ಭಕ್ತರ ಪವಾಡ ಶಕ್ತಿಯಾಗಿದ್ದ ಬ್ರಹ್ಮಾನಂದ ಶಿವಯೋಗಿಗಳು

KannadaprabhaNewsNetwork | Published : Dec 29, 2024 1:18 AM

ಸಾರಾಂಶ

ಡಿ.೨೯ರಂದು ಬೆಳಗ್ಗೆ ೯ಕ್ಕೆ ಪ್ರಣವ ದ್ವಜಾರೋಹಣ, ಗುರುದೇವರ ಉತ್ಸವ, ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ, ಕುಂಬ ಕಳಸೋತ್ಸವ ಜರುಗುವುದು.

ಶಿವಾನಂದ.ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಾಡಿನ ಜನತೆಗೆ ಅಧ್ಯಾತ್ಮದ ಮಧುರಾಮೃತ ಉಣಬಡಿಸಿದ, ಬದುಕು ಬೇಡವಾದವರಿಗೆ, ಬರಡಾದವರಿಗೆ ತಮ್ಮ ತಪಃಶಕ್ತಿ ಮೂಲಕ ಎಲ್ಲವನ್ನು ಸುಖಾಂತ್ಯಗೊಳಿಸಿದ ಶಿವಸ್ವರೂಪಿ ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳು ರಬಕವಿ ನಗರದ ಪವಾಡ ಶಕ್ತಿಯಾಗಿದ್ದರು.

ಬ್ರಹ್ಮಾನಂದ ಶಿವಯೋಗಿಗಳು ಕ್ರಿ.ಶ.೧೮೬೮ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆಯಲ್ಲಿ ಅನ್ನದಾನ ಶಿವಯೋಗಿಗಳ ಕೃಪಾಶೀರ್ವಾದದಿಂದ ಕೃಷಿಕಾಯಕದ ಹುಲ್ಯಾಳ ಮನೆತನದ ಶಿವದಂಪತಿ ಉದರದಲ್ಲಿ ಜನಿಸಿದರು. ವೀರಪ್ಪ ನಾಮಾಂಕಿತರಾಗಿ ಬಾಲ್ಯದಲ್ಲಿಯೇ ಅನೇಕ ಲೀಲೆ ತೋರುತ್ತ, ವಿದ್ಯಾಭ್ಯಾಸ ಮಾಡುತ್ತ ಮುಲ್ಕಿ (೭ನೇ ವರ್ಗ) ಪರೀಕ್ಷೆ ಪಾಸಾದರು. ಕೂಡಲೇ ಗದಗ ಮುನ್ಸಿಪಲ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಅವರು ಬೋಧನಾ ಕಾರ್ಯದಲ್ಲಿ ನಿರತರಾದರೂ ಮನವು ಅಧ್ಯಾತ್ಮದತ್ತ ಹಾತೊರೆಯುತ್ತಿತ್ತು. ಶಿವಾನಂದ ಮಠದ ಸೇವಕರಾಗಿ ತೋಟದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸತೊಡಗಿದರು.

ಒಮ್ಮೆ ಶಿವಾನಂದರು ನಿಜಗುಣ ಶಿವಯೋಗಿಗಳ ಪಡೆವೆ ನೀನೆಂದಿಗೆ ಪರಮುಕ್ತಿ ಸುಖವನು, ಕೆಡುವ ಕಾಯದ ಮೋಹವನು ಮಾಡಿ ಮನುಜ ಎಂಬ ವಿಷಯ ಕುರಿತು ಪ್ರವಚನ ನೀಡುತ್ತಿದ್ದರು. ಇದು ವೀರಪ್ಪನ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿತು ಮನಸ್ಸು ಪರಮಾರ್ಥದತ್ತ ಹೊರಳಿತು. ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. ಶ್ರೀ ಮಠದ ಸೇವೆಗೈದರು. ಅವರ ಆಧ್ಯಾತ್ಮದ ಹಂಬಲ ಅಷ್ಟಕ್ಕೆ ತಣಿಯಲ್ಲಿಲ್ಲ. ಸದ್ಗುರು ಶಿವಾನಂದರಿಂದ ಸನ್ಯಾಸ ಹಾಗೂ ಧರ್ಮೋಪದೇಶ ದೀಕ್ಷೆ ಪಡೆದು ಬ್ರಹ್ಮಾನಂದರಾದರು. ಗುರುಗಳಿಂದ ಅಪ್ಪಣೆ ಪಡೆದು ದೇಶ ಸಂಚಾರಕ್ಕೆ ಹೊರಟರು. ೧೨ ಜ್ಯೋತಿರ್ಲಿಂಗಗಳ ದರ್ಶನ ಪಡೆದರು.

