ಪುಸ್ತಕ ಸಂಸ್ಕೃತಿ ಪ್ರಸಾರ ಅಗತ್ಯ: ಬರಗೂರು

KannadaprabhaNewsNetwork |  
Published : Mar 07, 2024, 01:56 AM IST
Book Release 1 | Kannada Prabha

ಸಾರಾಂಶ

‘ಯುವ ಬರಹಗಾರರ 46 ಚೊಚ್ಚಲ ಕೃತಿಗಳ ಲೋಕಾರ್ಪಣೆ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ’ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಸಂವೇದನೆ, ಸಂಪಾದನೆಯನ್ನು ಸಮತೋಲನ ಪಡಿಸಿಕೊಂಡು ಪುಸ್ತಕ ಸಂಸ್ಕೃತಿ ಪ್ರಸಾರ ಮಾಡುವ ಕೆಲಸ ಆಗಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಯನ ಸಭಾಂಗಣದಲ್ಲಿ ನಡೆದ ‘ಯುವ ಬರಹಗಾರರ 46 ಚೊಚ್ಚಲ ಕೃತಿಗಳ ಲೋಕಾರ್ಪಣೆ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಧ್ಯಮಗಳೆಲ್ಲ ಉದ್ಯಮವಾಗಿ ಹಲವು ವರ್ಷಗಳಾಗಿವೆ. ಪುಸ್ತಕೋದ್ಯಮಕ್ಕೆ ಸಂಪಾದನೆ ಮುಖ್ಯ. ಅದೇ ರೀತಿ ಪುಸ್ತಕ ಸಂಸ್ಕೃತಿಯ ಸಂವೇದನೆಯನ್ನೂ ಬಿಡುವಂತಿಲ್ಲ. ಇವೆರಡನ್ನು ಸಮತೋಲನ, ಸಂಯೋಜನೆ ಮಾಡಿಕೊಂಡು ನಾವು ಪುಸ್ತಕ ಸಂಸ್ಕೃತಿಯ ಪ್ರಸಾರ ಮಾಡಬೇಕು’ ಎಂದರು.

‘ಲೇಖಕರು ಎಷ್ಟೇ ವಯಸ್ಸಾದರೂ ಮಗುವಿನ ಮುಗ್ಧತೆ, ಯೌವ್ವನದ ಕುತೂಹಲವನ್ನು ಸದಾ ಉಳಿಸಿಕೊಂಡಿರಬೇಕು. ಕಲಾಕಾರರು, ಲೇಖಕ ಈ ಗುಣ ಅಳವಡಿಸಿಕೊಂಡಿದ್ದರೆ ಅಹಂಕಾರ ಬರುವುದಿಲ್ಲ, ಚೈತನ್ಯ ಕಳೆದುಕೊಳ್ಳುವುದಿಲ್ಲ. ಅದೇ ರೀತಿ ಕನ್ನಡ ಸಾಹಿತ್ಯ ಪರಂಪರೆಯನ್ನು ಚೆನ್ನಾಗಿ ಅರಿತಿರಬೇಕು. ಇಲ್ಲದಿದ್ದರೆ ಸಾಹಿತ್ಯದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದು ಗೊತ್ತಿರುವುದಿಲ್ಲ’ ಎಂದು ಹೇಳಿದರು.

‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ), ‘ಆನ್‌ಲೈನ್‌ ಬರಹಗಳು ಭಯ ಸೃಷ್ಟಿಸುತ್ತಿವೆ. ಬದುಕಿಗೆ ಸಂಬಂಧವಿಲ್ಲದ, ರೋಚಕ ಸಂಗತಿಗಳು ಬರುತ್ತಿವೆ. ಡಿಜಿಟಲ್ ಮೀಡಿಯಾ ಭಯಗೊಳ್ಳುವ ಸಂಗತಿ ಹೇಳುತ್ತಿದೆಯೇ ವಿನಃ ನಮ್ಮ ಜ್ಞಾನ, ಕತೃತ್ವ ಶಕ್ತಿ, ಆಲೋಚನಾ ಶಕ್ತಿ ಬೆಳೆಸುತ್ತಿಲ್ಲ. ಹೀಗಾಗಿ ಸತ್ಯ ವಿಚಾರ ತಿಳಿಯಲು ಕೃತಿಗಳನ್ನೇ ನೆಚ್ಚಿಕೊಳ್ಳಬೇಕಿದೆ’ ಎಂದರು.

‘ಸಾಹಿತ್ಯ ವಲಯಕ್ಕೆ ಹೊಸ ಲೇಖಕರನ್ನು ಸೃಷ್ಟಿಸುವ ಜೊತೆಗೆ ಹೊಸ ಓದುಗರನ್ನು ರೂಪಿಸುವ ಸವಾಲೂ ಇದೆ. ಒಂದು ಶಾಲೆಯಿಂದ ಒಬ್ಬ ಓದುಗ ಬಂದರೆ ಸಾಕು ಎಂಬ ಪರಿಸ್ಥಿತಿ ಈಚೆಗೆ ನಿರ್ಮಾಣವಾಗಿದೆ. ಇನ್ನು, ಲೇಖಕ ವಿಮರ್ಶಕರನ್ನು ಹುಡುಕಬೇಕೆ ವಿನಃ ಹೊಗಳುವವರನ್ನಲ್ಲ. ವಿಮರ್ಷೆ ನಮ್ಮನ್ನು ಬೆಳೆಸುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ‘ಓದುವಿಕೆ ಪರಿಪೂರ್ಣತೆಯತ್ತ ಕರೆದೊಯ್ಯುತ್ತದೆ. ದಿನಪತ್ರಿಕೆಗಳ ಬರಹ ಬದುಕಿಗೆ ಹತ್ತಿರುವಿರುತ್ತದೆ. ಸಾಹಿತ್ಯದ ಡಿಜಿಟಲೀಕರಣದ ಜತೆಗೆ ಕೃತಿ ರೂಪದಲ್ಲಿ ತರುವುದಕ್ಕೆ ಒತ್ತು ಕೊಡಬೇಕಿದೆ. ಯುವ ಪೀಳಿಗೆಗೆ ಓದುವಿಕೆಯತ್ತ ಸೆಳೆಲು ಪ್ರಾಧಿಕಾರ, ಇಲಾಖೆಯಿಂದ ಯೋಜನೆ ಹಮ್ಮಿಕೊಳ್ಳುವುದಾಗಿ’ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಮಾತನಾಡಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು