ಶಾಲಾ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ । ಶಿಕ್ಷಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿವಿಮಾತು
ಕನ್ನಡಪ್ರಭ ವಾರ್ತೆ ಮುನಿರಾಬಾದಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು, ಮಕ್ಕಳಲ್ಲಿ ಬೇಧ-ಭಾವವನ್ನು ಮಾಡದೇ ಅವರನ್ನು ಹುರಿದುಂಬಿಸುವ ಕೆಲಸ ಮಾಡಿ ಅವರ ಮನೋಬಲವನ್ನು ಹಿಗ್ಗಿಸಬೇಕು. ಇದರಿಂದ ಮಕ್ಕಳ ಶ್ಯೆಕ್ಷಣಿಕ ಗುಣಮಟ್ಟ ಹೆಚ್ಚಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.ಇಲ್ಲಿಗೆ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ "ಬದುಕು ಬದಲಿಸಲು ಒಂದು ಮಾತು " ಮುನಿರಾಬಾದ ಕ್ಲಸ್ಟರ್ ಮಟ್ಟದ ಗ್ರಾಮೀಣ ಭಾಗದ ಶಾಲಾ ಮಕ್ಕಳೊಂದಿಗೆ ಸಂವಾದ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮನಾಗಿ ನೋಡದೇ ಅವರಲ್ಲಿ ಬೇಧ-ಭಾವ ಮೂಡಿಸುತ್ತಿರುವುದು ದುರದೃಷ್ಟಕರ ವಿಷಯ. ಜಾಣರಾಗಿರುವ ಮಕ್ಕಳನ್ನು ಒಂದು ರೀತಿಯಾಗಿ, ಸಾಮಾನ್ಯ ಮಕ್ಕಳನ್ನು ಒಂದು ರೀತಿಯಾಗಿ ನೋಡುವುದು ಸರಿಯಲ್ಲ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಕೀಳು ಭಾವನೆ ಉಂಟಾಗುತ್ತದೆ. ಇದರಿಂದ ಮಕ್ಕಳ ಮನೋಬಲ ಕುಗ್ಗಿ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಕರು ಹೀಗೆ ಮಾಡುವುದನ್ನು ಬಿಟ್ಟು ಮಕ್ಕಳಲ್ಲಿ ಸಮಾನತೆಯ ಭಾವನೆ ಬೆಳಸಬೇಕು. ಜೊತೆಗೆ ಅವರ ಮನೋಬಲವನ್ನು ಹಿಗ್ಗಿಸುವ ಕಾರ್ಯ ಮಾಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.ಕೇವಲ ಖಾಸಗಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ ಎನ್ನುವ ಭಾವನೆಯನ್ನು ಸರ್ಕಾರಿ ಶಾಲೆಯ ಮಕ್ಕಳು ತಮ್ಮ ಮನಸ್ಸಿನಿಂದ ತೆಗೆದುಹಾಕಬೇಕು. ಸರ್ಕಾರಿ ಶಾಲೆಯ ಶಿಕ್ಷಕರು ಖಾಸಗಿ ಶಾಲೆಯ ಶಿಕ್ಷಕರಿಗಿಂತ ಹೆಚ್ಚು ವಿದ್ಯಾವಂತರು ಹಾಗೂ ಪ್ರತಿಭಾವಂತಾಗಿದ್ದಾರೆ. ಅವರು ಶಾಲಾ ಮಕ್ಕಳಲ್ಲಿ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪಾಲಕರು ತಮ್ಮ ತಮ್ಮ ಮಕ್ಕಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬುದು ಪಾಲಕರ ಆಶಯವಾಗಿದೆ. ಮಕ್ಕಳು ಕಷ್ಟಪಟ್ಟು ಓದಿ ತಮ್ಮ ಪಾಲಕರ ಆಸೆಯನ್ನು ನೆರವೇರಿಸಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಮುನಿರಾಬಾದ ಕ್ಲಸ್ಟರ್ ಮಟ್ಟದ 500ಕ್ಕೂ ಹೆಚ್ಚು ಶಾಲಾ ಮಕ್ಕಳು ಸಮಾರಂಭದಲ್ಲಿ ಭಾಗವಹಿಸಿದರು.
ವೇದಿಕೆಯ ಮೇಲೆ ಹೊಸಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಬಗನಾಳ, ಉಪಾಧ್ಯಕ್ಷೆ ಲಕ್ಷ್ಮೀ ಗ್ಯಾನವ್ವ, ಡಿ.ಎಸ್.ಪಿ. ಮುತ್ತಣ್ಣ, ಸಿಪಿಐ ಸುರೇಶ, ಮುನಿರಾಬಾದ ಠಾಣಾ ಪಿ.ಎಸ್.ಐ. ಸುನೀಲ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ, ಮುಖ್ಯಶಿಕ್ಷಕಿ ಮಲಪ್ರಭ ಹಾಲಕುಂಟೆ, ಪಿ.ಡಿ.ಓ. ವೀರೇಶ, ಅಮ್ಮ ಟ್ರಸ್ಟ್‌ನ ಅಧ್ಯಕ್ಷ ಸದ್ದಾಮ್ ಹುಸೇನ್ ಕಳ್ಳಿಮನಿ ಉಪಸ್ಥಿತರಿದ್ದರು.