ಶ್ರೀಗಳು ಸಂಚರಿಸಿದಲ್ಲೆಲ್ಲಾ ಮಠಗಳ ನಿರ್ಮಾಣ:

ಸದ್ಭಕ್ತರ ಒತ್ತಾಸೆಯಂತೆ ಪ್ರವಚನ ನೀಡಲು, ಜಮಖಂಡಿ ತಾಲೂಕಿನ ರಬಕವಿ ಬನಹಟ್ಟಿ ಅವಳಿ ನಗರಕ್ಕೆ ಆಗಮಿಸಿದರು. ಅವಳಿ ನಗರದ ರಾಂಪುರ ಗ್ರಾಮದ ನೀಲಕಂಠೇಶ್ವರ ಮಠದಲ್ಲಿ ಪ್ರವಚನ ಪ್ರಾರಂಭಿಸಿದರು. ಒಮ್ಮೆ ಅವರ ವಾಣಿಯನ್ನು ಕೇಳಿದರೆ ಸಾಕು, ಪರಮ ಭಕ್ತರಾಗುತ್ತಿದ್ದರು. ಸಮೀಪದ ತೇರದಾಳ, ಪರಮಾನಂದವಾಡಿಯಲ್ಲಿಯೂ ಪ್ರವಚನ ನೀಡಿದರು. ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ, ಮುಟ್ಟಿದ ಜಲವೇ ಪಾವನ ತೀರ್ಥ ಎನ್ನುವಂತೆ ಎಲ್ಲೆಲ್ಲಿ ಸಂಚರಿಸಿದರೋ ಅಲ್ಲೆಲ್ಲಾ ಮಠಗಳು ನಿರ್ಮಾಣವಾದವು. ಅವರಲ್ಲಿ ಜಾತಿ-ಮತ-ಪಂಥಗಳ ಭೇದವೇ ಇರಲಿಲ್ಲ. ಎಲ್ಲ ಧರ್ಮಿಯರೂ ಅವರ ದರ್ಶನಾಶೀರ್ವಾದಕ್ಕಾಗಿ ಕಾಯುತ್ತಿದ್ದರು.

೧೯೭೬ರಲ್ಲಿ ಮೈಸೂರಿನ ಅರಮನೆಯ ಪ್ರಾಂಗಣದಲ್ಲಿ ನಡೆದ ಧರ್ಮವಿಚಾರ ಪರಿಷತ್ತಿನ ಅಧ್ಯಕ್ಷತೆ ವಹಿಸಿ ಮನುಷ್ಯನ ಮನಸ್ಸಿಗೆ ಅಗಾಧ ಶಕ್ತಿಯಿದೆ. ನಾವು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲೆವು. ನೀವು ನನಗೆ ಸಾಯಲು ಹೇಳಿದರೆ ಈ ಕ್ಷಣದಲ್ಲಿಯೇ ದೇಹ ತ್ಯಜಿಸುವೆ ಅಥವಾ ಸಹಸ್ರ ವರ್ಷ ಬದುಕಿರೆಂದರೆ ಬದುಕಬಲ್ಲೆ ಎಂದಾಗ ಸಭಿಕರೆಲ್ಲ ಬೆರಗಾದರು. ಅವರ ವಾಣಿಯ ಮಹತಿಯೇ ಅಂತಹುದು.

