ಬೊಮ್ಮಾಯಿ ಅಭಿವೃದ್ಧಿ ಕಾರ್ಯಗಳು ಶಿಗ್ಗಾಂವಿ ಉಪಚುನಾವಣೆ ಗೆಲುವಿಗೆ ಶ್ರೀರಕ್ಷೆ-ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork | Published : Oct 20, 2024 1:53 AM

ಸಾರಾಂಶ

ಶಿಗ್ಗಾಂವಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾಗಿದ್ದು, ಅವರ ಅಭಿವೃದ್ಧಿ ಕಾರ್ಯಗಳು ಉಪ ಚುನಾವಣೆಯ ಗೆಲುವಿನ ಶ್ರೀರಕ್ಷೆ ಆಗಲಿದೆ. ಇಲ್ಲಿ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗೆ ಜೆಡಿಎಸ್ ಕಾರ್ಯಕರ್ತರು ಸಂಪೂರ್ಣ ಬೆಂಬಲ ಸೂಚಿಸುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಶಿಗ್ಗಾಂವಿ: ಶಿಗ್ಗಾಂವಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾಗಿದ್ದು, ಅವರ ಅಭಿವೃದ್ಧಿ ಕಾರ್ಯಗಳು ಉಪ ಚುನಾವಣೆಯ ಗೆಲುವಿನ ಶ್ರೀರಕ್ಷೆ ಆಗಲಿದೆ. ಇಲ್ಲಿ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗೆ ಜೆಡಿಎಸ್ ಕಾರ್ಯಕರ್ತರು ಸಂಪೂರ್ಣ ಬೆಂಬಲ ಸೂಚಿಸುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಪಟ್ಟಣದ ವಿರಕ್ತಮಠದ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸದಸ್ಯತ್ವ ಅಭಿಯಾನ ಹಾಗೂ ಕಾರ್ಯಕರ್ತರ ಪದಾಧಿಕಾರಿಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಹಗರಣಗಳನ್ನು ಜನರ ಮುಂದಿರಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಉಪ ಚುನಾವಣೆಯ ಮೂರೂ ಕ್ಷೇತ್ರಗಳನ್ನು ಎನ್‌ಡಿಎ ಮೈತ್ರಿಕೂಟ ಗೆಲ್ಲಲಿದೆ ಎಂದರು.ಜೆಡಿಎಸ್ ಪಕ್ಷ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂದು ಹೇಳುತ್ತಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಇವತ್ತಿನ ಸಭೆಯಲ್ಲಿ ಸೇರಿರುವ ಅಪಾರ ಜನ ಬೆಂಬಲ ಗಮನಿಸಿದರೆ ಇಲ್ಲಿರುವ ಜೆಡಿಎಸ್ ಬಲ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಪಕ್ಷ ಸಂಘಟನೆಗೆ ಮತ್ತು ಕಾರ್ಯಕರ್ತರ ಆಶೋತ್ತರಗಳಿಗೆ ಹೆಚ್ಚಿನ ಗಮನ ಕೊಡಲಾಗುವುದು. ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಗೆ ಜೆಡಿಎಸ್ ಅಥವಾ ಬಿಜೆಪಿ, ಎನ್‌ಡಿಎ ಅಭ್ಯರ್ಥಿಗಳಾಗಿ ಯಾರಾದರೂ ಇರಲಿ. ಅವರನ್ನು ನಮ್ಮ ಕಾರ್ಯಕರ್ತರು ಬೆಂಬಲಿಸುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು, ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕಿತ್ತೊಗೆಯಲು ಈ ಚುನಾವಣೆ ಪ್ರಮುಖವಾಗಿದೆ ಎಂದರು.ತಾಲೂಕು ಜೆಡಿಎಸ್ ಅಧ್ಯಕ್ಷ ಈರಣ್ಣಾ ನವಲಗುಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಮಾತನಾಡಿ, ಕಾಂಗ್ರೆಸ್ ಜನರನ್ನು ಗ್ಯಾರಂಟಿಯಲ್ಲಿ ಮುಳುಗಿಸಿ ಗೆದ್ದು ಅಧಿಕಾರ ಅನುಭವಿಸಿದ್ದಾರೆ. ಆ ಗ್ಯಾರಂಟಿ ಯೋಜನೆಗಳು ಜನರಿಗೆ ಮುಟ್ಟದೆ ಛೀಮಾರಿ ಹಾಕುತ್ತಿದ್ದಾರೆ. ಜನತೆ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ಶಿವಣ್ಣವರ, ಸುರೇಶಬಾಬು, ಗುರುರಾಜ ಹುಣಸಿಮರದ, ಡಿ.ಬಿ. ಕಮ್ಮನಮಠ, ಜಿಲ್ಲಾ ಕಾರ್ಯಾಧ್ಯಕ್ಷ ಜೆಎಪಿ ಪಠಾಣ, ಖತಲ್‌ಸಾಬ ಬಣಕಾರ, ಎಂ.ಎಸ್. ಹಣಗಿ, ಆರ್.ಬಿ. ಪಾಟೀಲ, ಹಿರೇಹಣಜಗಿ ನಾಗರಾಜ, ಸಂಜೀವ ಮಣ್ಣನವರ, ಸದಾನಂದ ಯಲಿಗಾರ, ರಾಜು ಮಾಳವಾದೆ, ಬಿ.ಸಿ.ಗುದ್ಲಿಶೆಟ್ಟರ, ನಾಗಪ್ಪ ಚವ್ಹಾಣ, ಸಂಜೀವ ಇಂದೂರ, ವೆಂಕನಗೌಡ ನಾಡಗೌಡ್ರ, ಅಪ್ಪಣ್ಣ ಸವಣೂರ, ಚನ್ನಪ್ಪ ಜಾಡರ, ಶೇಖರಗೌಡ ಹುಬ್ಬಳ್ಳಿ, ನಾಗರಾಜ ಮುತ್ತಳ್ಳಿ, ಸಿದ್ದನಗೌಡ ಪಾಟೀಲ, ಗದಗ, ಹುಬ್ಬಳ್ಳಿ ಜಿಲ್ಲೆಯ ಘಟಕದ ಅಧ್ಯಕ್ಷ ಪಧಾದಿಕಾರಿಗಳು ಪಾಲ್ಗೊಂಡಿದ್ದರು.

Share this article