೆಗೆ ಅವರು ಹೆಚ್ಚಿಗೆ ಹಣ ಕೇಳಿದ್ದರಿಂದ ಅದನ್ನು ಪುನಾ ಮೂಲದ ಎಸ್‌ಎಸ್‌ ಎಂಜಿನಿಯರಿಂಗ್ ಕಂಪನಿಗೆ ಕೊಡಲಾಗಿತ್ತು. ಐಜಾಕ್ ಹಾಗೂ ಎಸ್‌ಎಸ್‌ ಎಂಜಿನಿಯರಿಂಗ್ ಕಂಪನಿ ಇಬ್ಬರೂ ಟರ್ಮ್ಯಾಕ್ಸ್ ಎಂಬ ಕಂಪನಿಯಿಂದಲೇ ನಿರ್ವಹಣೆ ಮಾಡಿಸುತ್ತಾರೆ ಎನ್ನಲಾಗಿದೆ.

---

ಕೋಟ್

ಕಳೆದ ಬಾರಿ ಬಾಯ್ಲರ್ ಸ್ಫೋಟಗೊಂಡಿದ್ದ ಸ್ಥಳದಲ್ಲೇ ಇದೀಗ ಮತ್ತೆ ಸ್ಫೋಟಗೊಂಡಿದೆ. ಹೀಗಾಗಿ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ಅವರ ಆಡಳಿತದಲ್ಲಿ ಆಗಿರುವ ಈ ಕಾಮಗಾರಿ ಕಳಪೆ ಆಗಿದೆಯಾ ಎಂಬ ಅನುಮಾನ ಬಂದಿದೆ. ಆಡಳಿತ ಮಂಡಳಿಯ 10 ಜನ ನಿರ್ದೇಶಕರು ಸೇರಿ ಈ ಕಾಮಗಾರಿಯ ಕುರಿತು ಕಲಂ 64 ಅಡಿಯಲ್ಲಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಸಚಿವರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ₹51 ಕೋಟಿ ವೆಚ್ಚದಲ್ಲಿ ಆಗಿರುವ ಬಾಯ್ಲರ್ ಅಳವಡಿಕೆಯ ಸಂಪೂರ್ಣ ತನಿಖೆ ನಡೆಸಿದ ಬಳಿಕ ಎಲ್ಲವೂ ಗೊತ್ತಾಗಲಿದೆ.

-ಕುಮಾರ ದೇಸಾಯಿ, ಕಾರ್ಖಾನೆ ಅಧ್ಯಕ್ಷ.

---

ಕಾರ್ಖಾನೆಯ ಬಾಯ್ಲರ್‌ನಲ್ಲಿ ಸ್ಫೋಟ ಆಗಿಲ್ಲ, ಬಾಯ್ಲರ್ ಹೊರಭಾಗದಲ್ಲಿರುವ ಇಎಸ್‌ಪಿ (ಹೊಗೆ ಹೊರಗೆ ಹೋಗದಂತೆ ನೋಡುವ ಕಾರ್ಯಭಾಗದಲ್ಲಿ) ಆಗಿದೆ. ಅಷ್ಟಕ್ಕೂ ಈ ಪ್ರೊಜೆಕ್ಟ್ ನಂದಲ್ಲ, ನಾನು 2018 ರಿಂದ 2023ರ ವರೆಗೆ ಅಧ್ಯಕ್ಷನಾಗಿದ್ದೆ. ಆದರೆ 2013ರಿಂದ 2018ರ ಅಗಸ್ಟ್ ವರೆಗೆ ಇದೇ ಕುಮಾರ ದೇಸಾಯಿ ಅವರು ಅಧ್ಯಕ್ಷರಾಗಿದ್ದರು. ಆಗ ನಾನು ಹೊಸ ಪ್ರಾಜೆಕ್ಟ್ ಬೇಡ ಎಂದರೂ ಅದನ್ನೂ ಮೀರಿ 2017ರ ಆಗಸ್ಟ್‌ನಲ್ಲಿ ಕುಮಾರ ದೇಸಾಯಿ ಅವರ ಅವಧಿಯಲ್ಲೇ ಟೆಂಡರ್ ಕೊಟ್ಟಿದ್ದಾರೆ. ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ.

-ಶಶಿಕಾಂತ ಪಾಟೀಲ್, ಮಾಜಿ ಅಧ್ಯಕ್ಷ.

---

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವಘಡದ ಕುರಿತು ನನ್ನ ಗಮನಕ್ಕೆ ಬಂದಿದೆ. ಇದು ಎರಡನೇ ಬಾರಿ ಆಗಿರುವುದರಿಂದ ಅಲ್ಲಿ ನಡೆದಿರುವ ಕಾಮಗಾರಿ ಹಾಗೂ ಘಟನೆ ಬಗ್ಗೆ ಥರ್ಡ್ ಪಾರ್ಟಿ ಮೂಲಕ ತನಿಖೆ ನಡೆಸಲಾಗುವುದು. ತನಿಖೆ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಶಿವಾನಂದ ಪಾಟೀಲ್, ಸಕ್ಕರೆ ಸಚಿವರು.

Share this article