ಹೀಗೆ ಶ್ರೀಗಳು ೧೦೮ ವರ್ಷ ಬದುಕಿ ಅನಂತ ಲೀಲೆಗೈಯುತ್ತ ಬೇಡಿ ಬಂದ ಸಹಸ್ರಾರು ಭಕ್ತರನ್ನುದ್ಧರಿಸುತ್ತ, ರೋಗ- ರುಜಿನಗಳನ್ನು ಪರಿಹರಿಸುತ್ತ, ಕಷ್ಟದಲ್ಲಿದ್ದವರಿಗೆ ಅಭಯ ಹಸ್ತ ನಿಡುತ್ತ ಭಕ್ತರ ಹೃನ್ಮನ ತಣಿಸಿದರು. ಖಾಲಿ ಕೊಡಕ್ಕೆ ಕೈ ಹಚ್ಚಿದಾಗ ನೀರು ತುಂಬಿದ್ದು, ರಬಕವಿಯ ಭಕ್ತರು ಮಳೆ ಇಲ್ಲದೇ ಕಂಗಾಲಾದಾಗ ಧೋ ಎಂದು ಮಳೆ ಸುರಿಸಿದ್ದುದು ಪವಾಡವೇ ಸರಿ. ಶ್ರೀಗಳು ತ್ರಿಕಾಲ ಜ್ಞಾನಿಗಳಾಗಿದ್ದರು. ಅವರ ನಿಧನಾ ನಂತರ ಸಂಶಿಯಲ್ಲಿಯೇ ಅಂತ್ಯಕ್ರಿಯೆ ಜರುಗಬೇಕೆಂದು ಅಲ್ಲಿಯ ಜನ ಒಪ್ಪಿಗೆ ಪಡೆದುಕೊಂಡರು. ಆಗ ರಬಕವಿಯ ಭಕ್ತರು ವಿಚಲಿತರಾದಗ ಅವ್ರು ನನ್ನ ದೇಹಾ ಮಾತ್ರ ಒಯ್ಯತಾರ, ನಾ ರಬಕವಿಯಾಗ ಇರತೇನಿ, ನಿಮಗ ಬೇಕಾದರ ತಗೋ ಇದನ್ನ ಅಂತ ಒಂದು ಹಲ್ಲನ್ನೇ ಕಿತ್ತುಕೊಟ್ಟಿದ್ದು ಪವಾಡವೇೆ ಸರಿ. ೨೯/೦೪/೧೯೭೬ರಂದು ಗುರುವಾರ ಪ್ರತ:ಕಾಲ ಶಿವನಾಮಸ್ಮರಣೆ ಮಾಡುತ್ತ ಶಿವಲೋಕವಗೈದರು.

ಬ್ರಹ್ಮಾನಂದ ಶ್ರೀಗಳ ಸದಿಚ್ಛೆಯ ಮೇಲೆ ಅವರ ಸನ್ನಿಧಾನದಲ್ಲಿ ಬೆಳೆದ ಶ್ರೀ ಸಿದ್ಧೇಶ್ವರ ಸ್ವಾಮಿಗಳಿಗೆ ಉತ್ತರಾಧಿಕಾರಿಯನ್ನಾಗಿಸಿ ೧೦/೦೫/೧೯೭೬ ರಂದು ಮಠದ ಸಂಪೂರ್ಣ ಜವಾಬ್ದಾರಿ ಭಕ್ತಾದಿಗಳು ವಹಿಸಿಕೊಟ್ಟರು. ಗುರುಗಳು ತೋರಿದ ದಾರಿಯಲ್ಲಿ ಮುನ್ನಡೆದು ಶ್ರೀಮಠದ ಕೀರ್ತಿ ಹೆಚ್ಚಿಸಿದರು. ಸದ್ಗುರು ಬ್ರಹ್ಮಾನಂದರು ತಪವಗೈದ ಸಂಶಿ, ರಾಯಾಪುರ, ರಬಕವಿ, ತೇರದಾಳ, ಪರಮಾನಂದವಾಡಿಗಳಲ್ಲಿ ದಿವ್ಯ ಮಂದಿರಗಳನ್ನು ನಿರ್ಮಿಸಿ ಭಕ್ತಿಕೇಂದ್ರಗಳನ್ನಾಗಿಸಿದರು. ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಕ್ಷೇತ್ರದಲ್ಲಿ ಸೇವೆಗೈದು ೦೬/೦೭/೨೦೦೬ರಂದು ಶಿವಾಧೀನರಾದರು. ಅವರ ದಿವ್ಯ ಪ್ರಭೆ ಇಂದಿಗೂ ಬೆಳಗುತ್ತಿದೆ.

