ಹೊಸ ವರ್ಷಾಚರಣೆಗೆ ಪ್ರವಾಸಿ ತಾಣಗಳು ಬುಕಿಂಗ್‌ ಶುರು

KannadaprabhaNewsNetwork | Published : Dec 10, 2023 1:30 AM

ಸಾರಾಂಶ

ಗೋಕರ್ಣದ ಮುಖ್ಯ ಕಡಲತೀರ, ಓಂಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್‌ಗಳಲ್ಲಿ ಜನಸಂದಣಿ ಆಗುವ ನಿರೀಕ್ಷೆ ಇದೆ. ದಾಂಡೇಲಿ, ಜೋಯಿಡಾದ ಕಾಡು, ರಿವರ್ ರ್‍ಯಾಪ್ಟಿಂಗ್ ಕೂಡ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ.

ಕಾರವಾರ:

ಹೊಸ ವರ್ಷದ ಹರ್ಷಾಚರಣೆ, ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೆ ಹೊಟೇಲ್, ರೆಸಾರ್ಟ್‌ಗಳು ಬುಕಿಂಗ್ ಆಗಿವೆ.ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಸಾಕಷ್ಟಿವೆ. ಆದರೆ ಗೋಕರ್ಣ ಹಾಗೂ ಮುರ್ಡೇಶ್ವರಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ವೀಕೆಂಡ್ ಹಾಗೂ ಸಾಲು ಸಾಲಾಗಿ ರಜೆ ಬಂದಲ್ಲಿ ಪ್ರವಾಸಿಗರಿಂದ ಈ ಎರಡು ತಾಣಗಳು ಭರ್ತಿಯಾಗುತ್ತವೆ. ಈ ಬಾರಿ ಹೊಸ ವರ್ಷಾಚರಣೆಗೆ ಜಿಲ್ಲೆಯ ಪ್ರವಾಸಿ ತಾಣಗಳು ಭರ್ತಿಯಾಗುವ ನಿರೀಕ್ಷೆ ಇದೆ. ಏಕೆಂದರೆ ಈಗಾಗಲೆ ಗೋಕರ್ಣ ಹಾಗೂ ಮುರ್ಡೇಶ್ವರಗಳಲ್ಲಿ ಹೊಟೇಲ್, ರೆಸಾರ್ಟ್, ಕಾಟೇಜಗಳ ಮುಂಗಡ ಬುಕಿಂಗ್ ಭರದಿಂದ ನಡೆಯುತ್ತಿವೆ. ಮುರ್ಡೇಶ್ವರದಲ್ಲಿ ಸ್ಕೂಬಾ ಡೈವಿಂಗ್ ಪ್ರಮುಖ ಆಕರ್ಷಣೆಯಾಗಿದೆ. ಅದರೊಟ್ಟಿಗೆ ಈಚೆಗೆ ಪ್ಯಾರಾಸೇಲಿಂಗ್ ಹಾಗೂ ಸೀ ವಾಕ್ (ತೇಲುವ ಜೆಟ್ಟಿ) ಕೂಡ ಸೇರ್ಪಡೆಯಾಗಿದೆ. ಮುರ್ಡೇಶ್ವರದ ಓಶಿಯನ್ ಅಡ್ವೆಂಚರ್ಸ್ ಈ ಪ್ರವಾಸಿ ಆಕರ್ಷಣೆಯನ್ನು ಆರಂಭಿಸಿದೆ. ಪ್ರವಾಸಿಗರಿಂದ ಈಗಾಗಲೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಗೋಕರ್ಣದ ಮುಖ್ಯ ಕಡಲತೀರ, ಓಂಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್‌ಗಳಲ್ಲಿ ಜನಸಂದಣಿ ಆಗುವ ನಿರೀಕ್ಷೆ ಇದೆ. ದಾಂಡೇಲಿ, ಜೋಯಿಡಾದ ಕಾಡು, ರಿವರ್ ರ್‍ಯಾಪ್ಟಿಂಗ್ ಕೂಡ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಡಿ. 23ರಿಂದ ಸಾಲಾಗಿ ರಜೆ ಬಂದಿರುವುದರಿಂದ ಪ್ರವಾಸಿಗರು 23ರಿಂದಲೆ ಬುಕಿಂಗ್ ಮಾಡುತ್ತಿದ್ದಾರೆ. ಕ್ರಿಸ್ ಮಸ್ ರಜೆ ಬಂದಿರುವುದು ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಲಿದೆ. ಗೋವಾದಲ್ಲಿ ರೆಸಾರ್ಟ್‌, ಹೊಟೇಲ್‌ಗಳು ಸಿಗದೆ ಇದ್ದವರು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಈ ಕಾರಣದಿಂದಲೂ ಜಿಲ್ಲೆಯಲ್ಲಿ ಜನಜಂಗುಳಿ ಹೆಚ್ಚಲಿದೆ.ದಾಂಡೇಲಿ, ಯಾಣ, ವಿಭೂತಿ ಜಲಪಾತ, ಮಾಗೋಡ, ಉಂಚಳ್ಳಿ ಫಾಲ್ಸ್‌ಗಳು, ಸಹಸ್ರಲಿಂಗ, ಉಳವಿ, ಸಿಂಥೇರಿ ರಾಕ್ಸ್ ಹೀಗೆ ವಿವಿಧ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಹೊಸ ವರ್ಷಾಚರಣೆಗೆ ಪ್ರವಾಸಿ ತಾಣಗಳು ಸಜ್ಜಾಗುತ್ತಿವೆ. ಪ್ರವಾಸಿಗರಿಗಾಗಿ ವಿವಿಧ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಸ್ಕೂಬಾ ಡೈವಿಂಗ್‌ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಮಾಡುತ್ತಿದ್ದಾರೆ. ಪ್ಯಾರಾಸೇಲಿಂಗ್ ಹಾಗೂ ಸೀ ವಾಕ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ನೇತ್ರಾಣಿ ಅಡ್ವೆಂಚರ್ಸ್‌ ಗಣೇಶ ಹರಿಕಂತ್ರ ಹೇಳಿದರು.

Share this article