ನಂತರದ ದಿನಗಳಲ್ಲಿ ಈಗ ಶ್ರೀಮಠದ ಉತ್ತರಾಧಿಕಾರಿಗಳನ್ನಾಗಿ ೨೯/೦೨/೨೦೧೨ರಂದು ಬಸವಲಿಂಗ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ಜರುಗಿಸಲಾಯಿತು. ಪೀಠಾಧಿಕಾರಿಗಳಾದ ಬಳಿಕ ಶ್ರೀ ಗುರುಸಿದ್ಧೇಶ್ವರರೆಂದು ನೂತನ ನಾಮಾಂಕಿತರಾಗಿ ಸದ್ಗುರು ಬ್ರಹ್ಮಾನಂದರು ಮತ್ತು ಸಿದ್ಧೇಶ್ವರರ ಸದಿಚ್ಛೆಯಂತೆ ಯೋಗ, ತತ್ವಚಿಂತನೆ, ಲಿಂಗಧಾರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಜನಾನುರಾಗಿಯಾಗಿದ್ದಾರೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಂಸ್ಕೃತಿಕ ಮಹೋತ್ಸವಗಳ ಸಂಗಮ ಇಲ್ಲಿ ಜರುಗುತ್ತಿದೆ. ಇಂದಿನ ಆಧುನಿಕ ಸಮಾಜದ ಅಭಿವೃದ್ಧಿಗೆ ಪೂರಕವಾದ ಹಲವು ಹತ್ತು ಸಾರ್ಥಕ ಕಾರ್ಯಕ್ರಮಗಳು ಮೇಳೈಸುತ್ತಿವೆ. ಗುರು ಪರಂಪರೆಯ ದ್ಯೋತಕವಾಗಿ ಪ್ರತಿ ವರ್ಷ ಶ್ರಾವಣ ಮಾಸ ಹಾಗೂ ಮಕರ ಸಂಕ್ರಾಂತಿಯಂದು ಪ್ರವಚನ ಹಾಗೂ ವಿಶೇಷ ಕಾರ್ಯಕ್ರಮ ಸಂಸ್ಮರಣೋತ್ಸವಗಳು ಜರಗುತ್ತಿವೆ. ಜ್ಞಾನದಾಸೋಹದ ಮೂಲಕ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೊಗುತ್ತಿರುವ ಶ್ರೀ ಗುರುಸಿದ್ಧೇಶ್ವರರ ಕೆಲಸ ನಿಜಕ್ಕೂ ಶ್ಲಾಘನೀಯ .

ಜಯಂತಿ ನಿಮಿತ್ತ ವಿಶೇಷ ಕಾರ್ಯಕ್ರಮಗಳು

ಗುರುದೇವ ಬ್ರಹ್ಮಾನಂದ ಆಶ್ರಮದ ಮೂಲ ಗುರು ಶ್ರೀ ಬ್ರಹ್ಮಾನಂದ ಶಿವಯೋಗಿಗಳ ೧೫೯ನೇ ಶ್ರೀ ಗುರುದೇವ ಸಿದ್ಧೇಶ್ವರ ಶ್ರೀಗಳ ೮೧ನೇ, ಹಾಗೂ ಮೂರನೇ ಪೀಠಾಧ್ಯಕ್ಷರಾದ ಶ್ರೀ ಗುರುಸಿದ್ಧೇಶ್ವರ ಶ್ರೀಗಳ ದ್ವಾದಶ ಪೀಠಾರೋಹಣ, ಗುರು ಮಂದಿರದ ಕಳಸಾರೋಹಣ, ಗುರುಭವನ ಲೋಕಾರ್ಪಣೆ, ಗ್ರಂಥಗಳ ಲೋಕಾರ್ಪಣೆ ಹಾಗೂ ಸಂಕ್ರಮಣ ಮಹೋತ್ಸವ ಡಿ.೨೯ ರಿಂದ ಜ.೧೪ರವೆಗೆ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.

ಡಿ.೨೯ರಂದು ಬೆಳಗ್ಗೆ ೯ಕ್ಕೆ ಪ್ರಣವ ದ್ವಜಾರೋಹಣ, ಗುರುದೇವರ ಉತ್ಸವ, ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ, ಕುಂಬ ಕಳಸೋತ್ಸವ ಜರುಗುವುದು. ೩೦ರಂದು ಗುರುದೇವರ ಕಾರ್ತಿಕೋತ್ಸವ, ಅನುಭಾವದಂಗಳ-೧೪೫, ಮಹಾತ್ಮರ ಪ್ರವಚನ ಪ್ರಾರಂಭೋತ್ಸವ, ಜ. ೧ಗುಕುದೇವ ಮಂದಿರದ ಕಳಸಾರೋಹಣ ಹಾಗೂ ಧರ್ಮಸಭೆ. ಜ.೨ ಗುರುಭವನ ಲೋಕಾರ್ಪಣೆ ಶ್ರೀಶೈಲ ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಧರ್ಮಸಭೆ, ನಂತರ ನಿರಂತರ ಪ್ರವಚನ ಆಧ್ಯಾತ್ಮಿಕ ಚಟುವಟಿಕೆ, ಜ.೧೪ ರಂದು ಪೀಠಾರೋಹಣ ಹಾಗೂ ಸಂಕ್ರಮಣ ಮಹೋತ್ಸವ ಜರುಗಲಿದೆ.

ನಾಡಿನ ಅನೇಕ ಹರಗುರುಚರಮೂರ್ಥಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ತಾವುಗಳು ಹೆಚ್ಚುನ ಸಂಖ್ಯೆಯಲ್ಲಿ ಭಾಗವಹಿಸಿ ಆ ಬ್ರಹ್ಮಾನಂದರ ಸೇವೆಯಲ್ಲಿ ಅಣಿಯಾಗಿರಿ ಎಂದು ಶ್ರೀಮಠದ ಈಗಿನ ಪಿಠಾಧೀಪತಿಗಳಾದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದ್ದಾರೆ.

ಶೀವಯೋಗಿಗಳ ಅಮೃತವಾಣಿ:

• ಭಕ್ತಿ, ಜ್ಞಾನ, ವೈರಾಗ್ಯ ಅಂದ್ರ ಸತ್ಸಂಗ ನುಡಿಯುವಲ್ಲಿ ಬಂದು ಕೂತರ ಅದ ಭಕ್ತಿ, ತಲಿ ಒಳಗಿರೋದನ್ನು ಒಂದಿಷ್ಟು ಮರತು ಸದ್ವಿಚಾರಗಳನ್ನು ಕೇಳಿತಿರೆಲಾ ಅದ ಜ್ಞಾನ, ಮನಿಮಾರು ಮರತು ಕೊಡತಿರೆಲಾ ಅದ ವೈರಾಗ್ಯ.

• ೮೪ ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜೀವಕ್ಕ ಮತ್ರಾ ಮೋಕ್ಷನತಕ್ಕಂತದನ್ನು ಪಡಿಬಹುದು. ಅದನ ಮರತು ಜಾತಿ ಕುಲ ಗೋತ್ರ ಅಂತ್ಹೇಳಿ ಬಡದಾಡತೀವಲ್ಲಾ ನಾವು ಇದು ಯಾಕ ಬಂತು, ಎಲ್ಲಿಂದ ಬಂತು, ಯಾವ ಕಾರಣಕ್ಕ ಬಂತು ಮುಂದ ಎಲ್ಲಿಗೆ ಹೋಗತ್ತದ ಅಂತಾ ವಿಚಾರ ಮಾಡಬೇಕು.

Share this article